ಕರ್ನಾಟಕ

karnataka

ETV Bharat / state

ಸ್ಮಾರ್ಟ್ ಸಿಟಿ ಕಾಮಗಾರಿ: ತಾಂತ್ರಿಕ ಸಮಸ್ಯೆ ಪರಿಹರಿಸಲು ರೈಲ್ವೆ ಸಚಿವ ಅಂಗಡಿ ಸೂಚನೆ - Belgaum District Collector's Office

ಕಾಮಗಾರಿ ವ್ಯಾಪ್ತಿಯ ಖಾಸಗಿ ಆಸ್ತಿಗಳ ಸ್ವಾಧೀನ ಮತ್ತು ಜಮೀನು ಹಸ್ತಾಂತರ ಸೇರಿದಂತೆ ಎಲ್ಲ ಬಗೆಯ ತಾಂತ್ರಿಕ ಸಮಸ್ಯೆಗಳನ್ನು ತಕ್ಷಣ ಪರಿಹರಿಸಿಕೊಳ್ಳಬೇಕು ಎಂದು ರೈಲ್ವೆ ಇಲಾಖೆಯ ರಾಜ್ಯ ಸಚಿವ ಸುರೇಶ್ ಅಂಗಡಿ ಅಧಿಕಾರಿಗಳಿಗೆ ಸೂಚನೆ ನೀಡಿದರು

Smart City Works: Railway Minister order to solve technical problem
ಸ್ಮಾರ್ಟ್ ಸಿಟಿ ಕಾಮಗಾರಿ: ತಾಂತ್ರಿಕ ಸಮಸ್ಯೆ ಪರಿಹರಿಸಲು ರೈಲ್ವೆ ಸಚಿವ ಅಂಗಡಿ ಸೂಚನೆ

By

Published : Jul 27, 2020, 8:01 PM IST

ಬೆಳಗಾವಿ:ಸ್ಮಾರ್ಟ್ ಸಿಟಿ ಯೋಜನೆಯಡಿ ಸಾಕಷ್ಟು ಅನುದಾನ ಬಿಡುಗಡೆ ಆಗಿದೆ. ಆದರೆ, ರಕ್ಷಣಾ ಇಲಾಖೆಯ ಜಮೀನು ಹಸ್ತಾಂತರ ವಿಳಂಬ ಸೇರಿದಂತೆ ವಿವಿಧ ತಾಂತ್ರಿಕ ಕಾರಣಗಳಿಂದ ಕೆಲವು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಕಾಮಗಾರಿ ವ್ಯಾಪ್ತಿಯ ಖಾಸಗಿ ಆಸ್ತಿಗಳ ಸ್ವಾಧೀನ ಮತ್ತು ಜಮೀನು ಹಸ್ತಾಂತರ ಸೇರಿದಂತೆ ಎಲ್ಲ ಬಗೆಯ ತಾಂತ್ರಿಕ ಸಮಸ್ಯೆಗಳನ್ನು ತಕ್ಷಣ ಪರಿಹರಿಸಿಕೊಳ್ಳಬೇಕು ಎಂದು ರೈಲ್ವೆ ಇಲಾಖೆಯ ರಾಜ್ಯ ಸಚಿವ ಸುರೇಶ ಅಂಗಡಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸ್ಮಾರ್ಟ್ ಸಿಟಿ ಕಾಮಗಾರಿ: ತಾಂತ್ರಿಕ ಸಮಸ್ಯೆ ಪರಿಹರಿಸಲು ರೈಲ್ವೆ ಸಚಿವ ಅಂಗಡಿ ಸೂಚನೆ

ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡ ಸ್ಮಾರ್ಟ್ ಸಿಟಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು. ಕೆಲವು ಕಾಮಗಾರಿಗಳ ವ್ಯಾಪ್ತಿಯಲ್ಲಿ ಬರುವ ಖಾಸಗಿ ಆಸ್ತಿಗಳ ಮೌಲ್ಯಮಾಪನ ಮಾಡಿ ಪುನರ್ವಸತಿ ಅಥವಾ ಸ್ಥಳಾಂತರ ಬಗ್ಗೆ ವರದಿ ನೀಡಿದ್ರೆ ರಾಜ್ಯ ಸರ್ಕಾರದ ಜೊತೆ ಚರ್ಚಿಸಿ ಅಗತ್ಯ ಅನುದಾನ ಪಡೆಯಲಾಗುವುದು. ಬೆಳಗಾವಿ ವೇಗವಾಗಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಮೂವತ್ತು ವರ್ಷಗಳನ್ನು ಗಮನದಲ್ಲಿಟ್ಟುಕೊಂಡು ಮೂಲಸೌಕರ್ಯಗಳನ್ನು ಒದಗಿಸಲು ಸ್ಮಾರ್ಟ್ ಸಿಟಿ ಕಾಮಗಾರಿಗಳಿಗೆ ಅವಕಾಶ ಕಲ್ಪಿಸಬೇಕಿದೆ ಎಂದರು.

