ಬೆಳಗಾವಿ:ಅನಾರೋಗ್ಯದಿಂದ ನಿಧನರಾದ ಮಾಜಿ ಸಚಿವ ಡಿ ಬಿ ಇನಾಮದಾರ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ಮಾಜಿ ಸಿಎಂ ಸಿದ್ದರಾಮಯ್ಯ ಪಡೆದುಕೊಂಡರು. ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ನಿನ್ನೆ ನಿಧನರಾದ ಜಿಲ್ಲೆಯ ಹಿರಿಯ ರಾಜಕಾರಣಿ ಡಿ.ಬಿ. ಇನಾಮದಾರ್ ಅವರ ಪಾರ್ಥಿವ ಶರೀರ ಬೆಳಗ್ಗೆ 5 ಗಂಟೆಗೆ ಬೈಲಹೊಂಗಲ ತಾಲೂಕಿನ ನೇಗಿನಹಾಳ ಸ್ವಗ್ರಾಮಕ್ಕೆ ಆಗಮಿಸಿತು. ಪಾರ್ಥಿವ ಶರೀರವನ್ನು ಗ್ರಾಮದ ವಿಜಯಶ್ರೀ ವಿದ್ಯಾದಾಯಿನಿ ಸಂಸ್ಥೆಯ ಪ್ರೌಢಶಾಲೆ ಆವರಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು.
ಈ ವೇಳೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಿ ಅಂತಿಮ ನಮನ ಸಲ್ಲಿಸಿದರು. ಬಳಿಕ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಅಂತಿಮ ದರ್ಶನ ಪಡೆದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಿದ್ದರಾಮಯ್ಯ ಅವರು, ಇತ್ತೀಚೆಗೆ ಇಟಗಿ ಕ್ರಾಸ್ನಲ್ಲಿ ಡಿ.ಬಿ. ಇನಾಮದಾರ್ ಅವರು ಪ್ರಜಾಧ್ವನಿ ಯಾತ್ರೆಯ ದೊಡ್ಡ ಸಭೆ ಮಾಡಿದ್ದರು. ಹೀಗೆ ಅವರಿಗೆ ಕಾಯಿಲೆ ಬರುತ್ತದೆ ಎಂದುಕೊಂಡಿರಲಿಲ್ಲ. ಮಣಿಪಾಲ್ ಆಸ್ಪತ್ರೆಯಲ್ಲಿರುವ ನಮ್ಮ ಮೈಸೂರಿನ ವೈದ್ಯರ ಜೊತೆಗೆ ನಾನು ಮಾತಾಡಿದ್ದೆ.
ಗುಣಮುಖರಾಗುವ ಸಾಧ್ಯತೆ ಇದೆ ಎಂದು ವೈದ್ಯರು ಹೇಳಿದ್ದರು. ಹೀಗಾಗಿ ನಾನು ಕೂಡ ಗುಣಮುಖ ಆಗಬಹುದು ಎಂದುಕೊಂಡಿದ್ದೆ, ಆದರೆ ಆಗಲಿಲ್ಲ. ನನಗಿಂತ ವಯಸ್ಸಲ್ಲಿ ಒಂದು ವರ್ಷ ಚಿಕ್ಕವರು. ಸಾಯುವ ವಯಸ್ಸು ಏನಲ್ಲ, ಚೆನ್ನಾಗಿಯೇ, ತುಂಬಾ ಗಟ್ಟಿಯಾಗೇ ಇದ್ದರು. ಆರೋಗ್ಯವಂತರಾಗಿಯೇ ಕಾಣಿಸುತ್ತಿದ್ದರು. ಅವರು ನಮ್ಮೆಲ್ಲರನ್ನು ಅಗಲಿದ್ದಾರೆ. ಅವರ ಆತ್ಮಕ್ಕೆ ದೇವರು ಚಿರಶಾಂತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.