ಸಂಸದ ರಮೇಶ್ ಜಿಗಜಿಣಗಿ ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗುವ ಬಗ್ಗೆ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ ಬೆಳಗಾವಿ: ಮಾಜಿ ಸಚಿವ ವಿ ಸೋಮಣ್ಣ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಆಗುವ ಬಯಕೆಯನ್ನು ವಿಜಯಪುರ ಸಂಸದ ರಮೇಶ್ ಜಿಗಜಿಣಗಿ ಹೊರ ಹಾಕಿದ್ದಾರೆ. ಬೆಳಗಾವಿಯಲ್ಲಿ ಇಂದು ಜಿಲ್ಲಾ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಭಾಗಿಯಾಗಲು ಆಗಮಿಸಿದ್ದ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ರಾಜ್ಯಾಧ್ಯಕ್ಷ ಯಾರು ಆಗಬೇಕು ಎಂಬುದನ್ನು ಬಹಿರಂಗ ಚರ್ಚೆ ಮಾಡುವುದು ಸರಿಯಲ್ಲ. ನಮ್ಮದು ರಾಷ್ಟ್ರೀಯ ಪಕ್ಷ, ರಾಷ್ಟ್ರೀಯ ನಾಯಕರೇ ರಾಜ್ಯಾಧ್ಯಕ್ಷರನ್ನು ಆಯ್ಕೆ ಮಾಡ್ತಾರೆ. ಎಲ್ಲರಿಗೂ ರಾಜ್ಯಾಧ್ಯಕ್ಷ ಆಗಬೇಕು ಎಂಬ ಆಶಯ ಇರುವುದು ಸಹಜ. ನಾನೂ ಬಿಜೆಪಿಯ ಹಿರಿಯ ನಾಯಕ. ಅವಕಾಶ ಕೊಟ್ಟರೆ ನಾನು ಕೂಡ ರಾಜ್ಯಾಧ್ಯಕ್ಷನಾಗುವೆ. ಬಿಜೆಪಿಯಲ್ಲಿ ದಲಿತರು ರಾಜ್ಯದ ಅಧ್ಯಕ್ಷ ಆಗಬಾರದೇ? ಎಂದು ಪ್ರಶ್ನಿಸಿದರು.
ರಾಜ್ಯಾಧ್ಯಕ್ಷ ಸ್ಥಾನ ನೀಡುವಂತೆ ಕೇಳ್ತಿರಾ ಎಂಬ ಮಾಧ್ಯಮಗಳ ಪ್ರಶ್ನೆಗೆ, ಎಲ್ಲಿ ಕೇಳಬೇಕು ಎಂಬುದು ನನಗೆ ಗೊತ್ತಿದೆ. ನನಗೂ ರಾಜ್ಯಾಧ್ಯಕ್ಷ ಸ್ಥಾನ ನೀಡುವಂತೆ ಕೋರುತ್ತೇನೆ ಎಂದು ರಮೇಶ ಜಿಗಜಿಣಗಿ ತಮ್ಮ ಆಶಯ ವ್ಯಕ್ತಪಡಿಸಿದರು.
