ಬೆಳಗಾವಿ ಎಪಿಎಂಸಿಯಲ್ಲಿ ವಿಶೇಷ ಪೂಜೆ ಬೆಳಗಾವಿ:ಬೆಳಗಾವಿ ಎಪಿಎಂಸಿಯಲ್ಲಿ ಮೊದಲಿನ ಹಾಗೆ ಮತ್ತೆ ವ್ಯಾಪಾರ ವಹಿವಾಟು ನಡೆಯಬೇಕೆಂದು ಇಲ್ಲಿನ ವ್ಯಾಪಾರಿಗಳು ಮತ್ತು ರೈತರು ದೇವರ ಮೊರೆ ಹೋಗಿದ್ದಾರೆ. ಹೋಮ-ಹವನ, ನವಗ್ರಹ ಪೂಜೆ ಮಾಡುವ ಮೂಲಕ ತಮ್ಮ ಇಷ್ಟಾರ್ಥ ಈಡೇರಿಸುವಂತೆ ದೇವರಲ್ಲಿ ಪ್ರಾರ್ಥಿಸಿದರು.
ಎಪಿಎಂಸಿ ಮಳಿಗೆಯೊಂದರಲ್ಲಿ ಪೂಜೆ ಮಾಡಿದ ವ್ಯಾಪಾರಿಗಳು ಮತ್ತು ರೈತರಿಗೆ ಸ್ಥಳೀಯ ಭಜನಾ ಮಂಡಳಿ ಕಲಾವಿದರು ಕೂಡ ಸಾಥ್ ಕೊಟ್ಟರು. ಶ್ರದ್ಧಾ ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿ, ಶೀಘ್ರವೇ ಸರ್ಕಾರಿ ಎಪಿಎಂಸಿ ಮೊದಲಿನಂತಾಗಲಿ ಎಂದು ಕೋರಿದರು.
ಇದೇ ವೇಳೆ ಮಾತನಾಡಿದ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಮುಖಂಡ ಪ್ರಕಾಶ ನಾಯಿಕ, ನೂರಾರು ಕೋಟಿ ರೂ. ಖರ್ಚು ಮಾಡಿ ಕೆಲವೇ ಕೆಲವು ರಾಜಕೀಯ ಜನಪ್ರತಿನಿಧಿಗಳ ಕುಮ್ಮಕ್ಕಿನಿಂದಾಗಿ ಯಾರು ಖಾಸಗಿ ಎಪಿಎಂಸಿ ವಿರೋಧ ಮಾಡಿದ್ದರೋ, ಅವರೇ ಅದಕ್ಕೆ ಶಾಮೀಲಾಗಿ ಸರ್ಕಾರಿ ಎಪಿಎಂಸಿ ಬಂದ್ ಮಾಡುವ ಹುನ್ನಾರ ಮಾಡಿದ್ದರು. ಇದರಿಂದಾಗಿ ಇಲ್ಲಿ ಸಂಪೂರ್ಣವಾಗಿ ವ್ಯವಹಾರ ಸ್ತಬ್ಧವಾಗಿದ್ದು, ಬಹಳಷ್ಟು ವ್ಯಾಪಾರಸ್ಥರು ಕೋಟ್ಯಾಂತರ ರೂ. ಸಾಲ ಮಾಡಿ ಅವರ ಕುಟುಂಬಸ್ಥರು ಒದ್ದಾಡುವಂತಾಗಿದೆ ಎಂದು ಕಿಡಿಕಾರಿದರು.
ಬೆಳಗಾವಿ ಎಪಿಎಂಸಿಯಲ್ಲಿ ವರ್ತಕರು ಮತ್ತು ರೈತರಿಂದ ವಿಶೇಷ ಪೂಜೆ ರೈತರು ಇದಕ್ಕೆ ಅವಲಂಬಿತರಾಗಿದ್ದರು. ಇಲ್ಲಿ ಸರ್ಕಾರ ಅವರಿಗೆ ಯೋಗ್ಯ ಬೆಲೆ ನೀಡುವಂತ ವ್ಯವಸ್ಥೆಯಿತ್ತು. ಆದರೆ, ಕೆಲವೊಂದು ಜನಪ್ರತಿನಿಧಿಗಳ ಸ್ವಾರ್ಥಕ್ಕೋಸ್ಕರ ಕಾನೂನು, ಸರ್ಕಾರದ ವ್ಯವಸ್ಥೆ, ರೈತರು ಮತ್ತು ವ್ಯಾಪಾರಿಗಳ ಹಿತಾಸಕ್ತಿ ಸಂಪೂರ್ಣ ಗಾಳಿಗೆ ತೂರಿ ಈ ಎಪಿಎಂಸಿ ಎತ್ತಂಗಡಿ ಮಾಡಿದ್ದಾರೆ. ನೂರಾರು ಕೋಟಿ ರೂ. ಖರ್ಚು ಮಾಡಿ ಕಟ್ಟಿದ್ದ ಎಪಿಎಂಸಿಯನ್ನು ಈ ಸ್ಥಿತಿಗೆ ತಂದಿದ್ದಾರೆ. ಅದಕ್ಕಾಗಿ ಎಲ್ಲ ಪ್ರಯತ್ನಗಳ ನಂತರ ಈಗ ನವಗ್ರಹ ಪೂಜೆ ಮೂಲಕ ದೇವರ ಮೊರೆ ಹೋಗಿದ್ದೇವೆ. ಮುಂದಿನ ದಿನಗಳಲ್ಲಿ ಹೊಸ ಸರ್ಕಾರ ನಮ್ಮ ಮನವಿಗೆ ಓಗೊಟ್ಟು ಇದು ಮೊದಲಿನ ಹಾಗೆ ವ್ಯಾಪಾರ ವಹಿವಾಟು ಸಮೃದ್ಧವಾಗಿ ನಡೆಯುವಂತೆ ಮಾಡಬೇಕು ಎಂದು ಪ್ರಕಾಶ ನಾಯಿಕ ಆಗ್ರಹಿಸಿದರು.
