ಕರ್ನಾಟಕ

karnataka

ETV Bharat / state

ವಿಶೇಷ ವ್ಯಕ್ತಿ ವಿಪಕ್ಷ ನಾಯಕ ಆಗ್ತಾರೆ.. ಕಾದು ನೋಡಿ ಎಂದ ಮಾಜಿ ಸಚಿವ ನಿರಾಣಿ - Special person will become the opposition leader

ವಿಪಕ್ಷನಾಯಕ ಆಯ್ಕೆ ವಿಳಂಬ ಕುರಿತು ಪ್ರತಿಕ್ರಿಯಿಸಿದ ಮಾಜಿ ಸಚಿವ ಮುರುಗೇಶ್​ ನಿರಾಣಿ, ವಿಶೇಷ ವ್ಯಕ್ತಿ ವಿಪಕ್ಷನಾಯಕರಾಗುತ್ತಾರೆ ಎಂದು ಹೇಳಿದ್ದಾರೆ.

special-person-will-become-the-opposition-leader-former-minister-murugesh-nirani
ವಿಶೇಷ ವ್ಯಕ್ತಿ ವಿಪಕ್ಷ ನಾಯಕ ಆಗ್ತಾರೆ : ಕಾದು ನೋಡಿ ಎಂದ ಮಾಜಿ ಸಚಿವ ನಿರಾಣಿ..!

By

Published : Jul 8, 2023, 1:18 PM IST

Updated : Jul 8, 2023, 1:32 PM IST

ಮಾಜಿ ಸಚಿವ ಮುರುಗೇಶ್​ ನಿರಾಣಿ

ಬೆಳಗಾವಿ : ವಿರೋಧ ಪಕ್ಷದ ನಾಯಕನನ್ನಾಗಿ ವಿಶೇಷ ವ್ಯಕ್ತಿಯನ್ನು ಆಯ್ಕೆ ಮಾಡುವ ಹಿನ್ನೆಲೆಯಲ್ಲಿ ವಿಳಂಬವಾಗಿದೆ. ಹೀಗಾಗಿ ಕಾದು ನೋಡಿ ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ. ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ವಿಪಕ್ಷ ನಾಯಕನ ಆಯ್ಕೆ ಕುರಿತು ಮಾತನಾಡಿ, ವಿರೋಧ ಪಕ್ಷ ನಾಯಕನ ಸ್ಥಾನ ಯಾರಿಗೆ ಕೊಟ್ಟರೂ ಅವರು ನಮ್ಮ ಪಕ್ಷದವರೇ. ನಮ್ಮ ಪಕ್ಷದ ಹಿರಿಯರು, ರಾಜ್ಯ, ರಾಷ್ಟ್ರ ನಾಯಕರು ಸೇರಿ ಯಾರನ್ನು ವಿಪಕ್ಷ ನಾಯಕನಾಗಿ ಘೋಷಣೆ ಮಾಡಿದರೂ ಅದನ್ನು ತುಂಬು ಹೃದಯದಿಂದ ಸ್ವಾಗತ ಮಾಡುತ್ತೇನೆ ಎಂದು ಹೇಳಿದರು.

ನಾನು ರಾಜ್ಯಾಧ್ಯಕ್ಷ ಆಗುವುದಿಲ್ಲ:ನೀವು ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿನಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ರಾಜ್ಯಾಧ್ಯಕ್ಷ ಆಗುವುದಿಲ್ಲ. ಪಕ್ಷದ ಸಂಘಟನೆಯಲ್ಲಿ ನಾನಿರುತ್ತೇನೆ. ರಾಜ್ಯಾಧ್ಯಕ್ಷನಾಗಿಯೇ ಪಕ್ಷ ಸಂಘಟನೆ ಮಾಡಬೇಕು ಅಂತಾ ಏನೂ ಇಲ್ಲ. ಬೆಳಗಾವಿ ವಿಭಾಗದಲ್ಲಿ ಯಾವುದೇ ಹುದ್ದೆಯನ್ನು ತೆಗೆದುಕೊಳ್ಳದೆಯೇ ಪಕ್ಷ ಸಂಘಟನೆ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ವಿಚಾರವಾಗಿ ಮಾತನಾಡಿ, ವೈಯಕ್ತಿಕವಾಗಿ ನನಗೆ ರಾಜ್ಯ ರಾಜಕಾರಣದಲ್ಲಿ ಹೆಚ್ಚು ಆಸಕ್ತಿ ಇದೆ. ರಾಜ್ಯ, ರಾಷ್ಟ್ರ ನಾಯಕರು ಏನೇ ತೀರ್ಮಾನ ಮಾಡಿದರೂ ಅದಕ್ಕೆ ನಾನು ಬದ್ಧ. ನನಗೆ ವೈಯಕ್ತಿಕವಾಗಿ ಮತ್ತೆ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಆಸಕ್ತಿ ಇದೆ. ಎಲ್ಲಿ ಕಳೆದುಕೊಂಡಿದ್ದೇನೆ, ಅಲ್ಲೇ ಹುಡುಕುವ ಸ್ವಭಾವ ನನ್ನದು. ಸೋಲು ಗೆಲುವು ಸ್ವಾಭಾವಿಕ. ಇಂದಿರಾ ಗಾಂಧಿ, ವಾಜಪೇಯಿ, ಅಡ್ವಾಣಿ, ಯಡಿಯೂರಪ್ಪ, ಸಿದ್ದರಾಮಯ್ಯ ಸೇರಿ ಎಲ್ಲರೂ ಸೋತವರೇ ಇದ್ದಾರೆ. ನಾನು ಇವತ್ತು ಸೋತಿರಬಹುದು. ಆದರೆ ಇವತ್ತೇ ಚುನಾವಣೆ ನಡೆದರೂ 25 ಸಾವಿರ ಮತಗಳ ಅಂತರದಿಂದ ನಾನು ಗೆಲ್ಲುತ್ತೇನೆ‌. ಇನ್ನು ನನ್ನ ಸೋಲಿಗೆ ನಾನೇ ಕಾರಣ, ನನ್ನ ಅತಿಯಾದ ಆತ್ಮವಿಶ್ವಾಸದಿಂದ ನನಗೆ ಸೋಲಾಗಿದೆ ಎಂದು ನಿರಾಣಿ ಹೇಳಿದರು.

