ಬೆಳಗಾವಿ: ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕ ಮೊದಲ ಬಾರಿಗೆ ಕುರುಬ ಸಮಾಜದಿಂದ ಅ.2 ಮತ್ತು 3 ರಂದು ಎರಡು ದಿನಗಳ ಕಾಲ ಬೆಳಗಾವಿಯಲ್ಲಿ ಶಫರ್ಡ್ಸ್ ಇಂಡಿಯಾ ಇಂಟರ್ನ್ಯಾಷನಲ್ ರಾಷ್ಟ್ರೀಯ ಅಧಿವೇಶನ ನಡೆಯುತ್ತಿದೆ ಎಂದು ಶಫರ್ಡ್ಸ್ ಇಂಡಿಯಾ ಇಂಟರ್ನ್ಯಾಷನಲ್ ಸಂಸ್ಥಾಪಕ ಅಧ್ಯಕ್ಷರೂ ಆಗಿರುವ ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ ಮಾಹಿತಿ ನೀಡಿದ್ದಾರೆ.
ಕಾರ್ಯಕ್ರಮ ನಡೆಯಲಿರುವ ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕುರುಬ ಸಮಾಜದ ಭವಿಷ್ಯದ ದೃಷ್ಟಿಯಿಂದ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ನಾವು ಏನೇನೂ ಕೇಳಬಹುದು ಎಂದು ಅಕ್ಟೋಬರ್ 2ರಂದು ನಡೆಯುವ ಸಭೆಯಲ್ಲಿ ಚರ್ಚೆ ನಡೆಸಿ ಅ.3 ರಂದು ನಡೆಯುವ ಅಧಿವೇಶನದಲ್ಲಿ ನಿರ್ಧಾರ ಪ್ರಕಟಿಸುವ ಕುರಿತು ಸಿದ್ಧತೆ ನಡೆಸಿದ್ದೇವೆ. ರಾಷ್ಟ್ರದಲ್ಲಿ ಎಲ್ಲರ ಜೊತೆಗೆ ಬದುಕಿ ಬಾಳುತ್ತಿರುವ ಕುರುಬ ಸಮುದಾಯವು ಇದೇ ಮೊದಲ ಬಾರಿಗೆ ರಾಷ್ಟ್ರೀಯ ಅಧಿವೇಶನವನ್ನು ಬೆಳಗಾವಿಯಲ್ಲಿ ಆಯೋಜಿಸುತ್ತಿದೆ ಎಂದರು.
ಬ್ರಿಟಿಷರ್ ವಿರುದ್ಧ ಸ್ವಾತಂತ್ರ್ಯದ ಕಹಳೆ ಮೊಳಗಿಸಿದ್ದ ಕಿತ್ತೂರು ರಾಣಿ ಚನ್ನಮ್ಮ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹೆಸರನ್ನು ಬೃಹತ್ ವೇದಿಕೆಗೆ ಇಡಲಾಗಿದೆ. ಈ ಒಂದು ಅಧಿವೇಶನದಲ್ಲಿ ಕುರುಬ ಸಮಾಜದಿಂದ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅವರಿಗೆ ಬೇರೆ ಬೇರೆ ರಾಜ್ಯದಿಂದ ಬರುತ್ತಿರುವ ಪ್ರತಿನಿಧಿಗಳು ರಾಷ್ಟ್ರೀಯ ಅಭಿನಂದನೆಗಳನ್ನು ಸಲ್ಲಿಸಿ ಸತ್ಕರಿಸಲಿದ್ದಾರೆ ಎಂದು ಹೇಳಿದರು.