ಬೆಳಗಾವಿ: "ಬೆಳಗಾವಿಗೆ ಬಂದಿರುವುದು ನನಗೆ ತೀರ್ಥಯಾತ್ರೆಗೆ ಬಂದಿರುವ ರೀತಿ ಅನುಭವವಾಗುತ್ತಿದೆ. ಭಕ್ತಿ ಭಾವದಿಂದಲೇ ಈ ವಾತಾವರಣ ನಿರ್ಮಾಣವಾದಂತಿದೆ" ಎಂದು ಅಸ್ಸಾಂ ರಾಜ್ಯದ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಹರ್ಷ ವ್ಯಕ್ತಪಡಿಸಿದರು. ಗುರುವಾರ ಬೆಳಗಾವಿಯ ಶಹಾಪುರದ ಛತ್ರಪತಿ ಶಿವಾಜಿ ಮಹಾರಾಜ ಉದ್ಯಾನವನ ಬಳಿಯ ಶಿವಚರಿತ್ರೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
"ನಾನು ಗೂಗಲ್ ಮ್ಯಾಪ್‌ನಲ್ಲಿ ನೋಡ್ತಿದ್ದೆ. ಅಸ್ಸಾಂ ಹಾಗೂ ಬೆಳಗಾವಿ ನಡುವೆ ಸುಮಾರು 3 ಸಾವಿರ ಕಿ.ಮೀ ಅಂತರವಿದೆ. ಆದರೆ ನನಗೆ ಇಲ್ಲಿಗೆ ಬಂದಿದ್ದು ತೀರ್ಥಕ್ಷೇತ್ರಕ್ಕೆ ಬಂದ ಅನುಭವ ನೀಡಿದೆ. ಬೆಳಗಾವಿ ನೆಲಕ್ಕೆ ಛತ್ರಪತಿ ಶಿವಾಜಿ ಮಹಾರಾಜರಿಂದ ಹಿಡಿದು ಮಹಾತ್ಮ ಗಾಂಧೀಜಿಯವರೆಗೆ ಹಲವು ಮಹಾತ್ಮರು ಭೇಟಿ ನೀಡಿದ್ದಾರೆ" ಎಂದರು.
"ಇಡೀ ದೇಶದಲ್ಲಿಯೇ ಇನ್ಮುಂದೆ ಸನಾತನ ಧರ್ಮವೇ ಉಳಿಯಲಿದೆ. ಶಿವಾಜಿ ಮಹಾರಾಜರ ಚಿಂತನೆಗಳು ಎಲ್ಲೆಲ್ಲೂ ಇರಲಿವೆ. ಹಿಂದೂಗಳು ಗರ್ವದಿಂದ ಹೇಳಿಕೊಳ್ಳಬೇಕು ನಾನೊಬ್ಬ ಹಿಂದೂ ಎಂದು. ಆಗ ಮಾತ್ರ ಸನಾತನ ಧರ್ಮ ಭಾರತದಲ್ಲಿ ಉಳಿಯಲು ಸಾಧ್ಯ" ಎಂದು ಹೇಳಿದರು.
"ಈ ನೆಲದಲ್ಲಿ ಔರಂಗಜೇಬ್ ಅಂತಹವರನ್ನು ಭಾರತ ತಾಳ್ಮೆಯಿಂದ ಸಲಹಿದೆ. ಆದ್ರೆ ಅವರನ್ನು ಎದುರಿಸಿ ನಿಲ್ಲುವಂತಹ ಛತ್ರಪತಿ ಶಿವಾಜಿ ಮಹಾರಾಜರಂತಹ ರಾಜರಿಗೂ ಭಾರತಮಾತೆ ಜನ್ಮ ನೀಡಿದ್ದರು. ಪೂರಾ ಭಾರತ ಔರಂಗಜೇಬ್‌ನ ನಿಯಂತ್ರಣದಲ್ಲಿತ್ತು ಎಂದು ಇತಿಹಾಸಕಾರರು ಹೇಳ್ತಾರೆ. ಆದ್ರೆ ಔರಂಗ್‌ಜೇಬ್‌ಗಿಂತ ನೂರು ಪಟ್ಟು ಧೈರ್ಯಶಾಲಿಯಾಗಿದ್ದವರು ಛತ್ರಪತಿ ಶಿವಾಜಿ ಮಹಾರಾಜರು" ಎಂದು ತಿಳಿಸಿದರು.
ಇದನ್ನೂ ಓದಿ: ಮೋದಿ ವ್ಯಕ್ತಿ ಅಲ್ಲ ದೇಶದ ಶಕ್ತಿ: ಬಳ್ಳಾರಿಯಲ್ಲಿ ಅಸ್ಸಾಂ ಸಿಎಂ ಹೇಮಂತ್ ಬಿಸ್ವಾ