ಕರ್ನಾಟಕ

karnataka

ETV Bharat / state

ಸ್ಮಾರ್ಟ್ ಸಿಟಿ ಕಾಮಗಾರಿಗಳು ದುಬೈಗಿಂತ ದುಬಾರಿಯಾಗಿವೆ: ಸಚಿವ ಸತೀಶ್​ ಜಾರಕಿಹೊಳಿ ಆರೋಪ - ಸತೀಶ್​ ಜಾರಕಿಹೊಳಿ

ಆನೆ ಹೋಗಿದೆ ಕೇವಲ ಬಾಲ ಮಾತ್ರ ಉಳಿದಿದೆ, 20 ಕೋಟಿ ಅನುದಾನಕ್ಕಾಗಿ ನಾನು, ಲಕ್ಷ್ಮೀ ಹೆಬ್ಬಾಳ್ಕರ್​​ ಹಾಗೂ ರಾಜು ಸೇಠ್​ ಬಡಿದಾಡಿಕೊಳ್ಳುತ್ತಿದ್ದೇವೆ ಎಂದು ಸತೀಶ್​ ಜಾರಕಿಹೊಳಿ ತಿಳಿಸಿದ್ದಾರೆ.

Minister Sathish Jarakiholi
ಸಚಿವ ಸತೀಶ್​ ಜಾರಕಿಹೊಳಿ

By

Published : Jul 1, 2023, 7:01 PM IST

Updated : Jul 1, 2023, 7:37 PM IST

ಸಚಿವ ಸತೀಶ್​ ಜಾರಕಿಹೊಳಿ

ಬೆಳಗಾವಿ: ಬೆಳಗಾವಿ ಅಷ್ಟೇ ಅಲ್ಲದೇ ಎಲ್ಲ ಕಡೆ ಸ್ಮಾರ್ಟ್ ಸಿಟಿ ಕಾಮಗಾರಿಗಳಲ್ಲಿ ಮೂಲ ನೀಲನಕ್ಷೆ ಪ್ರಕಾರ ಆಗಿಲ್ಲ. ಮೊನ್ನೆ ಕ್ಯಾಬಿನೆಟ್​ನಲ್ಲೂ ಈ ಬಗ್ಗೆ ಚರ್ಚೆ ಆಗಿದೆ. ಅದಕ್ಕೆ ಸರ್ಕಾರದಿಂದ ಉನ್ನತ ಮಟ್ಟದ ತನಿಖೆ ಆಗಬೇಕು ಎಂದು ಲೋಕೋಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಅಭಿಪ್ರಾಯ ಪಟ್ಟರು.

ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿಯಲ್ಲಿ ಸ್ಮಾರ್ಟ್ ಸಿಟಿ ಅಧಿಕಾರಿಗಳ ಜೊತೆಗಿನ ಸಭೆ ಬಳಿಕ, ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸ್ಮಾರ್ಟ್ ಸಿಟಿ ಕಾಮಗಾರಿಗಳ ಪ್ರಥಮ ಸಭೆ ಮಾಡಿದ್ದೇವೆ. ಅಧಿಕಾರಿಗಳ ಜೊತೆಗೆ ನಮಗೆ ಇದ್ದಿದ್ದ ಸಂಶಯ, ಗೊಂದಲಗಳ ಬಗ್ಗೆ ಚರ್ಚಿಸಿದ್ದೇವೆ. ಮುಂಚೆ ಏನಿದೆ ಅದೇ ಮಾಹಿತಿ‌ ಅಧಿಕಾರಿಗಳು ಕೊಟ್ಟಿದ್ದಾರೆ. ಅದರಲ್ಲಿ ಸಂಶಯ ವ್ಯಕ್ತಪಡಿಸುವ ಸಾಕಷ್ಟು ಅಂಶಗಳಿವೆ. ಎಲ್ಲ ಮಾಹಿತಿ ಪಡೆದುಕೊಂಡು ಸಂಬಂಧಿಸಿದ ತಜ್ಞರ ಜೊತೆಗೆ ಚರ್ಚಿಸುತ್ತೇವೆ.

