ಬೆಳಗಾವಿ: ಕೊರೊನಾ ಎರಡನೇ ಅಲೆ ನಿಯಂತ್ರಿಸಲು ರಾಜ್ಯ ಸರ್ಕಾರ ಕಳೆದೊಂದು ತಿಂಗಳಿನಿಂದ ಜನತಾ ಕರ್ಫ್ಯೂ ಜಾರಿಗೊಳಿಸಿದೆ. ಅಗತ್ಯ ಸೇವೆಗಳ ವಾಹನಗಳು ಬಿಟ್ಟರೆ ಸಾರ್ವಜನಿಕ ಹಾಗೂ ಖಾಸಗಿ ಸಾರಿಗೆ ಇಲ್ಲದೇ ಜಿಲ್ಲೆ ಸಂಪೂರ್ಣ ಸ್ತಬ್ಧವಾಗಿದೆ. ದುಡಿಯಲು ಬೆಳಗಾವಿಗೆ ಬಂದಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತವರು ಜಿಲ್ಲೆಯ ಹಕ್ಕಿಪಿಕ್ಕಿ ಸಮುದಾಯದ ಜನರು ಇಲ್ಲೇ ಲಾಕ್ ಆಗಿ ಪರದಾಡುವಂತಾಗಿದೆ.
ಹಕ್ಕಿ -ಪಿಕ್ಕಿ ಸಮುದಾಯದವರ ಸಮಸ್ಯೆ ಸಾರಿಗೆ ವ್ಯವಸ್ಥೆಯ ಅಲಭ್ಯ ಕಾರಣದಿಂದ ಬೆಳಗಾವಿಯ ಕಣಬರ್ಗಿ ರಸ್ತೆಯ ಬದಿಯಲ್ಲೇ ಟೆಂಟ್ ಹಾಕಿಕೊಂಡು ಹಕ್ಕಿಪಿಕ್ಕಿ ಸಮುದಾಯದ 20ಕ್ಕೂ ಅಧಿಕ ಕುಟುಂಬಗಳು ವಾಸವಾಗಿವೆ. ಮಳೆ-ಗಾಳಿ ಲೆಕ್ಕಿಸದೇ ಸಣ್ಣಮಕ್ಕಳ ಜೊತೆಯಲ್ಲೇ ಹಕ್ಕಿಪಿಕ್ಕಿ ಸಮುದಾಯದವರು ಸಂಕಷ್ಟದಲ್ಲೇ ಜೀವನ ನಡೆಸುತ್ತಿದ್ದಾರೆ.
ದುಡಿಯಲೆಂದು ಬೆಳಗಾವಿಗೆ ಬಂದಿರುವ ಇವರಿಗೆ ಪಡಿತರ ಕೂಡ ಸಿಗುತ್ತಿಲ್ಲ. ಪಡಿತರ ಚೀಟಿ ಊರಲ್ಲಿ ಬಿಟ್ಟು ದುಡಿಯಲೆಂದು ಬಂದಿರುವ ಹಕ್ಕಿಪಿಕ್ಕಿ ಜನರು ಮರಳಿ ತವರಿಗೆ ತೆರಳಲಾಗದೇ ಇಲ್ಲೇ ಯಾತನೆ ಅನುಭವಿಸುತ್ತಿದ್ದಾರೆ.
ಅಲಂಕಾರಿಕ ಹೂವು ಖರೀದಿಸುವವರಿಲ್ಲ:
ಪ್ಲಾಸ್ಟಿಕ್‍ನಿಂದ ತಯಾರಿಸುವ ಅಲಂಕಾರಿಕ ಹೂವನ್ನು ಸಿದ್ಧಪಡಿಸುವ ಈ ಹಕ್ಕಿಪಿಕ್ಕಿ ಸಮುದಾಯ ನಂತರ ಮಾರುಕಟ್ಟೆಗೆ ತೆರಳಿ ಅದನ್ನು ಮಾರಾಟ ಮಾಡುತ್ತಾರೆ. ಅದರಿಂದ ಬರುವ ಹಣದಿಂದಲೇ ಈ ಸಮುದಾಯದವರು ತಮ್ಮ ಜೀವನ ಸಾಗಿಸುತ್ತಾರೆ. ಕೊರೊನಾ ನಿಯಂತ್ರಿಸಲು ಕೋವಿಡ್ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗಿದೆ. ಇದರಿಂದ ಹಕ್ಕಿಪಿಕ್ಕಿಗಳು ಸಿದ್ಧಪಡಿಸುವ ಅಲಂಕಾರಿಕ ಹೂವುಗಳನ್ನು ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ.
