ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಎಂಇಎಸ್ ಹಾಗೂ ಶಿವಸೇನಾ ಬೆಂಬಲಿತ ಅಭ್ಯರ್ಥಿ ಶುಭಂ ಸೆಳಕೆ ಪರ ಸಂಜಯ್ ರಾವತ್ ಪ್ರಚಾರ ನಡೆಸಿದರು. ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಅವರು ಬರುತ್ತಿದ್ದಂತೆ ಪತ್ರಕರ್ತರೊಂದಿಗೆ ಮಾತನಾಡಿದರು.
ಇಲ್ಲಿನ ಎಂಇಎಸ್ ಕಾರ್ಯಕರ್ತರು ಬಿಂದಾಸ್ ಆಗಿ ಪ್ರಚಾರ ಮಾಡಲಿ, ನಮ್ಮ ಗಲಾಟೆ ಕರ್ನಾಟಕ ಸರ್ಕಾರದ ಜತೆಗೆ ಹೊರತು ಇಲ್ಲಿನ ಜನತೆಯ ಜೊತೆಯಲ್ಲ. ಭಾಷೆ, ಗಡಿ, ಸಂಸ್ಕೃತಿ ವಿಚಾರದಲ್ಲಿ ನಮ್ಮ ಹೋರಾಟ ಇದೆ ಎಂದರು.
ಬೆಳಗಾವಿಯಲ್ಲಿ ಪ್ರಚಾರ ನಡೆಸಿದ ಸಂಜಯ್ ರಾವತ್ ನಮ್ಮ ಹೋರಾಟ ನ್ಯಾಯಕ್ಕಾಗಿ ಮತ್ತು ನಮ್ಮ ಅಸ್ಮಿತೆ ಕಾಪಾಡಿಕೊಳ್ಳಲು ನಡೆದಿದೆ ಎಂದು ರಾವತ್ ತಿಳಿಸಿದರು. ಈ ಉಪಚುನಾವಣೆಯಲ್ಲಿ ಶಿವಸೇನೆ ಹಾಗೂ ಎಂಇಎಸ್ನಿಂದ ಒಮ್ಮತದ ಅಭ್ಯರ್ಥಿಯಾಗಿ ಶುಭಂ ಸೆಳಕೆ ಕಣಕ್ಕಿಳಿದಿದ್ದು, ಅವರ ಪರ ಪ್ರಚಾರ ನಡೆಸುವುದು ನಮ್ಮ ಕರ್ತವ್ಯ. ನಮ್ಮ ಅಭ್ಯರ್ಥಿ 50 ಸಾವಿರ ಮತ ಪಡೆದುಕೊಳ್ಳುವುದು ಅನುಮಾನ ಎನ್ನುವ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ಆದರೆ, ಇದೀಗ ಗೆಲ್ಲುವ ಸಾಧ್ಯತೆ ಇದೆ. ಕಾಂಗ್ರೆಸ್ ಮತ್ತು ಬಿಜೆಪಿಗೆ ನಮ್ಮ ಅಭ್ಯರ್ಥಿ ಪ್ರಬಲ ಪೈಫೋಟಿ ನೀಡುತ್ತಿದ್ದಾರೆ ಎಂದಿದ್ದಾರೆ.
ನಮ್ಮ ಅಭ್ಯರ್ಥಿ ಪ್ರಬಲ ಪೈಪೋಟಿ ನೀಡುತ್ತಿರುವ ಕಾರಣ ಇಂದು ಕರ್ನಾಟಕ ಸಿಎಂ ಬಂದಿದ್ದಾರೆ, ನಾಳೆ ನಿತಿನ್ ಗಡ್ಕರಿ ಬರ್ತಾರೆ, ನಾಡಿದ್ದು ಪ್ರಧಾನಿಯೂ ಬರಬಹುದು, ಎಂಇಎಸ್ ಅಭ್ಯರ್ಥಿ ಶುಭಂ ಪ್ರಬಲ ಪೈಪೋಟಿಯೇ ಇದಕ್ಕೆ ಕಾರಣ ಎಂದರು.