ಬೆಳಗಾವಿ ಎಪಿಎಂಸಿಯಲ್ಲಿ ವರ್ತಕರು ಮತ್ತು ರೈತರಿಂದ ವಿಶೇಷ ಪೂಜೆ ಮೊದಲಿನ ಟ್ರ್ಯಾಕ್ಗೆ ಮರಳುತ್ತಾ ಎಪಿಎಂಸಿ:ರಾಜ್ಯದಲ್ಲೇ ಅತೀ ದೊಡ್ಡ ಎಪಿಎಂಸಿ ಆಗಿದ್ದ ಬೆಳಗಾವಿ ಎಪಿಎಂಸಿಯಿಂದ ಗೋವಾ ಮತ್ತು ಮಹಾರಾಷ್ಟ್ರ ರಾಜ್ಯದ ಪ್ರದೇಶಗಳಿಗೂ ಕೃಷಿ ಉತ್ಪನ್ನಗಳ ಸಾಗಣೆ ಮಾಡಲಾಗುತ್ತಿತ್ತು. ಆದರೆ, ಎರಡು ವರ್ಷಗಳ ಹಿಂದೆ ಬೆಳಗಾವಿ ನ್ಯೂ ಗಾಂಧಿ ನಗರದಲ್ಲಿ ಖಾಸಗಿ ಎಪಿಎಂಸಿ ಆರಂಭವಾಗಿದೆ. ಇದರಿಂದ ಸರ್ಕಾರವೇ ಕಟ್ಟಿದ್ದ ಹೈಟೆಕ್ ಎಪಿಎಂಸಿ ಮಳಿಗೆಗಳಲ್ಲಿ ವ್ಯಾಪಾರ ವಹಿವಾಟು ಬಂದ್ ಆಗಿದ್ದು, ವ್ಯಾಪಾರಿಗಳು ಮತ್ತು ರೈತರು ಇಲ್ಲದೇ ಎಪಿಎಂಸಿ ಖಾಲಿ ಖಾಲಿ ಹೊಡೆಯುತ್ತಿದ್ದು, ಖಾಸಗಿ ಎಪಿಎಂಸಿಯಲ್ಲಿ ಭರ್ಜರಿ ವ್ಯಾಪಾರ ನಡೆಯುತ್ತಿದೆ. ಖಾಸಗಿ ಎಪಿಎಂಸಿಗೆ ಅಂದು ವಿರೋಧ ಮಾಡಿದ್ದ ಸತೀಶ್ ಜಾರಕಿಹೊಳಿ ಅವರು ಇದೀಗ ಸಚಿವರಾಗಿದ್ದು, ಅವರದ್ದೇ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ. ಹೀಗಾಗಿ ಇಲ್ಲಿನ ವ್ಯಾಪಾರಿಗಳಿಗೆ ಆಸೆ ಚಿಗುರೊಡೆದಿದೆ. ಮತ್ತೆ ಸರ್ಕಾರಿ ಎಪಿಎಂಸಿ ಆರಂಭವಾಗುವ ವಿಶ್ವಾಸ ಮೂಡಿದೆ.
ಇದನ್ನೂ ಓದಿ:ಬಾಡಿಗೆದಾರರಿಗೂ ಗೃಹಜ್ಯೋತಿ ಉಚಿತ ವಿದ್ಯುತ್.. ತೆರಿಗೆ ಪಾವತಿದಾರರಿಗಿಲ್ಲ ಗೃಹ ಲಕ್ಷ್ಮಿ ಯೋಜನೆ