ಬಜೆಟ್​ ಮೇಲಿನ ನಿರೀಕ್ಷೆ ಹುಸಿಯಾಗಿದೆ :ಬಜೆಟ್ ಬಗ್ಗೆ ವಿಚಾರವಾಗಿ ಮಾತನಾಡಿದ ನಿರಾಣಿ, ಸಿಎಂ ಸಿದ್ದರಾಮಯ್ಯ ಅವರು 14ನೇ ಬಜೆಟ್ ಮಂಡನೆ ಮಾಡಿದ್ದಾರೆ. ಇದು ರಾಜ್ಯದ ಅಭಿವೃದ್ಧಿಗೆ ಪೂರಕವಾಗಿಲ್ಲ. ಸಿದ್ದರಾಮಯ್ಯ ಅವರು ಉತ್ತಮ ಬಜೆಟ್ ನೀಡುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ನಿರೀಕ್ಷೆಗಳೆಲ್ಲ ಹುಸಿಯಾಗಿದೆ ಎಂದರು.

ಬಾಗಲಕೋಟೆ, ವಿಜಯಪುರ ಕೃಷ್ಣ ಮೇಲ್ದಂಡೆ ಅನುಷ್ಠಾನ ವಿಚಾರದಲ್ಲಿ ಮುಳುಗಡೆಯಾದ ಪ್ರದೇಶದ ಜನರಿಗೆ ಪರಿಹಾರ ಕೊಡಲು 5 ಸಾವಿರ ಕೋಟಿ ರೂಪಾಯಿಯನ್ನು ನಾವು ಮೀಸಲು ಇಟ್ಟಿದ್ದೆವು. ಸಾಂಕೇತಿಕವಾಗಿ 10 ಜನರಿಗೆ ಪರಿಹಾರ ವಿತರಣೆ ಕೂಡ ಮಾಡಿದ್ದೆವು. ಆದರೆ ಇವರು ಈ ಬಜೆಟ್​​ನಲ್ಲಿ ಇದನ್ನು ಕೈ ಬಿಟ್ಟಿದ್ದಾರೆ. ಇದರಿಂದ ಕೃಷ್ಣ ತೀರದ ಜನರಿಗೆ ಅನ್ಯಾಯ ಆಗಿದೆ. ಎಲ್ಲಾ ರಂಗದಲ್ಲಿಯೂ ಸುಳ್ಳು ಭರವಸೆ ನೀಡಿದ್ದಾರೆ ಎಂದು ಟೀಕಿಸಿದರು.

ಕಾಂಗ್ರೆಸ್​ನವರು ಚುನಾವಣೆ ಸಂದರ್ಭದಲ್ಲಿ ಗ್ಯಾರಂಟಿ ಘೋಷಣೆ ಮಾಡುವಾಗ ಷರತ್ತುಗಳನ್ನು ಹಾಕಿರಲಿಲ್ಲ. ಈಗ ಗ್ಯಾರಂಟಿಗೆ ಅನೇಕ ಷರತ್ತುಗಳನ್ನು ಹಾಕಿದ್ದಾರೆ. ಷರತ್ತುಗಳನ್ನು ಹಾಕಿದ್ದು ದುರಾದೃಷ್ಟ. ಬೊಮ್ಮಾಯಿ, ಯಡಿಯೂರಪ್ಪ ಅವರು ಮಾಡಿದ 20ಕ್ಕೂ ಹೆಚ್ಚು ಯೋಜನೆಗಳನ್ನು ಕೈಬಿಡುವ ಮೂಲಕ ರಾಜ್ಯದ ಜನರಿಗೆ ಮೋಸ ಮಾಡಿದ್ದಾರೆ. ಒಂದು ಸಮುದಾಯದ ಓಲೈಕೆಯ ಬಜೆಟ್ ಇದಾಗಿದೆ ಎಂದು ಮುರುಗೇಶ ನಿರಾಣಿ ಹರಿಹಾಯ್ದರು.

ಇದನ್ನೂ ಓದಿ :ಸಿದ್ದು ಲೆಕ್ಕ: ಅತ್ತ ಪಂಚ ಗ್ಯಾರಂಟಿ ವ್ಯಾಪ್ತಿಯ ಇಲಾಖೆಗಳಿಗೆ ಹೆಚ್ಚಿನ ಅನುದಾನ, ಇತ್ತ ಕೆಲ ಇಲಾಖೆಗಳ ಅನುದಾನ ಕಟ್

Last Updated : Jul 8, 2023, 1:32 PM IST

ABOUT THE AUTHOR

...view details