ಚಿಕ್ಕೋಡಿ :ಚಿಕ್ಕೋಡಿ ಲೋಕಸಭಾ ವ್ಯಾಪ್ತಿಗೆ ಬರುವ ರಾಯಬಾಗ ಮತ್ತು ಕುಡಚಿ ಮತಕ್ಷೇತ್ರವನ್ನು ನಮ್ಮ ನಮ್ಮ ಒಳ ಜಗಳದಿಂದ ಸೋತ್ತಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.
ರಾಯಬಾಗ ಪಟ್ಟಣದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಕುಡಚಿ ಹಾಗೂ ರಾಯಬಾಗದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸೋತ ಹಾಗೆ ಪ್ರಕಾಶ್ ಹುಕ್ಕೇರಿ ಅವರು ಸೋಲಬಾರದು. ಮೋದಿ ಅವರು ಬರೀ ಭಾಷಣಕಾರ. ಅವರ ಅಚ್ಚೇ ದಿನ್ ಎಲ್ಲಿದೆ. ಮೋದಿ ಮಾಯಾಲೋಕ ಸೃಷ್ಠಿ ಮಾಡುತ್ತಾರೆ ಎಂದು ಜನ ನಂಬಿದ್ದರು. ಆದರೆ, ಐದು ವರ್ಷಗಳಲ್ಲಿ ಬಂಡವಾಳ ಶಾಹಿಗಳಿಗೆ ಒಳ್ಳೇ ದಿನಗಳು ಬಂದವೆ ಹೊರತು ಬಡವರಿಗೆ, ದಲಿತರಿಗೆ, ಯಾರಿಗೂ ಸಹ ಅಚ್ಛೇ ದಿನ್ ಬರಲೇ ಇಲ್ಲ ಎಂದು ಮೋದಿ ವಿರುದ್ದ ಕಿಡಿಕಾರಿದರು.
ಮಾಜಿ ಸಿಎಂ ಸಿದ್ದರಾಮಯ್ಯ ಭಾಷಣ ನಾನು ಈ ಭಾಗದ ಕೆರೆ ತುಂಬಿಸುವ ಯೋಜನೆಗೆ 92 ಕೋಟಿ ರೂಪಾಯಿಗಳನ್ನು ಕೊಟ್ಟಿದ್ದೀನಿ. ಆದರೆ, ಬಿಜೆಪಿ ಅಭ್ಯರ್ಥಿ ಏನಾದರೂ ಕೊಟ್ಟರಾ. ಅಂಬೇಡ್ಕರ್ ಅವರ ಸಂವಿಧಾನ ಎಲ್ಲರಿಗೂ ಸಮಾನ ಅವಕಾಶ ನೀಡುತ್ತದೆ. ಅದಕ್ಕಾಗಿ ಬಿಜೆಪಿಯವರು ಸಂವಿಧಾನ ಬದಲಾವಣೆ ಮಾಡಬೇಕು ಎನ್ನುತ್ತಿದ್ದಾರೆ. ಬಿಜೆಪಿ ಪಕ್ಷ 27 ಜನರಲ್ಲಿ ಹಿಂದುಳಿದ ಒಬ್ಬನಿಗೂ ಸಹ ಟಿಕೆಟ್ ನೀಡಿಲ್ಲ. ಈಶ್ವರಪ್ಪ ನಾಲಿಗೆ ಉದ್ದ ಬಿಡುತ್ತಾನೆ. ಒಬ್ಬೆನೇ ಒಬ್ಬ ಕುರುಬನಿಗೆ ಟಿಕೆಟ್ ಕೊಡಿಸೋಕೆ ಆಗಿಲ್ಲ ಅವನಿಗೆ. ಮಾತೆತ್ತಿದರೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಅಂತಿಯಾ ಯಾರಿಗಾದರೂ ಟಿಕೆಟ್ ನೀಡಿದ್ದೀಯಾ. ಮುಸ್ಲಿಂಮರಿಗೆ ಟಿಕೆಟ್ ಕೊಡಿ ಎಂದರೆ ಬಿಜೆಪಿ ಕಸ ಹೊಡಿಲಿ ಆಮೇಲೆ ಟಿಕೆಟ್ ಕೊಡುತ್ತೀನಿ ಎನ್ನುತ್ತಾರೆ ಎಂದು ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡರು.
ನಮ್ಮ ಮುಖ ನೋಡಬೇಡಿ ಮೋದಿ ಮುಖ ನೋಡಿ ವೋಟ್ ಹಾಕಿ ಎಂಬ ಬಿಜೆಪಿಯವರ ಹೇಳಿಕೆಗೆ ಪ್ರಕಾಶ್ ಹುಕ್ಕೇರಿ, ನನ್ನ ಮುಖ ನೋಡಿ ವೋಟ್ ಕೊಡಿ ಬಿಜೆಪಿ ಅವರಿಗೆ ವೋಟ್ ಹಾಕಬೇಡಿ. ಕಾಂಗ್ರೆಸ್ ಅಭ್ಯರ್ಥಿ ಗೆದ್ದರೆ ನಾನೇ ಗೆದ್ದ ಹಾಗೆ. ಅವರಿಗೆ ವೋಟ್ ಹಾಕಿದರೆ ನನಗೆ ವೋಟ್ ಹಾಕಿದ ಹಾಗೆ. ಇದೊಂದು ಬಾರಿ ಹುಕ್ಕೇರಿ ಅವರನ್ನು ಸಂಸದನ್ನಾಗಿ ದೆಹಲಿಗೆ ಕಳುಹಿಸಿ ಎಂದು ಹೇಳಿದರು.