ಶೂನ್ಯ ವೇಳೆ ಕೊಬ್ಬರಿ ಬೆಲೆ ಕುಸಿತ ವಿಚಾರ ಪ್ರಸ್ತಾಪ: ಶಿವಲಿಂಗೇಗೌಡ-ಹೆಚ್ ಡಿ ರೇವಣ್ಣ ವಾಕ್ಸಮರ ಬೆಳಗಾವಿ/ ಬೆಂಗಳೂರು :ಕೊಬ್ಬರಿ ಬೆಲೆ ಕುಸಿತದ ವಿಚಾರ ವಿಧಾನಸಭೆಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಶಾಸಕರ ಮಧ್ಯೆ ವಾಕ್ಸಮರಕ್ಕೆ ಕಾರಣವಾಗಿದೆ. ಕೊಬ್ಬರಿ ಬೆಲೆ ಕುಸಿತದ ಬಗ್ಗೆ ಪ್ರಸ್ತಾಪಿಸುವ ವಿಚಾರಕ್ಕೆ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ಹಾಗೂ ಜೆಡಿಎಸ್ ಶಾಸಕ ಹೆಚ್ ಡಿ ರೇವಣ್ಣ ಅವರ ನಡುವೆ ವಿಧಾನಸಭೆಯಲ್ಲಿ ಮಂಗಳವಾರ ಜಟಾಪಟಿ ನಡೆಯಿತು.
ಪ್ರಶ್ನೋತ್ತರ ಸಮಯ ಮುಗಿದ ನಂತರ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಲು ಸ್ಪೀಕರ್ ಯು ಟಿ ಖಾದರ್ ಅವರು, ಕೊಬ್ಬರಿ ಬೆಲೆ ವಿಚಾರದ ಬಗ್ಗೆ ಪ್ರಸ್ತಾಪಿಸಲು ಶಿವಲಿಂಗೇಗೌಡರಿಗೆ ಅನುವು ಮಾಡಿಕೊಟ್ಟರು. ಅಷ್ಟರಲ್ಲೇ ಜೆಡಿಎಸ್ ಹಿರಿಯ ಶಾಸಕ, ಮಾಜಿ ಸಚಿವ ಹೆಚ್ ಡಿ ರೇವಣ್ಣ ಅವರು ಮಧ್ಯಪ್ರವೇಶಿಸಿ ತಮಗೆ ವಿಷಯ ಪ್ರಸ್ತಾಪಿಸಲು ಮೊದಲು ಅವಕಾಶ ನೀಡಬೇಕೆಂದು ಪಟ್ಟು ಹಿಡಿದರು. ಆಗ ಸದನದಲ್ಲಿ ಜೆಡಿಎಸ್ ಸದಸ್ಯರು ಹಾಗೂ ಶಿವಲಿಂಗೇಗೌಡರ ನಡುವೆ ಜಟಾಪಟಿಗೆ ಕಾರಣವಾಯಿತು. ಬಳಿಕ ಜೆಡಿಎಸ್ ಸದಸ್ಯರು ಧರಣಿಗೆ ಮುಂದಾದರು. ಜೆಡಿಎಸ್ ಸದಸ್ಯರ ನಡೆಯಿಂದ ಸಿಟ್ಟಿಗೆದ್ದ ಶಿವಲಿಂಗೇಗೌಡ, ರೇವಣ್ಣ ವಿರುದ್ಧ ಸದನದಲ್ಲಿ ವಾಗ್ದಾಳಿ ನಡೆಸಿದ್ದರಿಂದ ಗದ್ದಲದ ವಾತಾವರಣ ನಿರ್ಮಾಣವಾಯಿತು.
