ಬೆಳಗಾವಿ: ಸಾಹಿತಿ ಕೆ. ಕಲ್ಯಾಣ್ ದಾಂಪತ್ಯದಲ್ಲಿ ಕಲಹ ತಂದಿರುವ ಆರೋಪಿ ಶಿವಾನಂದ ವಾಲಿಗೆ ಸೇರಿದ್ದ ಅಂದಾಜು 6 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿ, ದಾಖಲೆ ಪತ್ರಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಡಿಸಿಪಿ ಡಾ. ವಿಕ್ರಮ್ ಆಮ್ಟೆ ತಿಳಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ, ಬೆಂಗಳೂರು ಸೇರಿದಂತೆ ಬೆಳಗಾವಿ ನಗರದಲ್ಲಿ ವಾಲಿಗೆ ಸೇರಿರುವ ಆಸ್ತಿಯನ್ನು ಜಪ್ತಿ ಮಾಡಲಾಗಿದೆ. ನಗರದ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾಹಿತಿ ನೀಡಿದ ಅವರು, ಕೆ.ಕಲ್ಯಾಣ ದಾಂಪತ್ಯ ಕಲಹ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಶಿವಾನಂದ ವಾಲಿಯನ್ನು ವಶಕ್ಕೆ ಪಡೆದು ಮಾಳಮಾರುತಿ ಠಾಣೆಯ ಸಿಪಿಐ ನೇತೃತ್ವದಲ್ಲಿ ತನಿಖೆ ಕೈಗೊಂಡು 9 ಮ್ಯಾಕ್ಸಿಕ್ಯಾಬ್, 350 ಗ್ರಾಂ ಚಿನ್ನಾಭರಣ, 6 ಕೆ.ಜಿ ಬೆಳ್ಳಿ ಸೇರಿ ಅಂದಾಜು 5ರಿಂದ 6 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿ ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಆರೋಪಿ ಶಿವಾನಂದ ವಾಲಿ, ಕೆ.ಕಲ್ಯಾಣ್ ಅವರ ಕುಟುಂಬಕ್ಕೆ ವಂಚಿಸಿದ ಬಗ್ಗೆ ಪ್ರಾಥಮಿಕ ತನಿಖೆಯಲ್ಲಿ ಒಪ್ಪಿಕೊಂಡಿದ್ದಾನೆ. ಈತ ಗಂಗಾ ಕುಲಕರ್ಣಿ ಅವರನ್ನು ಮನೆಗೆ ಕಳುಹಿಸಿ ಅವರ ಪತಿಯಿಂದಲೇ ಪತ್ನಿಗೆ ಕಂಟಕ ಇದೆ ಎಂದು ಪೂಜೆ ಮಾಡಿಸುವುದಾಗಿ ಕೋಟ್ಯಂತರ ರೂಪಾಯಿಯನ್ನು ತನ್ನ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿದ್ದ ಎಂದು ತಿಳಿಸಿದ್ದಾರೆ.