ಬೆಳಗಾವಿ: ದಿ. ಸುರೇಶ್ ಅಂಗಡಿ ಅವರ ಕಿರಿಯ ಪುತ್ರಿ ಶ್ರದ್ಧಾ ಶೆಟ್ಟರ್ ಬಿಜೆಪಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವೇದಿಕೆ ಹಂಚಿಕೊಳ್ಳುವ ಮೂಲಕ ಜಿಲ್ಲಾ ರಾಜಕಾರಣದಲ್ಲಿ ಅಚ್ಚರಿ ಮೂಡಿಸಿದರು.
ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪ ಚುನಾವಣೆಯಲ್ಲಿ ಶ್ರದ್ಧಾ ಶೆಟ್ಟರ್ ಅವರೇ ಬಿಜೆಪಿ ಅಭ್ಯರ್ಥಿ ಆಗ್ತಾರಾ? ಎಂಬ ಚರ್ಚೆಗಳು ಕೂಡ ತೀವ್ರಗೊಂಡಿವೆ. ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಪ್ರಯುಕ್ತ ಬಿಜೆಪಿಯಿಂದ ಇಲ್ಲಿನ ಎಪಿಎಂಸಿ ಆವರಣದಲ್ಲಿ ಕಿಸಾನ್ ಸಮ್ಮಾನ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬಿಜೆಪಿಯ ಕಾರ್ಯಕ್ರಮದಲ್ಲಿ ಏಕಾಏಕಿಯಾಗಿ ಶ್ರದ್ಧಾ ಶೆಟ್ಟರ್ ಕಾಣಿಸಿಕೊಂಡು ಅಚ್ಚರಿ ಮೂಡಿಸಿದರು.
ಓದಿ:ರಾಜ್ಯದಲ್ಲಿ ಯಾವ ನಾಯಕತ್ವವೂ ಬದಲಾವಣೆ ಇಲ್ಲ: ಅಶ್ವತ್ಥ ನಾರಾಯಣ
ಸುದ್ದಿಗಾರರೊಂದಿಗೆ ಮಾತನಾಡಿದ ಶ್ರದ್ಧಾ ಶೆಟ್ಟರ್, ಇಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಅಂಗವಾಗಿ ಬಿಜೆಪಿಯಿಂದ ರೈತರ ದಿನ ಆಚರಿಸಲಾಗುತ್ತಿದೆ. ನಮ್ಮ ಪಕ್ಷದ ಮುಖಂಡರು ಚೆನ್ನಾಗಿ ಕಾರ್ಯಕ್ರಮ ಆಯೋಜಿಸಿದ್ದರು. ತಂದೆಯ ಅಭಿಮಾನಿಗಳು ಭೇಟಿಯಾಗುತ್ತಿರೋದಕ್ಕೆ ಖುಷಿಯಾಗ್ತಿದೆ. ಅವರ ನಿಧನದ ಬಳಿಕವೂ ಅಭಿಮಾನಿಗಳು ಮನೆಗೆ ಬಂದು ಭೇಟಿಯಾಗುತ್ತಾರೆ. ಅಭಿಮಾನಿಗಳ ಜೊತೆ ಸಂಪರ್ಕವನ್ನು ಇನ್ನೂ ಬೆಳೆಸಿಕೊಂಡು ಹೋಗುತ್ತೇವೆ ಎಂದರು.
ಸುರೇಶ್ ಅಂಗಡಿ ಕುಟುಂಬಕ್ಕೆ ಬಿಜೆಪಿ ಟಿಕೆಟ್ ನೀಡಬೇಕು ಎಂದು ಅಭಿಮಾನಿಗಳು ಆಗ್ರಹಿಸುತ್ತಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅದರ ಬಗ್ಗೆ ನಾನು ಏನೂ ಮಾತನಾಡಲ್ಲ ಎಂದರು.