ಬೆಳಗಾವಿ: ನಮ್ಮ ಪಕ್ಷಕ್ಕೆ ಶಕ್ತಿ ತುಂಬಿದವರಿಗೆ ರಾಜಕಾರಣದಲ್ಲಿ ಯಾವ ಸಮಯದಲ್ಲಿ ಏನು ಮಾಡಬೇಕು, ಅದು ನಮಗೆ ಗೊತ್ತಿದೆ. ನಾವು ಅವರ ಜೊತೆ ಇದ್ದೇವೆ. ಇಡೀ ಪಕ್ಷ ಅವರ ಜೊತೆ ಇದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. ಬೆಳಗಾವಿ ಪ್ರವಾಸಿ ಮಂದಿರದಲ್ಲಿ ಇಂದು ಬೆಳಗ್ಗೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನಾನು ಚುನಾವಣೆ ಬ್ಯುಸಿ ಇದ್ದೆ. ಚುನಾವಣೆ ನಡೆಯುವಾಗ, ಗೆದ್ದಾಗ ಮತ್ತು ಚುನಾವಣೆ ಆದ ಮೇಲೆ ನಮ್ಮ ಪಕ್ಷಕ್ಕೆ ಶಕ್ತಿ ಕೊಟ್ಟ ನಾಯಕರನ್ನು ಭೇಟಿ ಮಾಡಬೇಕಿತ್ತು. ಆದರೆ ಸಮಯ ಸಿಕ್ಕಿರಲಿಲ್ಲ.
ಸರ್ಕಾರ ರಚನೆ, ಸಂಪುಟ ರಚನೆ, ಶಾಸಕಾಂಗ ಸಭೆ, ನಮ್ಮ ಸರ್ಕಾರದ ಗ್ಯಾರಂಟಿಗಳು, ಇಲಾಖೆಗಳ ಪ್ರಗತಿ ಪರಿಶೀಲನೆಗಳು ಈ ಎಲ್ಲ ಕೆಲಸಗಳನ್ನು ಸರ್ಕಾರ ಪ್ರಾರಂಭ ಮಾಡಬೇಕಿತ್ತು. ಆದರೂ ಮಧ್ಯದಲ್ಲಿ ಟೈಂ ಮಾಡಿಕೊಂಡು ಪ್ರತ್ಯೇಕವಾಗಿ ಜಗದೀಶ ಶೆಟ್ಟರ್ ಮತ್ತು ಲಕ್ಷ್ಮಣ ಸವದಿ ಅವರನ್ನು ಭೇಟಿ ಆಗಲು ಬಂದಿದ್ದೇನೆ ಎಂದು ತಿಳಿಸಿದರು.
ಇದಲ್ಲದೇ ತುಮಕೂರಿನ ಗುಬ್ಬಿ ವಾಸಣ್ಣ, ಅರಸಿಕೇರೆ ಶಿವಲಿಂಗೇಗೌಡ, ಪುಟ್ಟಣ್ಣ, ಬಾಬುರಾವ ಚಿಂಚನಸೂರ ಅವರೆಲ್ಲ ಬೇರೆ ಪಾರ್ಟಿಯಲ್ಲಿ ತಮ್ಮ ಸ್ಥಾನಗಳಿಗೆ ರಾಜೀನಾಮೆ ಕೊಟ್ಟು ಬಂದು ನಮ್ಮ ಪಕ್ಷಕ್ಕೆ ಶಕ್ತಿ ತುಂಬಿದ್ದಾರೆ. ಈಗ ಅವರಿಗೆ ನಾವು ಶಕ್ತಿ ತುಂಬಬೇಕಾದದ್ದು ನಮ್ಮ ಕರ್ತವ್ಯ. ಆ ಹಿನ್ನೆಲೆಯಲ್ಲಿ ಅವರ ಜೊತೆಗೆ ಪಕ್ಷದ ಕೆಲ ಆಂತರಿಕ ವಿಚಾರಗಳನ್ನು ಚರ್ಚೆ ಮಾಡಿ, ಅವರ ಸಲಹೆ ಪಡೆಯಲು ಸೌಹಾರ್ದಯುತವಾಗಿ ಭೇಟಿ ಮಾಡಲು ಬಂದಿದ್ದೇನೆ. ಅಷ್ಟು ಬಿಟ್ಟರೆ ರಾಜಕೀಯದ ವಿಶೇಷತೆ ಏನೂ ಇಲ್ಲ ಎಂದು ಡಿಕೆಶಿ ಸ್ಪಷ್ಟಪಡಿಸಿದರು.