ಬೆಳಗಾವಿ : ಪ್ರಧಾನಿ ನರೇಂದ್ರ ಮೋದಿಯವರನ್ನ ಕಂಡರೆ ರಾಜ್ಯ ಬಿಜೆಪಿ ನಾಯಕರಿಗೆ ಭಯವಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಬೆಂಗಳೂರಿಗೆ ಬಂದಾಗ ಪ್ರವಾಹದ ಭೀಕರತೆ ವಿವರಿಸಲು ಸಮಯ ಕೇಳಿದ್ದೆವು. ಆದರೆ ಪ್ರಧಾನಿ ನರೇಂದ್ರ ಮೋದಿ ಅದಕ್ಕೆ ಸ್ಪಂದನೆ ನೀಡಲಿಲ್ಲ. ನಾವು ಕೇಳಿದರೆ ಮೋದಿ ಹಣ ಕೊಡಲ್ಲ. ಅದಕ್ಕಾಗಿ ಸರ್ವಪಕ್ಷ ನಿಯೋಗ ಒಯ್ಯುವಂತೆ ಸಿಎಂರನ್ನು ಆಗ್ರಹಿಸಿದ್ದೆವು.
ಪ್ರವಾಹ ಪರಿಹಾರ ಕುರಿತು ಸಿಎಂ ಮೇಲೆ ಕಿಡಿಕಾರಿದ ಮಾಜಿ ಸಿಎಂ ಸಿದ್ದರಾಮಯ್ಯ ಮೋದಿ ಹೆಸರಿನಲ್ಲಿ ರಾಜ್ಯದಿಂದ 25 ಸಂಸದರು ಆಯ್ಕೆ ಆಗಿದ್ದಾರೆ. ಕೊನೆಪಕ್ಷ ಬಿಜೆಪಿ ಸಂಸದರನ್ನಾದರೂ ಸಿಎಂ ಯಡಿಯೂರಪ್ಪ ಮೋದಿ ಬಳಿ ಕರೆದೊಯ್ಯಬೇಕಿತ್ತು. ಮೋದಿ ಭೇಟಿಯಾಗುವ ಧೈರ್ಯ ರಾಜ್ಯದ ಯಾವ ಬಿಜೆಪಿ ನಾಯಕರಿಗೂ ಇಲ್ಲ. ಅದಕ್ಕೆ ಯಡಿಯೂರಪ್ಪ ರಾಜ್ಯದ ವೀಕೆಸ್ಟ್ ಚೀಫ್ ಮಿನಿಸ್ಟರ್ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಸಿಎಂ ಹೆಚ್ಡಿಕೆ ಬಿಜೆಪಿ ಸರ್ಕಾರಕ್ಕೆ ಧೈರ್ಯ ತುಂಬುತ್ತಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅವರು ಯಾವಾಗ ಧೈರ್ಯ ತುಂಬುತ್ತಾರೋ? ಅಧೈರ್ಯ ತುಂಬುತ್ತಾರೋ ಗೊತ್ತಿಲ್ಲ ಬಿಡಿ ಎಂದು ಹೆಚ್ಡಿಕೆಗೆ ಸಿದ್ದರಾಮಯ್ಯ ಟಾಂಗ್ ಕೊಟ್ಟರು.
ಮಾಜಿ ಸಚಿವ ಡಿಕೆಶಿಗೆ ಜಾರಿ ನಿರ್ದೇಶನಾಲಯ ಕೋರ್ಟ್ ನಿಂದಲೇ ಬೇಲ್ ಸಿಗಬೇಕಿತ್ತು. ಬೇಲ್ ರಿಜೆಕ್ಟ್ ಮಾಡಲು ಸ್ಪಷ್ಟವಾದ ಪುರಾವೆ, ಕಾರಣ ಇರಲಿಲ್ಲ. ಈಗ ದೆಹಲಿ ಹೈಕೋರ್ಟ್ ಡಿಕೆಶಿಗೆ ಜಾಮೀನು ಮಂಜೂರು ಮಾಡಿದೆ ಎಂದರು.