ಚಿಕ್ಕೋಡಿ:ಜೂನ್ ಮೊದಲ ವಾರದಲ್ಲಿ ವಾಡಿಕೆಯಂತೆ ಪ್ರಾರಂಭವಾಗಬೇಕಾಗಿದ್ದ ಮಳೆ ಕೈಕೊಟ್ಟಿದ್ದರಿಂದ ಮಂಕಾಗಿದ್ದ ರೈತರ ಮೊಗದಲ್ಲಿ ಈಗ ಹರ್ಷ ಮೂಡಿದೆ. ಒಳ್ಳೇ ಮಳೆಯಾಗ್ತಿರುವುದರಿಂದ ರೈತರು ಹೊಲಗಳತ್ತ ಮುಖ ಮಾಡಿ ಭರದಿಂದ ಬಿತ್ತನೆ ಕಾರ್ಯ ಪ್ರಾರಂಭಿಸಿದ್ದಾರೆ.
ಅಥಣಿ ತಾಲೂಕಿನ ವ್ಯಾಪ್ತಿಯಲ್ಲಿ ಮುಂಗಾರು ತಡವಾಗಿತ್ತು.ಕಳೆದ ಮೂರ್ನಾಲ್ಕು ತಿಂಗಳಿನಿಂದ ಬಿಸಿಲಿನ ತಾಪಕ್ಕೆ ಕೃಷ್ಣೆ ಸಂಪೂರ್ಣ ಬರಿದಾಗಿತ್ತು. ಇದರಿಂದ ಕಂಗೆಟ್ಟ ಅಥಣಿ ಭಾಗದ ರೈತರು ಈಗ ಸ್ವಲ್ಪ ಪ್ರಮಾಣದಲ್ಲಿ ಮಳೆಯಾಗಿದ್ದರಿಂದ ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ.
ಏಯ್ ಹರಗಾ.. ಏಯ್ ಹರಗಾ.. ಬಿರುಸುಗೊಂಡ ಬಿತ್ತನೆ ಕಾರ್ಯ.. ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಗಡಿಭಾಗದಲ್ಲಿ ಭೂಮಿ ಹದವಾಗುವಂತೆ ಮಳೆ ಸುರಿದಿದೆ. ಮುಂಗಾರು ಪೂರ್ವ ಮಳೆ ಕೈ ಕೊಟ್ಟಿದ್ದರಿಂದ ಬಿತ್ತನೆಗೆ ಸ್ವಲ್ಪ ಪ್ರಮಾಣದಲ್ಲಿ ಹಿನ್ನಡೆಯಾಗಿದ್ದು, ಈಗ ರೈತರು ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ.
ಜೊತೆಗೆ ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿರುವುದರಿಂದ ಕೃಷ್ಣಾ ನದಿ ಮೈದುಂಬಿ ಹರಿಯುತ್ತಿದೆ. ಇದರಿಂದ ಬಿತ್ತನೆ ಮಾಡಿ ನೀರು ಬಿಡಲು ಅನಕೂಲಕರವಾಗಿದೆ. ನದಿಯ ಸುತ್ತಮುತ್ತಲಿನ ಕಬ್ಬು ಬೆಳೆದ ರೈತರಿಗೂ ಇದರಿಂದ ಅನುಕೂಲವಾಗಲಿದೆ.