ಚಿಕ್ಕೋಡಿ (ಬೆಳಗಾವಿ) :ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧನೋರ್ವ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಗುರುವಾರ ತಡರಾತ್ರಿ ನಡೆದಿದೆ. ಜಿಲ್ಲೆಯ ಅಥಣಿ ತಾಲೂಕಿನ ನದಿ-ಇಂಗಳಗಾಂವ ಗ್ರಾಮದ ಲಕ್ಷ್ಮಣ ಘೋರ್ಪಡೆ (24) ಮೃತ ಯೋಧ.
ಕಳೆದ ವಾರದ ಹಿಂದೆ ರಜೆಗೆಂದು ಸ್ವಗ್ರಾಮಕ್ಕೆ ಆಗಮಿಸಿದ ಇವರು ಸಂಬಂಧಿ ಸತೀಶ್ ಘೋರ್ಪಡೆ ಜತೆಗೂಡಿ ದ್ವಿಚಕ್ರ ವಾಹನದಲ್ಲಿ ಗೋವಾ ಪ್ರವಾಸಕ್ಕೆ ತೆರಳಿದ್ದರು. ಪ್ರವಾಸ ಮುಗಿಸಿಕೊಂಡು ವಾಪಸ್ ಊರಿಗೆ ಬರುವಾಗ ರಾಯಭಾಗ ತಾಲೂಕಿನ ಹಾರುಗೇರಿ ಸಮೀಪದಲ್ಲಿ ಗೋಕಾಕ್ ಅಥಣಿ ರಸ್ತೆಯಲ್ಲಿ ಬೈಕ್ ನಿಯಂತ್ರಣ ಕಳೆದುಕೊಂಡು ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಸ್ಥಳದಲ್ಲೇ ಯೋಧ ಲಕ್ಷ್ಮಣ ಘೋರ್ಪಡೆ ಮೃತಪಟ್ಟರೆ, ಹಿಂಬದಿ ಸವಾರ ಸತೀಶ್ ಗಂಭೀರ ಗಾಯಗೊಂಡಿದ್ದಾರೆ. ಸದ್ಯ ಅವರು ಮಹಾರಾಷ್ಟ್ರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಅನಾರೋಗ್ಯದಿಂದ ಯೋಧ ನಿಧನ:ಇತ್ತೀಚೆಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಖೇಡಗಿ ಗ್ರಾಮದ ಯೋಧ ಲಖನೌದ ಕಮಾಂಡೋ ಮಿಲಿಟರಿ ಆಸ್ಪತ್ರೆಯಲ್ಲಿ ಮೃತರಾಗಿದ್ದರು. ಪ್ರಕಾಶ ಶಿರಶ್ಯಾಡ ಮೃತ ಯೋಧ. ಇವರು 2011ರಲ್ಲಿ ಸೈನ್ಯದಲ್ಲಿ ಭರ್ತಿಯಾಗಿ ಮದ್ರಾಸ್ ರೆಜಿಮೆಂಟ್ 7 ವೆಲಿಂಗ್ಟನ್ದಲ್ಲಿ ತರಬೇತಿ ಪಡೆದು ನಂತರ ಜಮ್ಮು-ಕಾಶ್ಮೀರ, ಹಿಮಾಚಲ ಪ್ರದೇಶ ಇನ್ನಿತರ ಕಡೆ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಮಧ್ಯಪ್ರದೇಶದ ಗ್ವಾಲಿಯರ್‌ದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅಲ್ಲದೇ ಲೆಬನಾನ್ದಲ್ಲಿ ನಡೆದಿದ್ದ ಇಂಡೋ- ಲೆಬನಾನ್ ಜಂಟಿ ಸಮರಾಭ್ಯಾಸ ತರಬೇತಿಯಲ್ಲಿ ಭಾಗಿಯಾಗಿದ್ದರು.
ಇದನ್ನೂ ಓದಿ:ವಿಜಯಪುರ: ಅನಾರೋಗ್ಯದಿಂದ ಯೋಧ ನಿಧನ