ಕಾಮಗಾರಿ ತ್ವರಿತಗೊಳಿಸಲು ಸೂಚನೆ:

ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಮಾತನಾಡಿ, ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನು ಚುರುಕುಗೊಳಿಸಲು ಅಗತ್ಯವಿರುವ ಕ್ರಮಗಳನ್ನು ತ್ವರಿತವಾಗಿ ತೆಗೆದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ವೇಳೆ ಮಾತನಾಡಿದ ಎಂಎಲ್ಐಎಲ್ಆರ್​ಸಿಯ ಬ್ರಿಗೇಡಿಯರ್ ಚೌಧರಿ, ಬಸ್ ನಿಲ್ದಾಣಕ್ಕೆ ಜಮೀನನ್ನು ಹಸ್ತಾಂತರಿಸುವುದಕ್ಕೆ ಸಂಬಂಧಿಸಿದ ಪ್ರಸ್ತಾವ ರಕ್ಷಣಾ ಇಲಾಖೆಗೆ ಕಳುಹಿಸಲಾಗಿದೆ. ಅಲ್ಲಿಂದ ಅನುಮೋದನೆ ದೊರೆಯಬೇಕಿದೆ. ಸಾರ್ವಜನಿಕರಿಗೆ ಉತ್ತಮ ಸೌಕರ್ಯಗಳನ್ನು ಒದಗಿಸುವುದಕ್ಕೆ ಅನುಕೂಲವಾಗುವಂತೆ ಪ್ರಸ್ತಾವ ಸಿದ್ಧಪಡಿಸಲಾಗುವುದು. ಬಸ್ ನಿಲ್ದಾಣದ ಜಮೀನು ಹಸ್ತಾಂತರ ಹೊರತುಪಡಿಸಿದರೆ ಇದುವರೆಗೆ ರಾಜ್ಯ ಸರ್ಕಾರ ಕಳಿಸಿದ ಯಾವುದೇ ಪ್ರಸ್ತಾವ ಬಾಕಿ ಉಳಿದಿರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ದಕ್ಷಿಣ ಮತಕ್ಷೇತ್ರದ ಶಾಸಕರಾದ ಅಭಯ್ ಪಾಟೀಲ ಅವರು ಮಾತನಾಡಿ, ಸಾಂವಗಾಂವ ರಸ್ತೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ ಅನುಕೂಲವಾಗುವಂತಹ ಪ್ರಸ್ತಾವ ರಕ್ಷಣಾ ಇಲಾಖೆಗೆ ಸಲ್ಲಿಸುವಂತೆ ಬ್ರಿಗೇಡಿಯರ್ ಅವರನ್ನು ಕೋರಿದರು.

ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮಾತನಾಡಿ, ಕಾಮಗಾರಿ ವ್ಯಾಪ್ತಿಯಲ್ಲಿ ಬರುವ ಖಾಸಗಿ ಆಸ್ತಿದಾರರ ಪುನರ್ವಸತಿ ಮತ್ತು ಸ್ಥಳಾಂತರ ಕುರಿತು ಸಮಗ್ರ ವರದಿ ಸಲ್ಲಿಸುವಂತೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.

ಇದೇ ವೇಳೆ ರಾಯಚೂರು-ಬಾಚಿ ರಸ್ತೆ (ಎಸ್.ಹೆಚ್. 20) ಗಾಂಧಿನಗರದಿಂದ ಅಶೋಕ ವೃತ್ತದವರೆಗೆ ರಸ್ತೆ ನಿರ್ಮಾಣ, ಸಂಚಯನಿ ವೃತ್ತದಿಂದ ಮೀನು ಮಾರ್ಕೆಟ್ ವರೆಗೆ ಸ್ಮಾರ್ಟ್ ಸಿಟಿ ರಸ್ತೆ ನಿರ್ಮಾಣ ಕೈಗೊಳ್ಳುವ ಬಗ್ಗೆ ಚರ್ಚೆ ನಡೆಸಲಾಯಿತು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಮಹಾನಗರ ಪಾಲಿಕೆಯ ಆಯುಕ್ತ ಜಗದೀಶ್, ಉಪ ವಿಭಾಗಾಧಿಕಾರಿ ಅಶೋಕ ತೇಲಿ ಸೇರಿದಂತೆ ಸ್ಮಾರ್ಟ್ ಸಿಟಿ, ಲೋಕೋಪಯೋಗಿ ಇಲಾಖೆ ಮತ್ತು ಮಹಾನಗರ ಪಾಲಿಕೆಯ ಅಧಿಕಾರಿಗಳು ಇದ್ದರು.

ABOUT THE AUTHOR

...view details