ಸರ್ಕಾರಕ್ಕೆ ಹೇಳುವಾಗ ನಮಲ್ಲಿ ನಿರ್ದಿಷ್ಟ ದಾಖಲೆ ಬೇಕಾಗುತ್ತದೆ. ಖಂಡಿತವಾಗಲೂ ಎಲ್ಲೋ ಸಮಸ್ಯೆ, ಓವರ್ ಎಸ್ಟಿಮೇಟ್ ಆಗಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಇದೆಲ್ಲ ನೋಡಿ ನಮಗೆ ಆಶ್ಚರ್ಯವಾಗಿದೆ. ಆದರೆ, ಅಧಿಕಾರಿಗಳು ತಮ್ಮದೇ ಆದ ಉತ್ತರ ಕೊಟ್ಟಿದ್ದಾರೆ. ಆದರೆ ಗುಣಮಟ್ಟದ ಕಾಮಗಾರಿಗಳು ಆಗಿಲ್ಲ. ಯೋಜನಾ ವೆಚ್ಚ ಹೆಚ್ಚಾಗಿದೆ. ವಿದ್ಯುತ್ ಕಂಬಕ್ಕೆ ಮಾರ್ಕೆಟ್​ನಲ್ಲಿ 20 ಸಾವಿರ ರೂ. ಬೆಲೆ ಇದ್ದರೆ, 60-70 ಸಾವಿರ ರೂ. ಹಾಕಿದ್ದಾರೆ ಎಂಬುದು ಗೊತ್ತಾಗುತ್ತಿದೆ. ಇದಕ್ಕೆ ಏನಾದರೂ ಮಾಡಬೇಕಾದರೆ ನಮ್ಮಲ್ಲಿ ಟೆಕ್ನಿಕಲ್ ದಾಖಲೆ ಬೇಕಾಗುತ್ತದೆ. ಬೇರೆ ಬೇರೆ ತಜ್ಞರಿಂದ ನಾವು ಮಾಹಿತಿ ತೆಗೆದುಕೊಂಡು ಸರ್ಕಾರದ ಗಮನಕ್ಕೆ ತರುತ್ತೇವೆ ಎಂದರು.

ಸಭೆ ಮಾಡಿ ನಿರ್ದೇಶನ ನೀಡಿದ್ದೇವೆ:ವ್ಯಾಕ್ಸಿನ್ ಡಿಪೋದಲ್ಲಿ ಪಾರ್ಕ್ ನಿರ್ಮಾಣಕ್ಕೆ ಆರೋಗ್ಯ ಇಲಾಖೆ ಅನುಮತಿ ಕೊಟ್ಟಿತ್ತು. ಕಟ್ಟಡ, ಕ್ಲಬ್ ಕಟ್ಟುವುದು ಸೇರಿ ಏನೆನೋ ಹೇಳುತ್ತಿದ್ದರು. ಆದರೆ, ಇದಕ್ಕೆ ಯಾವುದಕ್ಕೂ ಅನುಮತಿ ನೀಡಿರಲಿಲ್ಲ. ಈಗ ಒಂದು ಬಾರಿ ಸಭೆ ಮಾಡಿ ನಿರ್ದೇಶನ ನೀಡಿದ್ದು, ಆಸ್ತಿ ಆರೋಗ್ಯ ಇಲಾಖೆಗೆ ಸಂಬಂಧಿಸಿದ್ದು, ಇಲ್ಲಿ ಏನೆನೋ ಕಟ್ಟಿದರೆ ಮುಂದೆ ನಡೆಸುವವರು ಯಾರು..? ಅವರ ಅನುಮತಿ ಪಡೆದು ಮುಂದುವರಿಯುವಂತೆ ತಿಳಿಸಿದ್ದೇವೆ. ಎಲ್ಲಾ ಸ್ಮಾರ್ಟ್ ಸಿಟಿ ಕಾಮಗಾರಿಗಳ ಬಗ್ಗೆ ತನಿಖೆ ನಡೆಸುವ ಬಗ್ಗೆ ರಾಜ್ಯ ಮಟ್ಟದಲ್ಲೇ ತೀರ್ಮಾನವಾಗಿದೆ ಎಂದು ಮಾಧ್ಯಮಗಳ ಪ್ರಶ್ನೆಯೊಂದಕ್ಕೆ ಈ ರೀತಿ ಸತೀಶ ಉತ್ತರಿಸಿದರು.

