ಅಥಣಿ: ಅಯೋಧ್ಯೆ ರಾಮ ಜನ್ಮ ಭೂಮಿಗೂ ತಾಲೂಕಿನ ರಾಮತೀರ್ಥ ಗ್ರಾಮಕ್ಕೂ ಅವಿನಾಭಾವ ನಂಟಿದೆ. ಇಲ್ಲಿನ ಸ್ವಯಂಭೂ ಉಮಾ ರಾಮೇಶ್ವರ ದೇವಾಲಯದ ಪ್ರದೇಶದಲ್ಲಿ ರಾಮ ವನವಾಸದ ಸಂದರ್ಭದಲ್ಲಿ ಕೆಲ ಕಾಲ ತಂಗಿದ್ದ ಎಂಬ ಐತಿಹ್ಯವಿದೆ. ಹೀಗಾಗಿ ಇಂದು ರಾಮತೀರ್ಥ ಕ್ಷೇತ್ರದಲ್ಲಿ ವಿಶೇಷ ಪೂಜೆ ನಡೆಯಿತು.
ರಾಮಮಂದಿರ ಶಿಲಾನ್ಯಾಸ ಹಿನ್ನೆಲೆ ಅಥಣಿಯ ರಾಮತೀರ್ಥ ಕ್ಷೇತ್ರದಲ್ಲಿ ವಿಶೇಷ ಪೂಜೆ
ಅಯೋಧ್ಯೆ ರಾಮಮಂದಿರ ಭೂಮಿ ಪೂಜೆ ಹಿನ್ನೆಲೆ, ರಾಮ ಭೇಟಿ ನೀಡಿದ್ದ ಐತಿಹ್ಯವಿರುವ ಅಥಣಿ ತಾಲೂಕಿನ ರಾಮತೀರ್ಥ ಕ್ಷೇತ್ರದಲ್ಲಿ ವಿಶೇಷ ಪೂಜೆ ನಡೆಯಿತು.
ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ರಾಮತೀರ್ಥ ಕ್ಷೇತ್ರಕ್ಕೆ ಪೌರಾಣಿಕ ಹಿನ್ನೆಲೆಯಿದೆ. ರಾಮನ ವನವಾಸದ ಸಂದರ್ಭದಲ್ಲಿ ಕಹೋಳ ಋಷಿಯ ಆದೇಶದಂತೆ 40 ದಿನಗಳ ಕಾಲ ರಾಮತೀರ್ಥದಲ್ಲಿ ಅನುಷ್ಠಾನ ಮಾಡಿ, ಲಂಕೆಯ ಮೇಲೆ ದಿಗ್ವಿಜಯ ಸಾಧಿಸಿದ್ದ ಎಂಬ ಐತಿಹ್ಯವಿದೆ. ಈಶ್ವರನೊಂದಿಗೆ ತನ್ನ ಹೆಸರು ಚಿರಸ್ಥಾಯಿಯಾಗಲಿ ಎಂದು ಶ್ರೀ ರಾಮಚಂದ್ರ ಈ ಪ್ರದೇಶಕ್ಕೆ 'ರಾಮೇಶ್ವರ' ಎಂದು ನಾಮಕರಣ ಮಾಡಿದನೆಂದು ರಾಮೇಶ್ವರ ಮಹಾತ್ಮೆಯಲ್ಲಿ ಉಲ್ಲೇಖವಿದೆ. ಹೀಗಾಗಿ, ರಾಮಮಂದಿರ ಭೂಮಿ ಪೂಜೆ ಕಾರ್ಯಕ್ರಮಕ್ಕೆ ರಾಮತೀರ್ಥ ಕ್ಷೇತ್ರದಿಂದ ತೀರ್ಥ ಪ್ರಸಾದ ಕಳುಹಿಸಿಕೊಡಲಾಗಿದೆ ಮತ್ತು ಇಂದು ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದೆ.
ಈ ಕುರಿತು ಮಾತನಾಡಿರುವ ದೇವಸ್ಥಾನದ ಅರ್ಚಕ ಪ್ರಕಾಶ್ ಪೋಜೇರಿ, ದೇವಸ್ಥಾನದಲ್ಲಿ ಇಂದು ವಿಶೇಷ ಪೂಜೆ ನೆರವೇರಿಸಿ ಎಂದು ಅಯೋಧ್ಯೆ ರಾಮ ಮಂದಿರ ಟ್ರಸ್ಟ್ನವರು ಮುಂಚಿತವಾಗಿ ನಮಗೆ ತಿಳಿಸಿದ್ದರು. ರಾಮಮಂದಿರ ನಿರ್ಮಾಣದ ಜೊತೆಗೆ ಈ ಕ್ಷೇತ್ರ ಅಭಿವೃದ್ಧಿಯಾಗುವುದು ಅತಿ ಮುಖ್ಯ. ಪ್ರಧಾನಿ ನರೇಂದ್ರ ಮೋದಿಯವರು ಈ ಕ್ಷೇತ್ರಕ್ಕೆ ಒಮ್ಮೆ ಭೇಟಿ ನೀಡಬೇಕು ಹಾಗೂ ಕರ್ನಾಟಕ ಪುರಾತತ್ವ ಇಲಾಖೆ ಇದನ್ನು ಪ್ರವಾಸೋದ್ಯಮ ಕೇಂದ್ರವಾಗಿ ಅಭಿವೃದ್ಧಿ ಪಡಿಸಬೇಕೆಂದು ಮನವಿ ಮಾಡಿದ್ದಾರೆ.