ರೇವಣ್ಣ ಅವರು ಈ ರೀತಿ ವಿಷಯ ಪ್ರಸ್ತಾಪಿಸಲು ಅಡ್ಡಿ ಮಾಡುವುದು ಸರಿಯಲ್ಲ ಎಂದು ಹೇಳಿದಾಗ, ಜೆಡಿಎಸ್ ಸದಸ್ಯರು ಶಿವಲಿಂಗೇಗೌಡರ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದರು. ನಂತರ ಅವರ ಜೊತೆ ಮಾತಿನ ಚಕಮಕಿಗೆ ಇಳಿದರು. ಆಗ ಸ್ಪೀಕರ್, ನಿನ್ನೆಯೇ ಶಿವಲಿಂಗೇಗೌಡರು ವಿಷಯ ಪ್ರಸ್ತಾಪಿಸಲು ಅವಕಾಶ ಕೋರಿದ್ದರು. ಅವರು ಮಾತನಾಡಿದ ನಂತರ ನಿಮಗೆ ಅವಕಾಶ ನೀಡುತ್ತೇನೆ ಎಂದು ಹೇಳಿದರು. ಇದಕ್ಕೆ ಒಪ್ಪದ ಹೆಚ್ ಡಿ ರೇವಣ್ಣ ಅವರು, ನಮಗೆ ಮೊದಲು ಅವಕಾಶ ನೀಡಿ ಎಂದು ಒತ್ತಾಯಿಸಿದರು.
ಇದರಿಂದ ಪುನಃ ಸಿಟ್ಟಿಗೆದ್ದ ಶಿವಲಿಂಗೇಗೌಡರು, ಇವರಿಗೇನು ಮಾನ ಮರ್ಯಾದೆ ಇದೆಯೇ? ಮರ್ಯಾದೆ ಇರುವ ಜನ ಈ ರೀತಿ ಮಾಡುತ್ತಾರೆಯೇ? ಇವರೇನು ಹಾಸನ ಜಿಲ್ಲೆಯನ್ನು ಗುತ್ತಿಗೆ ತೆಗೆದುಕೊಂಡಿದ್ದಾರೆಯೇ? ನನಗೆ ಮಾತನಾಡಲು ಅಡ್ಡಿಪಡಿಸುವುದು ಸರಿಯೇ? ಮರ್ಯಾದಸ್ಥರು ಈ ರೀತಿ ಮಾಡುತ್ತಾರೆಯೇ? ನಾನು ಮಾತನಾಡಲು ಅಡ್ಡಿಪಡಿಸುವ ಕೆಟ್ಟಬುದ್ಧಿಯನ್ನು ಇವರು ಬಿಡಬೇಕು ಎಂದು ರೇವಣ್ಣ ವಿರುದ್ಧ ಹರಿಹಾಯ್ದರು. ಈ ವೇಳೆ ಮಧ್ಯಪ್ರವೇಶಿಸಿದ ಸ್ಪೀಕರ್ ಶೂನ್ಯವೇಳೆಯ ಪ್ರಶ್ನೆ ಕುರಿತು ಶಿವಲಿಂಗೇಗೌಡರು ನಿನ್ನೆಯೇ ನನಗೆ ಮನವಿ ಕೊಟ್ಟಿದ್ದರು. ನೀವು(ರೇವಣ್ಣ) 10 ನಿಮಿಷದ ಹಿಂದೆಯಷ್ಟೇ ಬರೆದು ಕೊಟ್ಟಿದ್ದೀರಿ ಎಂದರು. ಆದರೂ ಗದ್ದಲ ಮುಂದುವರಿದ ಕಾರಣ ಸ್ಪೀಕರ್ ಸದನವನ್ನು ಮಧ್ಯಾಹ್ನಕ್ಕೆ ಮುಂದೂಡಿದ್ದರು.
ಇದನ್ನೂ ಓದಿ :ಆರ್ಥಿಕ ಇಲಾಖೆ ಅನುಮತಿ ಸಿಗುತ್ತಿದ್ದಂತೆ ಹಂಸಧ್ವನಿ ಕಿವುಡು, ಮೂಕ ಮಕ್ಕಳ ವಸತಿ ಶಾಲೆ ಪುನರಾರಂಭ: ಲಕ್ಷ್ಮಿ ಹೆಬ್ಬಾಳ್ಕರ್