ಬೆಳಗಾವಿ:ವಿಧಾನಸಭೆಗೆ ಸಾರ್ವಜನಿಕರಿಗೆ ಪಾಸ್ ಕೊಡುವಾಗ ಅವರ ನೈಜತೆ ನೋಡಿಕೊಂಡು ಕೊಡಲು ಸೂಚಿಸಲಾಗಿದೆ ಎಂದು ಸ್ಪೀಕರ್ ಯು.ಟಿ. ಖಾದರ್ ತಿಳಿಸಿದರು.
ಸುವರ್ಣಸೌಧದಲ್ಲಿ ಸಂಸತ್ತಿನ ಭದ್ರತಾ ಲೋಪದ ಕುರಿತು ಮಾತನಾಡಿ, ''ಅಧಿವೇಶನದ ಹಿನ್ನೆಲೆಯಲ್ಲಿ ಸುವರ್ಣ ಸೌಧದಲ್ಲಿ ಭದ್ರತೆ ಹೆಚ್ಚಳ ಮಾಡಲಾಗಿದೆ. ಸಂಸತ್ತಿನ ಗ್ಯಾಸ್ ಬಾಂಬ್ ನಮಗೆ ಎಚ್ಚರಿಕೆ ಘಂಟೆಯಾಗಿದೆ. ಯಾವಾಗ ಏನಾಗಬಹುದು ಅಂತ ಊಹೆ ಮಾಡಕ್ಕಾಗಲ್ಲ. ಜನಸಾಮಾನ್ಯರು ಸಹಕಾರ ಕೊಡಬೇಕು'' ಎಂದು ಮನವಿ ಮಾಡಿದರು.
''ಜನರಿಗೆ ಪಾಸ್ ಕೊಡುವಾಗ ಅವರ ನೈಜತೆ ನೋಡಿಕೊಂಡು ಪಾಸ್ ಕೊಡಲು ಸೂಚಿಸಲಾಗಿದೆ. ವಿದ್ಯಾರ್ಥಿಗಳಿಗೆ, ಸತ್ಪ್ರಜೆಗಳಿಗೆ ತೊಂದರೆ ಆಗದಂತೆ ಪಾಸ್ ವಿತರಿಸಲು ಸೂಚಿಸಲಾಗಿದೆ. ಹೆಚ್ಚು ತಪಾಸಣೆ ಮಾಡಿ ಮೂಲಕ ಸುವರ್ಣಸೌಧಕ್ಕೆ ಪ್ರವೇಶ ನೀಡಲಾಗುತ್ತದೆ. ಜನ ಸಾಮಾನ್ಯರು ಸಹಕರಿಸಬೇಕು'' ಎಂದು ಮನವಿ ಮಾಡಿದರು.
ಈ ಲೋಪಕ್ಕೆ ಜವಾಬ್ದಾರಿ ಯಾರು?:ಇನ್ನು ಇದೇ ವಿಚಾರವಾಗಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ''ಸಂಸತ್ತಿನ ದಾಳಿ ಯಾರೇ ಮಾಡಿದರೂ ಖಂಡನೀಯ. ಈ ಘಟನೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಆದ್ರೆ, ಈ ಲೋಪಕ್ಕೆ ಜವಾಬ್ದಾರಿ ಯಾರು'' ಎಂದು ಪ್ರಶ್ನಿಸಿದರು.
''ಇದೇ ಪಾಸ್ ನಮ್ಮವರು ಕೊಟ್ಟಿದ್ದಿದ್ರೆ ಪರಿಸ್ಥಿತಿ ಏನಾಗಿರ್ತಿತ್ತು? ಪಾಸ್ ಕೊಟ್ಟ ಮೈಸೂರು ಸಂಸದರನ್ನು ಯಾಕೆ ಇನ್ನೂ ವಿಚಾರಣೆ ಮಾಡಿಲ್ಲ? ಮಹುವಾ ಮೊಯಿತ್ರಾ ವಿಚಾರದಲ್ಲಿ ಈ ಸರ್ಕಾರ ಹೇಗೆ ನಡೆದುಕೊಳ್ತು? ಎಲ್ಲಿ ಹೋದ್ರು ನಿಮ್ಮ ಜೇಮ್ಸ್ ಬಾಂಡ್ ಅಜಿತ್ ದೋವಲ್? ಎಲ್ಲಿ ಹೋದ್ರು ಅಮಿತ್ ಶಾ? ಪ್ರತಾಪ್ ಸಿಂಹ ಇದರ ಬಗ್ಗೆ ಸ್ಪಷ್ಟನೆ ಕೊಡಲಿ'' ಎಂದು ಅವರು ಒತ್ತಾಯಿಸಿದರು.
ಸಂಸತ್ತಿನ ಅಧಿವೇಶನದಲ್ಲಿ ಭದ್ರತಾ ಲೋಪ, ಐವರ ಬಂಧನ:ನಿನ್ನೆ (ಬುಧವಾರ) ನಡೆದ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಭಾರಿ ಭದ್ರತಾ ಲೋಪವಾಗಿತ್ತು. ಲೋಕಸಭೆ ಕಲಾಪ ನಡೆಯುತ್ತಿದ್ದ ವೇಳೆಯಲ್ಲಿ ಇಬ್ಬರು ಯುವಕರು ಸದನದೊಳಗೆ ನುಗ್ಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಐವರು ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ. ಬುಧವಾರ ಲೋಕಸಭೆ ಅಧಿವೇಶನ ವೀಕ್ಷಕರ ಗ್ಯಾಲರಿಯಿಂದ ದಿಢೀರ್ ಜಿಗಿದ ಯುವಕರಿಬ್ಬರು ಸ್ಮೋಕ್ ಕ್ರ್ಯಾಕರ್ವೊಂದನ್ನು ಸ್ಪ್ರೇ ಮಾಡಿ, ಘೋಷಣೆಗಳನ್ನು ಕೂಗಿದ್ದರು. ಸದನದಲ್ಲಿದ್ದ ಸಚಿವರು ಮತ್ತು ಸಂಸದರು ಆತಂಕದಿಂದ ಹೊರಗೆ ಬಂದಿದ್ದರು. ಇದೇ ಸಮಯದಲ್ಲಿ ಹೊರಗಿನ ಗೇಟ್ ಬಳಿಯೂ ಯುವತಿಯೊಬ್ಬಳು ಇದೇ ರೀತಿ ಬಣ್ಣವನ್ನು ಸ್ಪ್ರೇ ಮಾಡಿದ್ದಳು. ಸಂಸತ್ ಭವನದ ಮೇಲಿನ ದಾಳಿಯ ವರ್ಷಾಚರಣೆಯಂದೇ ಭದ್ರತಾ ಲೋಪ ಆಗಿರುವುದು ಎಲ್ಲರಲ್ಲೂ ಆತಂಕ ಮೂಡಿಸಿದೆ.
ಇದನ್ನೂ ಓದಿ:ಲೋಕಸಭೆ ಕಲಾಪಕ್ಕೆ ಯುವಕರಿಬ್ಬರು ನುಗ್ಗಿದ ಪ್ರಕರಣ; ಐವರು ಆರೋಪಿಗಳ ಬಂಧನ