ಬೆಳಗಾವಿ: ದಂಪತಿಗೆ ನಾಗರಹಾವು ಕಚ್ಚಿದ ಪರಿಣಾಮ ಪತಿ ಮೃತಪಟ್ಟು, ಪತ್ನಿ ಸಾವು ಬದುಕಿನ ಮಧ್ಯ ಹೋರಾಡುತ್ತಿರುವ ಹೃದಯವಿದ್ರಾವಕ ಘಟನೆ ನಗರದ ಅನ್ನಪೂರ್ಣೇಶ್ವರಿ ನಗರದಲ್ಲಿಂದು ಬೆಳಗಿನ ಜಾವ ನಡೆದಿದೆ. ಬೈಲಹೊಂಗಲ ತಾಲೂಕಿನ ಸಾಣಿಕೊಪ್ಪ ಗ್ರಾಮದ ಸಿದ್ದಪ್ಪ ಚಿವಟಗುಂಡಿ (35) ಮೃತ ವ್ಯಕ್ತಿ. ಪತ್ನಿ ನಾಗವ್ವ (28) ಸ್ಥಿತಿ ಚಿಂತಾಜನಕವಾಗಿದೆ. ದಂಪತಿ ತಮ್ಮ ಮೂರು ಮಕ್ಕಳ ಸಮೇತ ಹೊಟ್ಟೆಪಾಡಿಗಾಗಿ ಸಾಣಿಕೊಪ್ಪದಿಂದ ಬೆಳಗಾವಿಗೆ ಬಂದು ನೆಲೆಸಿದ್ದರು.
ಮೃತ ಸಿದ್ದಪ್ಪ ಅವರು ವಡಗಾವಿಯ ಕಟ್ಟಡ ಕಾಮಗಾರಿಯೊಂದರಲ್ಲಿ ವಾಚ್‍ಮನ್ ಆಗಿ ಕೆಲಸ ಮಾಡುತ್ತಿದ್ದರು. ಶನಿವಾರ ರಾತ್ರಿ ಈ ದಂಪತಿ ಮೂವರು ಮಕ್ಕಳೊಂದಿಗೆ ಊಟ ಮಾಡಿ ಮಲಗಿದ್ದರು. ಬೆಳಗಿನ ಜಾವ ನಿದ್ದೆಯಲ್ಲಿದ್ದಾಗ ಹಾವು ಕಚ್ಚಿದೆ. ವಿಷ ಅವರ ದೇಹಕ್ಕೆ ಏರಿದ ಪರಿಣಾಮ ತಂದೆ, ತಾಯಿ ಒದ್ದಾಡುತ್ತಿರುವುದನ್ನು ಕಂಡು ಮಕ್ಕಳು ಎಚ್ಚರಗೊಂಡಿದ್ದಾರೆ. ಬಳಿಕ ಅಕ್ಕಪಕ್ಕದ ಮನೆಯವರಿಗೆ ವಿಷಯ ತಿಳಿಸಿದಾಗ ಹಾವು ಕಚ್ಚಿರುವುದು ಗೊತ್ತಾಗಿದೆ. ಕೂಡಲೇ ದಂಪತಿಯನ್ನು ಸ್ಥಳೀಯರ ನೆರವಿನಿಂದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಿದ್ದಪ್ಪ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಗರಹಾವು ಕಚ್ಚಿ ಉರಗ ತಜ್ಞ ಸ್ನೇಕ್ ನರೇಶ್ ಸಾವು:ಇತ್ತೀಚಿಗೆ ರಾಜ್ಯದ ಹೆಸರಾಂತ ಉರಗ ತಜ್ಞರಲ್ಲಿ ಒಬ್ಬರಾಗಿದ್ದ ಸ್ನೇಕ್ ನರೇಶ್ (51) ಸ್ವತಃ ತಾವೇ ಹಿಡಿದಿದ್ದ ನಾಗರ ಹಾವು ಕಚ್ಚಿ ಸಾವನ್ನಪ್ಪಿದ್ದ ಘಟನೆ ಚಿಕ್ಕಮಗಳೂರು ನಗರದಲ್ಲಿ ನಡೆದಿತ್ತು. ಚಿಕ್ಕಮಗಳೂರು ನಗರದ ಹೌಸಿಂಗ್ ಬೋರ್ಡ್ ಸಮೀಪ ನಾಗರ ಹಾವೊಂದನ್ನು ಸೆರೆ ಹಿಡಿದಿದ್ದ ನರೇಶ್ ಹಾವನ್ನು ಚೀಲದಲ್ಲಿ ತುಂಬಿ ಸ್ಕೂಟಿಯ ಡಿಕ್ಕಿಯಲ್ಲಿ ಇಟ್ಟಿದ್ದರು. ಅದಾದ ಮೇಲೆ ಮತ್ತೊಂದು ಹಾವು ಹಿಡಿಯಲು ಕರೆ ಬಂದಿತ್ತು. ಸ್ಕೂಟಿಯ ಡಿಕ್ಕಿಯಲ್ಲಿ ಇಟ್ಟಿದ್ದ ಹಾವಿನ ಚೀಲವನ್ನು ಬಿಗಿಯಾಗಿ ಕಟ್ಟಲು ಎಂದು ಸ್ಕೂಟಿಯ ಡಿಕ್ಕಿ ಓಪನ್ ಮಾಡಿದಾಗ ಚೀಲದಿಂದ ಹೊರ ಬಂದಿದ್ದ ನಾಗರಹಾವು ನರೇಶ್ ಅವರಿಗೆ ಕಚ್ಚಿತ್ತು.