ಬೆಳಗಾವಿ :ಮಾನವೀಯ ಸಂಬಂಧಗಳೇ ನಶಿಸಿ ಹೋಗಿರುವ ಇಂದಿನ ಕಾಲಘಟ್ಟದಲ್ಲಿ ಸ್ವಂತ ಮಕ್ಕಳೇ ತಂದೆ - ತಾಯಿಯನ್ನು ಬೀದಿಗೆ ಬಿಟ್ಟು ಬಿಡುತ್ತಾರೆ. ಹೀಗೆ ಅತಂತ್ರವಾದರಿಗೆ ನಿರಾಶ್ರಿತ ಕೇಂದ್ರಗಳು, ವೃದ್ಧಾಶ್ರಮಗಳು, ಅನಾಥಾಶ್ರಮಗಳು ಬೆಳಕಾಗಿವೆ. ಅಲ್ಲದೇ, ನಿರಾಶ್ರಿತ ಕೇಂದ್ರಗಳಲ್ಲಿ ನಿರ್ಗತಿಕರಿಗೆ ಪಾಲಿನ ಅನ್ನ, ಆಶ್ರಯದ ಜೊತೆಗೆ ಕೌಶಲ್ಯ ತರಬೇತಿ ನೀಡಲಾಗುತ್ತಿದೆ.
ನಗರ ನಿರಾಶ್ರಿತರ ಜೀವನೋಪಾಯ ಮತ್ತು ಕೌಶಲ್ಯ ಅಭಿವೃದ್ಧಿಗಾಗಿ ದೀನದಯಾಳ ಅಂತ್ಯೋದಯ ಯೋಜನೆಯಡಿ ಕೇಂದ್ರ ಸರ್ಕಾರ ನಿರಾಶ್ರಿತ ಕೇಂದ್ರಗಳನ್ನು ತೆರೆಯಲಾಗದೆ. ಸುಪ್ರೀಂಕೋರ್ಟ್ ಆದೇಶದಂತೆ ಒಂದು ಲಕ್ಷ ಜನಸಂಖ್ಯೆಗೆ 1 ನಿರಾಶ್ರಿತ ಕೇಂದ್ರ ಇರಬೇಕು. ಹಾಗಾಗಿ ಬೆಳಗಾವಿ ನಗರದ 5 ಲಕ್ಷ ಜನಸಂಖ್ಯೆ ಅನುಸಾರ ಒಟ್ಟು 5 ಕೇಂದ್ರಗಳು ಮಹಾನಗರ ಪಾಲಿಕೆಯಡಿ ಕಾರ್ಯನಿರ್ವಹಿಸುತ್ತಿವೆ. ಇದರಲ್ಲಿ ಒಂದು ಮಹಿಳೆಯರಿಗೆ ಮೀಸಲಿದೆ. ಬೆಳಗಾವಿಯ ಖಾಸಬಾಗ, ಮಹಾಂತೇಶ ನಗರ, ಮಾಳಮಾರುತಿ ಹೊರವಲಯ, ಮಹಾದ್ವಾರ ರೋಡ್, ರಾಮತೀರ್ಥ ನಗರದ ಕೇಂದ್ರಗಳಲ್ಲಿ ಪುರುಷ ಮತ್ತು ಮಹಿಳೆಯರು ಸೇರಿ ಒಟ್ಟು 92 ನಿರಾಶ್ರಿತರು ಆಶ್ರಯ ಪಡೆದಿದ್ದಾರೆ.
ಬೆಳಗಾವಿಯ ಐದು ಕೇಂದ್ರಗಳನ್ನು ಜಯ ಭಾರತ ಮಾತಾ ನಗರ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯು ಮಹಾನಗರ ಪಾಲಿಕೆ ಅನುದಾನದಡಿ ನಿರ್ವಹಿಸುತ್ತಿದೆ. ಸಾರ್ವಜನಿಕರು ನೀಡುವ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳುವ ಇಲ್ಲಿನ ಸಿಬ್ಬಂದಿ ನಿರಾಶ್ರಿತರಿಗೆ ವೈದ್ಯಕೀಯ ತಪಾಸಣೆ ಮಾಡಿಸಿ, ನಿರಾಶ್ರಿತ ಕೇಂದ್ರದಲ್ಲಿ ದಾಖಲಿಸಿಕೊಳ್ಳುತ್ತಾರೆ. ಅವರಿಗೆ ಇಲ್ಲಿ ಉಚಿತ ಊಟ, ವಸತಿ ನೀಡಲಾಗುತ್ತಿದೆ.