’ಮೇಲ್ನೋಟಕ್ಕೆ ದುರ್ಬಳಕೆ ಆಗಿರುವ ಹಾಗೆ ಕಾಣಿಸ್ತಿದೆ’:ಅನುದಾನ ದುರ್ಬಳಕೆ ಆಗಿರುವ ವಿಚಾರಕ್ಕೆ ಮೇಲ್ನೋಟಕ್ಕೆ ಬಹಳಷ್ಟು ಆಗಿದೆ. ಕಾನ್ಸ್ಟಂಟ್ ರಸ್ತೆ, ಲೈಟ್, ಉದ್ಯಾನ ಸೇರಿ ಏನೆನೋ ಮಾಡುತ್ತೇವೆಂದು ಹೇಳಿದ್ದನ್ನು ನೋಡಿದರೆ ಇದು ದುಬೈಗಿಂತ ದುಬಾರಿ ಎನಿಸುತ್ತಿದೆ. ಹೀಗಾಗಿ ಈ ಸಂಬಂಧ ಒಂದು ಸಮಿತಿ ರಚನೆ ಮಾಡಿ ತನಿಖೆ ಮಾಡಬೇಕಿದೆ ಎಂದರು. ಇನ್ನು ಸ್ಮಾರ್ಟ್ ಸಿಟಿ ಅನುದಾನದಲ್ಲಿ ಎಷ್ಟು ಹಣ ಉಳಿದಿದೆ ಎಂಬ ಮಾಧ್ಯಮಗಳ ಪ್ರಶ್ನೆಗೆ, ಈಗ ಉಳಿದರೋದು ಜಿರೋ ಜಿರೋ ಜಿರೋ ಎಂದ ಸತೀಶ ಜಾರಕಿಹೊಳಿ, 1 ಸಾವಿರ ಕೋಟಿ ರೂ. ಅನುದಾನ ಹೋಗಿದೆ. ಹೀಗಾಗಿ 20 ಕೋಟಿ ರೂ. ಅನುದಾನಕ್ಕಾಗಿ ಲಕ್ಷ್ಮೀ ಹೆಬ್ಬಾಳ್ಕರ್, ರಾಜು ಸೇಠ್ ಮತ್ತು ನಾನು ಬಡಿದಾಡುತ್ತಿದ್ದೇವೆ. ಆನೆ ಹೋಗಿದೆ, ಕೇವಲ ಬಾಲ ಮಾತ್ರ ಉಳಿದಿದೆ ಎಂದರು.