ಸಂಸದ ರಮೇಶ್ ಜಿಗಜಿಣಗಿ ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗುವ ಬಗ್ಗೆ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ ಬಡ ವರ್ಗದ ಜನರನ್ನು ಕಾಂಗ್ರೆಸ್ ಏನು ಗುತ್ತಿಗೆ ಪಡೆದಿದೆಯೇ..?: ಅಕ್ಕಿ ವಿಚಾರದಲ್ಲಿ ಕಾಂಗ್ರೆಸ್ನವರು ಪ್ರಧಾನಿ ನರೇಂದ್ರ ಮೋದಿ ಮೇಲೆ ಗೂಬೆ ಕೂರಿಸುತ್ತಿದೆ. ಜಾರಿಮಾಡುವ ಯೋಗ್ಯತೆ ಇಲ್ಲದಿದ್ದರೆ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ್ದು ಯಾಕೆ..? ಗ್ಯಾರಂಟಿ ಘೋಷಣೆ ಮಾಡುವಾಗ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೇಳಿದ್ರಾ..? ಕೇಂದ್ರ ಸರ್ಕಾರ ಕೇವಲ ರಾಜ್ಯಕ್ಕೆ ಅಷ್ಟೇ ಅಲ್ಲ, ಬೇರೆ ರಾಜ್ಯಗಳಿಗೂ ಅಕ್ಕಿ ವಿತರಣೆ ಮಾಡಬೇಕು. ಬಡ ವರ್ಗದ ಜನರನ್ನು ಕಾಂಗ್ರೆಸ್ ಏನು ಗುತ್ತಿಗೆ ಪಡೆದಿದೆಯೇ..? ಎಂದು ಜಿಗಜಿಣಗಿ ಪ್ರಶ್ನಿಸಿದರು.
ಕೋವಿಡ್ ಸಮಯದಲ್ಲಿ ದೇಶದ 80 ಕೋಟಿ ಬಡವರಿಗೆ ಮೋದಿ ಅಕ್ಕಿ ನೀಡಿದ್ದಾರೆ. ಚುನಾವಣೆ ಸಮಯದಲ್ಲಿ ಸಿದ್ದರಾಮಯ್ಯ ತೋಳು, ಲುಂಗಿ ಏರಿಸಿ 10 ಕೆಜಿ ಅಕ್ಕಿ ಕೊಡ್ತಿನಿ ಅಂದಿದ್ರು. ಆಗ ನೀವೇ ರಾಜ್ಯದ ಜನರಿಗೆ 10 ಕೆಜಿ ಅಕ್ಕಿ ಕೊಡ್ತಿನಿ ಅಂದಿದ್ದೀರಿ, ಕೊಡಬೇಕಷ್ಟೆ. ಕೇಂದ್ರ ಸರ್ಕಾರ ಹೆಚ್ಚುವರಿ ಅಕ್ಕಿ ಕೊಡುತ್ತೆ ಎಂದು ಅಪೇಕ್ಷೆ ಮಾಡುವುದು ಸರಿಯಲ್ಲ ಎಂದು ಇದೇ ವೇಳೆ ರಮೇಶ್ ಜಿಗಜಿಣಗಿ ವಾಗ್ದಾಳಿ ನಡೆಸಿದರು.
ಗ್ಯಾರಂಟಿ ಯೋಜನೆ ಜಾರಿಗೊಳಿಸುವುದು ಅನುಮಾನ. ಹೀಗೆ ಮಾಡಿದ್ರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಹಳ ದಿನ ಇರುವುದಿಲ್ಲ. ಯಾವುದೇ ಅಭಿವೃದ್ಧಿ ಯೋಜನೆ ಬಗ್ಗೆ ಮಾತನಾಡಲ್ಲ. ಬರೀ ಮೋದಿ ಅವರನ್ನೇ ಟೀಕಿಸುತ್ತಾರೆ. 9 ವರ್ಷದ ಅವಧಿಯಲ್ಲಿ ದೇಶ ಸಾಕಷ್ಟು ಪ್ರಗತಿ ಕಂಡಿದೆ. ಕಾಂಗ್ರೆಸ್ ಕೂಡ ತನ್ನ ಅವಧಿಯಲ್ಲಿ ಅಭಿವೃದ್ಧಿ ಮಾಡಬೇಕಿತ್ತು. ಕಾಂಗ್ರೆಸ್ ಅಭಿವೃದ್ಧಿಗೆ ಆದ್ಯತೆ ನೀಡಿದ್ರೆ ಈಗ ಭಾರತ ದೇಶ ಜಗತ್ತಿನಲ್ಲಿ ನಂಬರ್ 1 ಆಗಿರುತ್ತಿತ್ತು.
