ಕರ್ನಾಟಕ

karnataka

ETV Bharat / state

ಸರ್ಕಾರ ಪತನವಾಗದಿದ್ದರೆ ರಾಜೀನಾಮೆ ಕೊಡ್ತಾರಾ..? ವಿಪಕ್ಷಗಳಿಗೆ ಶಿವಾನಂದ ಪಾಟೀಲ ಟಾಂಗ್ - ​ ETV Bharat Karnataka

ರಾಜ್ಯ ಸರ್ಕಾರ ಬೀಳುತ್ತದೆ ಎಂಬ ವಿಪಕ್ಷಗಳ ಹೇಳಿಕೆ ಸಚಿವ ಶಿವಾನಂದ ಪಾಟೀಲ ತೀರುಗೇಟು ನೀಡಿದರು.

ಸಚಿವ ಶಿವಾನಂದ ಪಾಟೀಲ
ಸಚಿವ ಶಿವಾನಂದ ಪಾಟೀಲ

By ETV Bharat Karnataka Team

Published : Oct 9, 2023, 4:46 PM IST

ಬೆಳಗಾವಿ :ಸರ್ಕಾರ ಪತನವಾಗುತ್ತದೆ ಎಂದು ಹೇಳುವವರನ್ನೇ ಕೇಳಿ. ಸರ್ಕಾರ ಪತನವಾಗದಿದ್ದರೆ ರಾಜೀನಾಮೆ ಕೊಡ್ತಾರಾ..? ಎಂದು ಸಕ್ಕರೆ, ಸಹಕಾರ, ಕೃಷಿ ಮಾರುಕಟ್ಟೆ ಮತ್ತು ಜವಳಿ ಸಚಿವ ಶಿವಾನಂದ ಪಾಟೀಲ ಅವರು ವಿಪಕ್ಷಗಳಿಗೆ ಟಾಂಗ್​ ಕೊಟ್ಟರು.

ಬೆಳಗಾವಿಯ ಪ್ರವಾಸಿ ಮಂದಿರದಲ್ಲಿಂದು ಮಾಧ್ಯಮಗಳ ಜೊತೆಗೆ ಸಂಕ್ರಾಂತಿ ನಂತರ ಸರ್ಕಾರ ಪತನವಾಗುತ್ತದೆ ಎಂಬ ವಿಪಕ್ಷಗಳ ಟೀಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಯಾರು ಸರ್ಕಾರ ಪತನವಾಗುತ್ತದೆ ಎಂದು ಹೇಳುತ್ತಾರೆ ಅವರಿಗೆ ಕೇಳಿ ಎಂದರು.

ಕಬ್ಬಿನ ತೂಕದಲ್ಲಿ ರೈತರಿಗೆ ಆಗುತ್ತಿರುವ ಮೋಸ ತಡೆಗಟ್ಟಲು, ಸಕ್ಕರೆ ಕಾರ್ಖಾನೆಗಳಲ್ಲಿ ಸರ್ಕಾರದಿಂದ ತೂಕದ ಮಾಪಕಗಳನ್ನು ಅಳವಡಿಸಲಿದ್ದೇವೆ. ಮುಂದಿನ ವರ್ಷ ಈ ಯೋಜನೆ ಅನುಷ್ಠಾನಕ್ಕೆ ಬರಲಿದೆ. ಸಕ್ಕರೆ ಕಾರ್ಖಾನೆಗಳೊಂದಿಗೆ ಸಭೆ ನಡೆಸಿ, ನಿಗದಿತ ದಿನಾಂಕದ ಪ್ರಕಾರ ಕಬ್ಬು ನುರಿಸುವಿಕೆ ಪ್ರಕ್ರಿಯೆ ಆರಂಭಿಸುವಂತೆ ಸೂಚಿಸಿದ್ದೇವೆ. ಅದೇ ರೀತಿ ಕೇಂದ್ರ ಸರ್ಕಾರವು ಕಬ್ಬಿಗೆ ನ್ಯಾಯಯುತ ಮತ್ತು ಲಾಭದಾಯಕ ದರ(ಎಫ್‌ಆರ್‌ಪಿ) ಘೋಷಿಸಿದೆ. ಪ್ರಸಕ್ತ ಹಂಗಾಮಿನಲ್ಲಿ ಸಕ್ಕರೆ ಕಾರ್ಖಾನೆಗಳು ಅದರ ಪ್ರಕಾರವೇ ದರ ನೀಡಬೇಕು ಎಂದು ಸಚಿವರು ತಿಳಿಸಿದರು.