ಶಿವಮೊಗ್ಗದಿಂದ ಇಲ್ಲಿಗೆ ವಲಸೆ ಬಂದಿರವ ಹಕ್ಕಿಪಿಕ್ಕಿಗಳಿಗೆ ಇದೀಗ ಜೀವನ ನಡೆಸುವುದೇ ದೊಡ್ಡ ಸವಾಲಾಗಿದೆ. ಹೂವು ಮಾರಾಟ ಆಗದ ಕಾರಣ ಇದ್ದ ಹಣವೂ ಖಾಲಿ ಆಗುತ್ತಿವೆ. ಜೀವನ ನಡೆಸುವುದೇ ಕಷ್ಟವಾಗುತ್ತಿದೆ. ಇದ್ದ ಹಣದಲ್ಲೇ ಅಕ್ಕಿ ತಂದು ಮಕ್ಕಳಿಗೆ ಗಂಜಿ ಮಾಡಿ ನೀಡುತ್ತಿದ್ದೇವೆ ಎಂದು ಹಕ್ಕಿಪಿಕ್ಕಿಗಳು ಅಳಲು ತೋಡಿಕೊಳ್ಳುತ್ತಿದ್ದಾರೆ.
ಮಕ್ಕಳ ಜತೆಗೆ ಟೆಂಟ್‍ನಲ್ಲೇ ವಾಸ:
ನೂರಕ್ಕೂ ಅಧಿಕ ಹಕ್ಕಿಪಿಕ್ಕಿಗಳು ಇಲ್ಲಿನ ಕಣಬರ್ಗಿ ರಸ್ತೆಯಲ್ಲಿ ಟೆಂಟ್ ಹಾಕಿಕೊಂಡು ವಾಸವಾಗಿದ್ದಾರೆ. ಮಳೆ - ಗಾಳಿಯಲ್ಲೂ ಸಣ್ಣ - ಸಣ್ಣ ಮಕ್ಕಳ ಜೊತೆಗೆ ಬದುಕುತ್ತಿದ್ದಾರೆ. ಮುಂಗಾರು ಆರಂಭವಾಗಿದ್ದು, ಉತ್ತರ ಕರ್ನಾಟಕ ಭಾಗದ ಇತರ ಜಿಲ್ಲೆಗೆ ಹೋಲಿಸಿದರೆ ಬೆಳಗಾವಿಯಲ್ಲಿ ತುಸು ಮಳೆ ಪ್ರಮಾಣ ಜಾಸ್ತಿ. ಅಲ್ಲದೇ ಕಳೆದೊಂದು ವಾರದಿಂದ ಅಧಿಕ ಪ್ರಮಾಣದಲ್ಲಿ ತನ್ನಣೆಯ ಗಾಳಿ ಬೀಸತ್ತಿದೆ. ಹೀಗಿದ್ದರೂ ಸಂಕಷ್ಟದಲ್ಲೇ ಹಕ್ಕಿಪಿಕ್ಕಿಗಳು ಇಲ್ಲಿ ವಾಸವಾಗಿದ್ದಾರೆ.
ಇದನ್ನೂ ಓದಿ:ಬೆಳಗಾವಿ ಲಾಕ್: ಅನಗತ್ಯವಾಗಿ ಓಡಾಡದಂತೆ ಜನರಿಗೆ ಡಿಸಿಪಿ ಆಮಟೆ ಎಚ್ಚರಿಕೆ
ಟೆಂಟ್‍ಗಳಲ್ಲಿ ವಾಸಿಸುವ ಅಭ್ಯಾಸ ನಮಗಿದೆ. ಇದರಿಂದ ನಮಗೇನೂ ಕಷ್ಟವಾಗುತ್ತಿಲ್ಲ. ಆದರೆ, ದುಡಿಮೆ ನಿಂತಿದ್ದರಿಂದ ತುತ್ತು ಅನ್ನಕ್ಕೆ ಪರದಾಡಬೇಕಾಗಿದೆ. ಮಹಾನಗರ ಪಾಲಿಕೆ ಅಧಿಕಾರಿಗಳಾಗಲಿ ಹಾಗು ದಾನಿಗಳಾಗಲಿ ನಮ್ಮ ಬಳಿ ಬಂದಿಲ್ಲ. ನಮ್ಮಲ್ಲಿರುವ ಅಲ್ಪಸ್ವಲ್ಪ ಹಣದಿಂದಲೇ ಜೀವನ ಸಾಗಿಸುತ್ತಿದ್ದೇವೆ.
ಮಕ್ಕಳಿಗೆ ಗಂಜಿ ಕೊಡುತ್ತಿದ್ದೇವೆ. ಕೊರೊನಾ ಮುಗಿಯುವ ತನಕವಾದರೂ ಜಿಲ್ಲಾಡಳಿತ ನಮಗೆ ನೆರವು ನೀಡಬೇಕು. ಅನ್‍ಲಾಕ್ ಆದ ನಂತರ ನಾವು ದುಡಿಯುತ್ತೇವೆ ಎಂದು ಹಕ್ಕಿಪಿಕ್ಕಿ ಸಮುದಾಯದ ಮಹಿಳೆ ದೀಪಾ ಈಟಿವಿ ಭಾರತದೊಂದಿಗೆ ತಮ್ಮ ಸಮಸ್ಯೆ ತೋಡಿಕೊಂಡರು.