ಬೆಳಗಾವಿ :2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತದೊಂದಿಗೆ ನೂರಕ್ಕೆ ನೂರರಷ್ಟು ಅಧಿಕಾರಕ್ಕೆ ಬರಲಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಭವಿಷ್ಯ ನುಡಿದರು. ಖಾನಾಪುರ ಪಟ್ಟಣದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಅವಧಿಪೂರ್ವ ಚುನಾವಣೆ ಬರಲಿ ಎಂದು ನಾನು ಬಯಸಲ್ಲ. ಬಿಜೆಪಿ ಸರ್ಕಾರ ತನ್ನದೇ ಭಾರದಿಂದ ಪತನವಾದ್ರೆ ಏನೂ ಮಾಡಕ್ಕಾಗಲ್ಲ. ಮಧ್ಯಂತರ ಚುನಾವಣೆ ಎದುರಿಸಲು ನಾವು ರೆಡಿ ಇದ್ದೇವೆ ಎಂದರು.
ಸಿಎಂ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯಲ್ಲಿ ಪ್ರಜಾಪ್ರಭುತ್ವ ಎಲ್ಲಿದೆ? ಎಲೆಕ್ಟೆಡ್ ಚೀಫ್ ಮಿನಿಸ್ಟರ್ ಅನ್ನು ಕೇಂದ್ರ ಸರ್ಕಾರದವರು ತಗೆದು ಎಸೆದು ಬಿಟ್ರು. ಇದಕ್ಕೆ ಪ್ರಜಾಪ್ರಭುತ್ವ ಎನ್ನಬೇಕೆ? ಅವರಿಗೆ ಇಷ್ಟ ಬಂದವರಿಗೆ ಪಟ್ಟ ಕಟ್ಟುತ್ತಾರೆ, ಬೇಡ ಅನಿಸಿದ್ರೆ ತೆಗೆದು ಹಾಕುತ್ತಾರೆ. ಹೀಗಾದರೆ, ಪ್ರಜಾಪ್ರಭುತ್ವ, ಸಂವಿಧಾನದ ರೀತಿಯಲ್ಲಿ ಕೆಲಸ ಆದಂಗೆ ಆಗುತ್ತಾ? ಎಂದು ಕಿಡಿಕಾರಿದ್ರು.
ಯಡಿಯೂರಪ್ಪ ಇದ್ದರೂ ಲಾಭ ಇಲ್ಲ, ಇರದೇ ಇದ್ದರೂ ನಮಗೆ ಲಾಭ ಇಲ್ಲ, 2023ರ ಚುನಾವಣೆಗೆ ಕಾಂಗ್ರೆಸ್ ಪಕ್ಷಕ್ಕೆ ದಾರಿ ಸುಗಮವಾಯಿತು. ಕಾಂಗ್ರೆಸ್ ಪಕ್ಷ 2023ಕ್ಕೆ ನೂರಕ್ಕೆ ನೂರು ಅಧಿಕಾರಕ್ಕೆ ಬರುತ್ತದೆ. ನೂರು ಜನ ಸಿದ್ದರಾಮಯ್ಯ ಬಂದ್ರೂ 2023ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತೆ ಎಂಬ ಬಿಎಸ್‌ವೈ ಹೇಳಿಕೆಗೆ ತಿರುಗೇಟು ನೀಡಿದ ಅವರು, 2013ರಲ್ಲಿ ಯಡಿಯೂರಪ್ಪ ಹೀಗೆ ಹೇಳಿದ್ರು, ನಾವು ಅಧಿಕಾರಕ್ಕೆ ಬರಲಿಲ್ವಾ? ಮಿಸ್ಟರ್ ಯಡಿಯೂರಪ್ಪಗೆ ಯಾವತ್ತಾದ್ರೂ ಮೆಜಾರಿಟಿ ಬಂದಿದೆಯಾ?. ಆದರೆ, ಗರ್ವದ ಮಾತಿಗೇನೂ ಕಮ್ಮಿ ಇಲ್ಲ ಎಂದರು.
ಯಡಿಯೂರಪ್ಪ ಸಿಎಂ ಆದಾಗ ಸಂಪೂರ್ಣ ಮನೆ ಬಿದ್ರೆ ಐದು ಲಕ್ಷ ಕೊಡ್ತೀನಿ ಎಂದು ಘೋಷಿಸಿದ್ದರು. ಆ ಹಣವನ್ನು ಇನ್ನೂ ಸರಿಯಾಗಿ ಬಿಡುಗಡೆ ಮಾಡಿಲ್ಲ. ಕಾಂಗ್ರೆಸ್ ಶಾಸಕರಿದ್ರೇ ಒಂದು ಪರಿಹಾರ, ಬಿಜೆಪಿ ಶಾಸಕರಿದ್ರೇ ಬೇರೊಂದು ಪರಿಹಾರ ನೀಡಿ ತಾರತಮ್ಯ ಮಾಡ್ತಾರೆ. ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಸುಳ್ಳು ಕೇಸ್ಗಳನ್ನ ಹಾಕುತ್ತಿದ್ದಾರೆ. ಹಾಗೇ ಮಾಡದಂತೆ ಎಸ್‌ಪಿಗೆ ಹೇಳಿದ್ದೇನೆ. ಬಿಜೆಪಿಯವರು ಕುರ್ಚಿಗೆ ಬಡಿದಾಡುತ್ತಿದ್ದಾರೆ. ಜನ ಕಷ್ಟ ಪಡುತ್ತಿದ್ದಾರೆ, ಅದನ್ನ ಯಾರು ಕೇಳೋರಿಲ್ಲ ಎಂದು ಗುಡುಗಿದರು.