ಜಾಗತಿಕ ಮಟ್ಟದಲ್ಲಿ ಮೋದಿಗೆ ಗೌರವ ಹೆಚ್ಚಾಗಿದೆ: ಕೋವಿಡ್ ನಿಯಂತ್ರಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ 130 ಕೋಟಿ ಜನರ ಪ್ರಾಣ ರಕ್ಷಿಸಿದ್ದಾರೆ. ಈ ಸಮಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಿದ್ರೆ ರಸ್ತೆಯ ಮೇಲೆ ಹೆಣ ಬೀಳುತ್ತಿದ್ವು. ಮೋದಿ ಅವರ ಆಡಳಿತಕ್ಕೆ ಇಡೀ ಜಗತ್ತೆ ಬೆರಗಾಗಿದೆ. ಜಾಗತಿಕ ಮಟ್ಟದಲ್ಲಿ ಮೋದಿಗೆ ಗೌರವ ಹೆಚ್ಚಾಗಿದೆ. ದೇಶದ ಪ್ರಧಾನಿಗೆ ಜಾಗತಿಕ ಮಟ್ಟದಲ್ಲಿ ಗೌರವ ದೊರೆಯುತ್ತಿರುವುದು ಅಭಿಮಾನದ ಸಂಗತಿ ಎಂದರು.
ಗ್ಯಾರಂಟಿ ಯೋಜನೆ ವಿಚಾರವಾಗಿ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ರಮೇಶ್ ಜಿಗಜಿಣಗಿ, ಪುಕ್ಸಟ್ಟೆ ಕೊಡ್ತಿನಿ ಎಂದು ಹೇಳಿ ಸಿದ್ದರಾಮಯ್ಯ ರಾಜ್ಯದ ಜನರಿಗೆ ಮೋಸ ಮಾಡಿದ್ದಾರೆ. ವಿದ್ಯುತ್ ಫ್ರೀ ಕೊಡ್ತಿನಿ ಅಂದಿದ್ದಾರೆ. ಫ್ರೀ ಬಸ್ ಬಿಟ್ಟಿದ್ದಾರೆ. ಸಿದ್ದರಾಮಯ್ಯ ಬಸ್‌ಗಳಿಗೆ ಡಿಸೇಲ್ ಬದಲು ನೀರು ಹಾಕ್ತಾರಾ ಎಂದು ಪ್ರಶ್ನಿಸಿದರು.
ಲೋಕಸಭಾ ಚುನಾವಣೆಯಲ್ಲಿ ನಾವು ಗೆಲ್ಲುತ್ತೇವೆ:ಪ್ರಧಾನಿ ನರೇಂದ್ರ ಮೋದಿ ಪ್ರಚಾರ ನಡೆಸಿದರೂ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿಲ್ವಲ್ಲ ಎಂಬ ಪ್ರಶ್ನೆಗೆ, ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳ ಜಾರಿಯಿಂದ ಬಿಜೆಪಿಗೆ ವಿಧಾನಸಭೆ ಚುನಾವಣೆಯಲ್ಲಿ ಹಿನ್ನಡೆ ಆಗಿದೆ. ವಿಧಾನಸಭೆ ಚುನಾವಣೆಯಲ್ಲಿ ಸೋತಿರಬಹುದು, ಲೋಕಸಭಾ ಚುನಾವಣೆಯಲ್ಲಿ ನಾವು ಗೆಲ್ಲುತ್ತೇವೆ ಎಂದು ರಮೇಶ್ ಜಿಗಜಿಣಗಿ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ:ನನಗಿಂತ ಬುದ್ಧಿವಂತರು ಸಿಕ್ಕರೆ ಅವರನ್ನೇ ಬಿಜೆಪಿ ರಾಜ್ಯಾಧ್ಯಕ್ಷ ಮಾಡಿ: ವಿ. ಸೋಮಣ್ಣ