ನಾನು ಸಚಿವನಾಗಿದ್ದೇನೆ, ಲೋಕಸಭೆಗೆ ಸ್ಪರ್ಧೆ ಮಾಡಲ್ಲ:ಲೋಕಸಭೆ ಚುನಾವಣೆ ಸಂಬಂಧ ಬಿಜೆಪಿ ನಾಯಕರು ಸಭೆ ಮಾಡುತ್ತಿದ್ದು, ನೀವು ಇನ್ನು ಸಭೆ ಮಾಡುತ್ತಿಲ್ಲವಲ್ಲ ಎಂಬ ಮಾಧ್ಯಮಗಳ ಪ್ರಶ್ನೆಗೆ, ನಾವು ಈಗಾಗಲೇ ಪ್ರಾರಂಭಿಸಿದ್ದೇವೆ. ಅಧಿವೇಶನ ಸಂದರ್ಭದಲ್ಲಿ ಶಾಸಕರ ಸಭೆ ಮಾಡಿ, ಬೆಳಗಾವಿ ಮತ್ತು ಚಿಕ್ಕೋಡಿ ಎರಡೂ ಲೋಕಸಭೆಗೆ ಯೋಗ್ಯ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತೇವೆ ಎಂದ ಸತೀಶ ಜಾರಕಿಹೊಳಿ ಅವರು, ನಾನೇ ಸ್ಪರ್ಧಿಸುತ್ತೇನೆ ಎಂದು ಹೇಳಿದ್ದೀರಿ ಎಂಬ ವಿಚಾರಕ್ಕೆ ನಮ್ಮ ಸರ್ಕಾರ ಬರದಿದ್ದರೆ, ಮಂತ್ರಿ ಆಗದಿದ್ದರೆ ಸ್ಪರ್ಧಿಸುತ್ತೇನೆ ಎಂದಿದ್ದೆ, ಈಗ ಮಂತ್ರಿ ಆಗಿದ್ದೇನೆ. ಹೀಗಾಗಿ ಸ್ಪರ್ಧೆ ಮಾಡಲ್ಲ ಎಂದರು.

ಚುನಾವಣೆ ವರ್ಷದಲ್ಲಿ ರಾಜಕಾರಣಿಗಳು ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಬೇಕಾಬಿಟ್ಟಿಯಾಗಿ ನೀರು ಬಿಟ್ಟಿದ್ದರಿಂದ ಜಲಾಶಯಗಳಲ್ಲಿ ನೀರು ಖಾಲಿಯಾಗಿವೆ ಎಂಬ ಮಾಧ್ಯಮಗಳ ಪ್ರಶ್ನೆಗೆ, ಕುಡಿಯುವ ನೀರಿಗೆ ಯಾವುದೇ ರೀತಿ ಸಮಸ್ಯೆ ಇಲ್ಲ. ಇನ್ನು ಎರಡು ತಿಂಗಳವರೆಗೂ ಆಗುವಷ್ಟು 2 ಟಿಎಂಸಿ ನೀರು ಹಿಡಕಲ್ ಜಲಾಶಯದಲ್ಲಿ ಸಂಗ್ರಹವಿದೆ. ಹಿರಣ್ಯಕೇಶಿ, ಘಟಪ್ರಭಾ ನದಿಗೆ ನೀರು ಬರಲು ಪ್ರಾರಂಭವಾಗಿದೆ. ಇನ್ನೊಂದು ವಾರದಲ್ಲಿ ಸುಧಾರಣೆ ಆಗಲಿದೆ. ಕಳೆದ ವರ್ಷ ಎಪ್ರಿಲ್, ಮೇ ತಿಂಗಳಲ್ಲಿ ಮೂರನಾಲ್ಕು ದೊಡ್ಡ ಮಳೆ ಆಗಿದ್ದವು, ಹೀಗಾಗಿ ಆಲಮಟ್ಟಿ ಜಲಾಶಯದಲ್ಲಿ ಹೆಚ್ಚಿನ ಪ್ರಮಾಣದ ನೀರು ಸಂಗ್ರಹವಿತ್ತು ಎಂದರು‌.

ಇದನ್ನೂ ಓದಿ:ಸಿಎಂ ಸಿದ್ದರಾಮಯ್ಯ ಡಿಜಿಟಲ್ ಸಾಕ್ಷ್ಯಗಳ ನಿರ್ವಹಣೆ ಪುಸ್ತಕ: ಮೊಬೈಲ್ ಆ್ಯಪ್‍ ಬಿಡುಗಡೆ

Last Updated : Jul 1, 2023, 7:37 PM IST

ABOUT THE AUTHOR

...view details