ಚಿಕ್ಕೋಡಿ (ಬೆಳಗಾವಿ):ಚಿಕ್ಕೋಡಿ ಉಪವಿಭಾಗದ ರೈತರು ಒಂದಿಲ್ಲ ಒಂದು ತೊಂದರೆ ಅನುಭವಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಕಳೆದೆರಡು ತಿಂಗಳ ಹಿಂದೆ ಪ್ರವಾಹದಿಂದ ಬೆಳೆದ ಬೆಳೆ ಎಲ್ಲವೂ ಹಾಳಾಗಿ ಹೋದರೆ, ಕಳೆದ ತಿಂಗಳು ಕಬ್ಬಿನ ಬೆಳೆಗೆ ಡೊಣ್ಣೆ ಹುಳದ ಕಾಟದಿಂದ ಬೇಸತ್ತಿದ್ದು, ಈಗ ಯೂರಿಯಾ ಗೊಬ್ಬರ ದೊರೆಯದೇ ರೈತರು ಕಂಗಾಲಾಗಿದ್ದಾರೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಉಪವಿಭಾಗದ ಅಥಣಿ, ಕಾಗವಾಡ, ರಾಯಬಾಗ, ಚಿಕ್ಕೋಡಿ, ನಿಪ್ಪಾಣಿ ಹುಕ್ಕೇರಿ ತಾಲೂಕಿನಲ್ಲಿ ಕಬ್ಬು ಬೆಳದು ನಿಂತಿದ್ದು, ಈಗ ಯೂರಿಯಾ ಗೊಬ್ಬರ ಅವಶ್ಯಕತೆ ಇದೆ. ಮಹಾರಾಷ್ಟ್ರದ ಗಡಿಯಲ್ಲಿರುವ ಚಿಕ್ಕೋಡಿ ಉಪವಿಭಾಗದಲ್ಲಿ ಮೆಕ್ಕೆಜೋಳ ಅತಿಯಾಗಿ ಬೆಳೆಯುತ್ತಾರೆ. ಈಗ ಸದ್ಯದ ಪರಿಸ್ಥಿತಿಯಲ್ಲಿ ಮೆಕ್ಕೆಜೋಳ ತೆನೆಯೊಡೆಯುತ್ತಿದ್ದು, ಈ ಬೆಳೆಗೆ ಯೂರಿಯಾ ಅವಶ್ಯಕತೆ ಇದೆ. ಆದರೆ, ಯೂರಿಯಾ ಮಾತ್ರ ಸಿಗುತ್ತಿಲ್ಲ. ಇದರಿಂದ ರೈತರು ಬೆಳೆದ ಬೆಳೆ ಕೈಗೆ ಸಿಗದಂತಹ ಪರಿಸ್ಥಿತಿ ಇದೆ.
ಸರ್ಕಾರ ರೈತರಿಗೆ ಯೂರಿಯಾ ತೊಂದರೆ ಇಲ್ಲ, ಸಕಾಲಕ್ಕೆ ಯೂರಿಯಾ ಬರುತ್ತದೆ ಎಂದು ಹೇಳುತ್ತಿದೆ. ಆದರೆ, ಗೊಬ್ಬರ ಅಂಗಡಿಗಳಲ್ಲಿ ಯೂರಿಯಾ ಮಾತ್ರ ಸಿಗುತ್ತಿಲ್ಲ. ಯೂರಿಯಾ ಸಿಕ್ಕರೂ, ಕೆಲ ಅಂಗಡಿಯವರು ಯೂರಿಯಾ ಗೊಬ್ಬರವನ್ನು ದುಪ್ಪಟ್ಟು ದರಕ್ಕೆ ಮಾರುತ್ತಿದ್ದಾರೆ ಎಂಬ ಆರೋಪಗಳಿವೆ. ಯೂರಿಯಾ ಮೂಲ ದರ 270ರಿಂದ 290. ಆದರೆ, ಗೊಬ್ಬರ ಅಂಗಡಿಯವರು 450ರಿಂದ 500ವರಗೆ ಗೊಬ್ಬರ ಮಾರಾಟ ಮಾಡುತ್ತಿದ್ದಾರೆ ಹಾಗೂ ಯೂರಿಯಾ ಬೇಕಾದರೆ ಅದರ ಜೊತೆಗೆ ಮತ್ತೆ 1000ಕ್ಕೂ ಅಧಿಕ ಬೆಲೆ ಬಾಳುವ ವಸ್ತುಗಳ ಖರೀದಿಸಿದರೆ ಮಾತ್ರ ಯೂರಿಯಾ ಲಭ್ಯ ಎಂಬ ಮಾತುಗಳು ಕೇಳಿಬರುತ್ತಿವೆ.
ದೇಶದ ಬೆನ್ನೆಲಬು ರೈತ ಅನ್ನುತ್ತೆ ಸರ್ಕಾರ. ಆದರೆ, ಈಗ ರೈತರ ಕೈಗೆ ಬಂದ ತುತ್ತು ಬಾಯಿಗೆ ಬರುತ್ತಿಲ್ಲ. ಕೃಷಿ ಇಲಾಖೆ ಅಧಿಕಾರಿಗಳು ಯೂರಿಯಾ ಗೊಬ್ಬರದ ಕೊರತೆ ಇಲ್ಲ ಎನ್ನುತ್ತಿದ್ದರೂ, ರೈತರಿಗೆ ಮಾತ್ರ ಅಗತ್ಯ ಪ್ರಮಾಣದಷ್ಟು ಯೂರಿಯಾ ಗೊಬ್ಬರ ಸಿಗುತ್ತಿಲ್ಲ. ನೆರೆಯಿಂದ ಕಂಗೆಟ್ಟ ರೈತರಿಗೀಗ ಯೂರಿಯಾ ಸಮಸ್ಯೆ ಎದುರಾಗಿದೆ. ಚಿಕ್ಕೋಡಿ ಉಪವಿಭಾಗದಲ್ಲಿ ರೈತರ ಗೋಳು ಕೇಳೋರು ಇಲ್ಲದಾಗಿದೆ. ಕೃಷಿ ಅಧಿಕಾರಿಗಳ ವಿರುದ್ಧ ಹರಿಹಾಯ್ದ ರೈತ ಹಣಮಂತ ಕಣವಿ, ಮುಂದಿನ ದಿನಗಳಲ್ಲಿ ನಮಗೆ ಸರಿಯಾಗಿ ಯೂರಿಯಾ ಗೊಬ್ಬರ ಸಿಗದೇ ಹೋದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.