ಸಹಕಾರಿ ಸಂಘಗಳು ಮತ್ತು ಅರ್ಬನ್ ಬ್ಯಾಂಕ್‌ಗಳಲ್ಲಿ ಜನರು ಹೆಚ್ಚಿನ ಪ್ರಮಾಣದಲ್ಲಿ ಹಣ ಠೇವಣಿ ಇಟ್ಟಿದ್ದು, ಅಲ್ಲಿ ಅವರಿಗೆ ಹೆಚ್ಚಿನ ಬಡ್ಡಿದರ ಸಿಗುತ್ತದೆ. ಆದರೆ, ನಬಾರ್ಡ್ ನಿಂದ ಡಿಸಿಸಿ ಬ್ಯಾಂಕ್‌ಗೆ ಅನುದಾನ ಬರುವಲ್ಲಿ ಮೂರು ತಿಂಗಳು ತಡವಾಗುತ್ತಿದೆ. ಡಿಸಿಸಿ ಬ್ಯಾಂಕ್‌ಗಳು ರೈತರಿಗೆ ರಿಯಾಯಿತಿ ಬಡ್ಡಿ ದರದಲ್ಲಿ ಸಾಲ ನೀಡುವ ಸ್ಥಿತಿಯಲ್ಲಿಲ್ಲ. ಹಾಗಾಗಿ ಡಿಸಿಸಿ ಬ್ಯಾಂಕ್‌ಗಳಿಗೆ ರಿಯಾಯಿತಿ ದರದಲ್ಲಿ ಸಾಲ ಕೊಡುವಂತೆ ನಬಾರ್ಡ್‌ಗೆ ನಿರ್ದೇಶನ ಮಾಡುವಂತೆ ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಸದ್ಯದಲ್ಲೇ ಪತ್ರ ಬರೆಯಲಾಗುವುದು ಎಂದು ಸಚಿವ ಶಿವಾನಂದ ಪಾಟೀಲ ಮಾಹಿತಿ ನೀಡಿದರು.

ಭಾರತ ದೇಶದ ದಕ್ಷಿಣ ಭಾಗದಲ್ಲಿ ಬರಗಾಲ ಸ್ಥಿತಿಯಿದೆ. ಈ ವರ್ಷ ಕಬ್ಬಿನ ಇಳುವರಿ ಶೇ. 30ರಿಂದ 40ರಷ್ಟು ಕುಸಿಯುವ ಭೀತಿ ಎದುರಾಗಿದ್ದು, ಎಥೆನಾಲ್ ಸಹ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆ ಆಗುತ್ತಿರುವುದರಿಂದ ರೈತರಿಗೆ ಸಮಸ್ಯೆಯಾಗಿದೆ. ಕೇಂದ್ರ ಸರ್ಕಾರವು ಸಕ್ಕರೆ ರಫ್ತು ನಿಷೇಧಿಸಿದೆ. ರೈತರ ಹಿತದೃಷ್ಟಿಯಿಂದ ಸಕ್ಕರೆ ರಫ್ತು ಮೇಲಿನ ನಿಷೇಧವನ್ನು ಕೇಂದ್ರವು ಹಿಂಪಡೆಯಬೇಕು. ಈರುಳ್ಳಿ, ಅಕ್ಕಿ ಮತ್ತಿತರ ಆಹಾರ ಪದಾರ್ಥಗಳ ರಫ್ತಿಗೂ ನಿಷೇಧ ಹೇರಿದೆ. ಕೇಂದ್ರದ ನೀತಿಗಳು ರೈತ ವಿರೋಧಿಯಾಗಿವೆ ಎಂದು ಶಿವಾನಂದ ಪಾಟೀಲ ಆರೋಪಿಸಿದರು.

ಕಬ್ಬಿನ ಬೆಲೆ ನಿಗದಿ ಸೇರಿ ವಿವಿಧ ಬೇಡಿಕೆಗಳ ಕುರಿತು ಚರ್ಚಿಸಲು ಮಹಾರಾಷ್ಟ್ರದ ಮಾಜಿ ಸಂಸದ ರಾಜು ಶೆಟ್ಟಿ ನೇತೃತ್ವದಲ್ಲಿ ರೈತರ ನಿಯೋಗ ನಮ್ಮ ಬಳಿ ಬರುತ್ತಿದೆ. ಅವರ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇವೆ ಎಂದು ಸಚಿವ ಶಿವಾನಂದ ಪಾಟೀಲ ನುಡಿದರು.

ಇದನ್ನೂ ಓದಿ :ಸರ್ಕಾರದ ಆರನೇ ಗ್ಯಾರಂಟಿ ಅಂದರೆ ಅದು ರೈತರ ಆತ್ಮಹತ್ಯೆ : ಮಾಜಿ ಸಚಿವ ಜಿ ಟಿ ದೇವೇಗೌಡ

ABOUT THE AUTHOR

...view details