ಬೆಳಗಾವಿ: ಬಜೆಟ್ನಲ್ಲಿ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದಲ್ಲಿ ಹಣ ಮೀಸಲು ಇಡದೇ ಸರ್ಕಾರ ಸುಳ್ಳು ಹೇಳುತ್ತಿದೆ. ಕೂಡಲೇ ಮಧ್ಯಂತರ ವರದಿಯನ್ನ ತರಿಸಿಕೊಂಡು 7ನೇ ವೇತನ ಆಯೋಗ ಜಾರಿ ಮಾಡುವಂತೆ ನಾನು ಒತ್ತಾಯ ಮಾಡುತ್ತೇನೆ. ಒಂದು ವೇಳೆ ಜಾರಿ ಮಾಡದಿದ್ದರೆ ನಮ್ಮ ಸರ್ಕಾರ ಬಂದ ಮೇಲೆ ಮಾಡುತ್ತೇವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು,'ನಮ್ಮ ಕಾಲದಲ್ಲಿ ಆರನೇ ವೇತನ ಆಯೋಗವನ್ನು ಜಾರಿ ಮಾಡಿದ್ದೇವೆ. ಹತ್ತು ಸಾವಿರದ ಆರುನೂರು ಕೋಟಿ ಹೊರೆ ಬಿದ್ದಿತ್ತು. ಅದನ್ನು ನಾವು ಸರಿಪಡಿಸಿಕೊಂಡು ರಾಜ್ಯ ನೌಕರರ ಹಿತ ಕಾಪಾಡಿದ್ದೇವೆ. ಈ ಸರ್ಕಾರಕ್ಕೆ ಸರ್ಕಾರಿ ನೌಕರರ ಹಿತ ಕಾಪಾಡುವ ಇಚ್ಛಾ ಶಕ್ತಿ ಇಲ್ಲ, ಬರೀ ಸುಳ್ಳು ಹೇಳುತ್ತಾರೆ. ಮೂಗಿಗೆ ತುಪ್ಪ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಡಬಲ್ ಇಂಜಿನ್ ಸರ್ಕಾರದ ಕಾರ್ಯ ಶೂನ್ಯ: ಮಾತಿನ ಉದ್ದಕ್ಕೂ ಡಬಲ್ ಇಂಜಿನ್ ಸರ್ಕಾರ ಎಂದು ಹೇಳುತ್ತಾರೆ. ಇವರು ಯಾವ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ, ವಿದೇಶದಿಂದ ಕಪ್ಪು ಹಣ ತರುತ್ತೇನೆ ಎಂದು ಹೇಳಿದರು, ಅಚ್ಛೇ ದಿನ್ ಆಯೇಗಾ ಅಂತಾ ಹೇಳಿದರು, ಬಂತಾ?. ರೈತರ ಆದಾಯ ದುಪ್ಪಟ್ಟು ಮಾಡುತ್ತಾನೆ ಅಂತ ಹೇಳಿದ್ರು, ಆಯ್ತಾ?. ಬೆಲೆ ಏರಿಕೆ ಕಡಿಮೆಯಾಗಿದೆಯಾ?. ಜನರಿಗೆ 600 ಭರವಸೆಗಳನ್ನ ನೀಡಿದ್ದರು, ಇದರಲ್ಲಿ ಎಷ್ಟು ಈಡೇರಿಸಿದ್ದಾರೆ?. ಜನರ ಮುಂದೆ ಇವನ್ನೆಲ್ಲಾ ಇಡಲಿ, ಇವರ ಡಬಲ್ ಇಂಜಿನ್ ಪವರ್ ಗೊತ್ತಾಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ:ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ.. ಶೇ.17ರಷ್ಟು ವೇತನ ಹೆಚ್ಚಳ, ನಿವೃತ್ತ ನೌಕರರಿಗೂ ವೇತನ ಪರಿಷ್ಕರಣೆ ಅನ್ವಯ
ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕಾಂಗ್ರೆಸ್ ಅಪಮಾನ ಮಾಡಿದೆ ಎಂಬ ಪ್ರಧಾನಿ ಮೋದಿ ಹೇಳಿಕೆ ವಿಚಾರವಾಗಿ ಮಾತನಾಡಿ, ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಪಮಾನ ಮಾಡಿದ್ದಾರೆ ಎಂದು ಹೇಳುತ್ತಾರೆ. ಆದರೆ, ನಮ್ಮಲ್ಲಿ ಯಡಿಯೂರಪ್ಪನವರನ್ನು ಸಿಎಂ ಸ್ಥಾನದಿಂದ ತೆಗೆದು ಹಾಕಿದ್ದು ಯಾರು? ಎಂದು ಪ್ರಶ್ನೆ ಮಾಡಿದರು. ಜೊತೆಗೆ ನರೇಂದ್ರ ಮೋದಿಯವರು ಇದ್ದಾಗಲೇ ಯಡಿಯೂರಪ್ಪನವರು ಜೈಲಿಗೆ ಹೋದರೂ ಯಾಕೆ ತಡೆಯಲಿಲ್ಲ, ಲಾಲ್ ಕೃಷ್ಣ ಅಡ್ವಾಣಿ ಅವರನ್ನ ಸೈಡ್ ಲೈನ್ ಮಾಡಿದ್ದವರು ಯಾರು?. ಮುರಳಿ ಮನೋಹರ ಜೋಶಿ ಅವರನ್ನು ಸೈಡ್ ಮಾಡಿದ್ದು ಯಾರು?, ಯಡಿಯೂರಪ್ಪನವರನ್ನ ಸಿಎಂ ಸ್ಥಾನದಿಂದ ಇಳಿಸಿದಾಗ ಪಾಪ ಕಣ್ಣೀರು ಹಾಕಿದ್ರು. ಇವರ ತಟ್ಟೆಯಲ್ಲಿ ಹೆಗ್ಗಣ ಇಟ್ಕೊಂಡು, ಹೆಗ್ಗಣನೂ ಅಲ್ಲ, ನಾಯಿ ಇಟ್ಕೊಂಡು ಬೇರೆಯವರ ಬಗ್ಗೆ ಮಾತನಾಡುವುದಕ್ಕೆ ಯಾವ ನೈತಿಕತೆಯೂ ಇಲ್ಲ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.