ಬೆಳಗಾವಿ:ರಾಜ್ಯದಲ್ಲಿ ಕಾಂಗ್ರೆಸ್ ಗ್ಯಾರಂಟಿ ಯೋಜನೆ ಮತ್ತು ಅನುಷ್ಠಾನದ ಬಗ್ಗೆ ರಾಜಕಾರಣಿಗಳು ಸೇರಿದಂತೆ ಸಾರ್ವಜನಿಕರು ಚರ್ಚೆ ನಡೆಸುತ್ತಿದ್ದಾರೆ. ಮತ್ತೊಂದೆಡೆ ವಿದ್ಯುತ್ ದರ ಏರಿಕೆ ಖಂಡಿಸಿ ಬೆಳಗಾವಿ ಕೈಗಾರಿಕಾ ಹಾಗೂ ವಾಣಿಜ್ಯೋದ್ಯಮ ಸಂಸ್ಥೆ ನೇತೃತ್ವದಲ್ಲಿ ಹಲವು ಉದ್ಯಮಿಗಳು ನಗರದಲ್ಲಿ ಇಂದು ಮೌನ ಮೆರವಣಿಗೆ ನಡೆಸುವ ಮೂಲಕ ತಮ್ಮ ಅಸಮಾಧಾನ ಹೊರ ಹಾಕಿದರು. ನಗರದ ರಾಣಿ ಚೆನ್ನಮ್ಮ ವೃತ್ತದಿಂದ ಆರಂಭವಾದ ಮೆರವಣಿಗೆ ಜಿಲ್ಲಾಧಿಕಾರಿ ಕಚೇರಿವರೆಗೂ ನಡೆಯಿತು.
ತಕ್ಷಣವೇ ವಿದ್ಯುತ್ ದರ ಇಳಿಸಿ, ರಾಜ್ಯದಲ್ಲಿ ಉದ್ಯಮಸ್ನೇಹಿ ವಾತಾವರಣ ನಿರ್ಮಾಣ ಮಾಡಬೇಕು. ಇಲ್ಲದಿದ್ದರೆ ನಾವೆಲ್ಲಾ ಮಹಾರಾಷ್ಟ್ರಕ್ಕೆ ವಲಸೆ ಹೋಗುವುದು ಅನಿವಾರ್ಯ ಆಗುತ್ತದೆ ಎಂದು ಎಚ್ಚರಿಸಿದ ಉದ್ಯಮಿಗಳು, ತಮ್ಮ ಬೇಡಿಕೆ ಈಡೇರಿಸುವಂತೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿಯನ್ನು ಸಲ್ಲಿಸಿದರು.
ಇದೇ ವೇಳೆ ಈಟಿವಿ ಭಾರತ ಜೊತೆಗೆ ಮಾತನಾಡಿದ ವಾಣಿಜ್ಯೋದ್ಯಮ ಸಂಸ್ಥೆ ಮಾಜಿ ಅಧ್ಯಕ್ಷ ರೋಹನ್ ಜವಳಿ, ಮನವಿ ಸಲ್ಲಿಸಿದ ಬಳಿಕ ಹೆಸ್ಕಾಂನ ಹಣಕಾಸು ಇಲಾಖೆ ಮುಖ್ಯಸ್ಥರು ಮತ್ತು ಮುಖ್ಯ ಎಂಜಿನಿಯರ್ ಜೊತೆಗೆ ಸಭೆ ಮಾಡಿದ್ದೇವೆ. ಇಂದು ಸಂಜೆ ಫೌಂಡ್ರಿ ಕ್ಲಸ್ಟರ್ಗೆ ಹೆಸ್ಕಾಂ ಎಂಡಿ ಬರುತ್ತಿದ್ದಾರೆ. ಅವರ ಜೊತೆ ಸಭೆಯಲ್ಲಿ ಡಿಸಿಯವರು ಭಾಗಿಯಾಗುತ್ತೇನೆ ಎಂದಿದ್ದಾರೆ. ಇವತ್ತಿನ ಸಭೆಯಲ್ಲಿ ದರ ಹೆಚ್ಚಳ ಹಿಂಪಡೆಯುವಂತೆ ಮನವಿ ಮಾಡಿಕೊಳ್ಳುತ್ತೇವೆ. ಒಂದು ವೇಳೆ ದರ ಹೆಚ್ಚಳ ಹಿಂಪಡೆಯದಿದ್ದರೆ ಒಂದು ದಿನ ರಾಜ್ಯಾದ್ಯಂತ ಕೈಗಾರಿಕೆಗಳನ್ನು ಬಂದ್ ಮಾಡಲು ನಿರ್ಧರಿಸಿದ್ದೇವೆ. ಅದಕ್ಕೂ ಮೀರಿ ಮಾಡದಿದ್ದರೆ ಬಿಲ್ ಕಟ್ಟಬಾರದು ಎಂಬ ಚರ್ಚೆ ನಡೆದಿದೆ. ನಂತರ ಅವರೇ ಬಂದು ನಮ್ಮ ಕೈಗಾರಿಕೆಗಳನ್ನು ಬಂದ್ ಮಾಡಲಿ. ಹೋರಾಟ ಮಾಡಲು ನಮಗೆ ಸರ್ಕಾರ ಅವಕಾಶ ಮಾಡಿಕೊಡಬಾರದು. ಒಂದೇ ಬಾರಿ ಶೇ 60 ರಷ್ಟು ಏರಿಕೆ ಮಾಡಿದರೆ ಹೇಗೆ ಬಿಲ್ ತುಂಬುವುದು ಎಂದು ಪ್ರಶ್ನಿಸಿದರು.