ಕರ್ನಾಟಕ

karnataka

ETV Bharat / state

ಶಾಮನೂರು ಶಿವಶಂಕರಪ್ಪನವರು ಒಂದು ಜಾತಿಯ ಪಕ್ಷದ ಪ್ರತಿನಿಧಿಯಂತೆ ಮಾತನಾಡುತ್ತಿರುವುದು ಸರಿಯಲ್ಲ: ಹೆಚ್‌.ವಿಶ್ವನಾಥ್ - ಹೆಚ್‌ ವಿಶ್ವನಾಥ್

ನಿಮಗೆ ಕಾಂಗ್ರೆಸ್‌ನಲ್ಲಿ ಅವಕಾಶಗಳು ಸಿಕ್ಕಿವೆ. ಏಳು ಮಂತ್ರಿ ಸ್ಥಾನ ಕೊಟ್ಟಿದ್ದಾರೆ. ಇನ್ನೆಷ್ಟು ಸ್ಥಾನ ಬೇಕಿತ್ತು ಎಂದು ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪನವರಿಗೆ ವಿಧಾನ ಪರಿಷತ್‌ ಸದಸ್ಯ ಹೆಚ್‌.ವಿಶ್ವನಾಥ್ ಪ್ರಶ್ನಿಸಿದ್ದಾರೆ.

MLC H Vishwanath
ವಿಧಾನ ಪರಿಷತ್‌ ಸದಸ್ಯ ಹೆಚ್‌.ವಿಶ್ವನಾಥ್

By ETV Bharat Karnataka Team

Published : Oct 1, 2023, 5:41 PM IST

ಬೆಳಗಾವಿಯಲ್ಲಿ ವಿಧಾನ ಪರಿಷತ್‌ ಸದಸ್ಯ ಹೆಚ್‌.ವಿಶ್ವನಾಥ್ ಮಾತನಾಡಿದರು.

ಬೆಳಗಾವಿ: ಜಾತ್ಯತೀತ ತತ್ವದ ಮೇಲೆ ನಂಬಿಕೆ ಇಟ್ಟಿರುವ ಕಾಂಗ್ರೆಸ್‌ ಪಕ್ಷದ ಪ್ರತಿನಿಧಿಯಾದ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪನವರು ಒಂದು ಜಾತಿಯ ಪಕ್ಷದ ಪ್ರತಿನಿಧಿಯಂತೆ ಮಾತನಾಡುತ್ತಿರುವುದನ್ನು ನಾನು ಖಂಡಿಸುತ್ತೇನೆ ಎಂದು ವಿಧಾನ ಪರಿಷತ್‌ ಸದಸ್ಯ, ಮಾಜಿ ಸಚಿವ ಹೆಚ್‌.ವಿಶ್ವನಾಥ್ ಹೇಳಿದರು. "ನಿಮಗೆ ಕಾಂಗ್ರೆಸ್‌ನಲ್ಲಿ ಅವಕಾಶಗಳು ಸಿಕ್ಕಿವೆ. 33 ಸಚಿವರಲ್ಲಿ ಏಳು ಮಂತ್ರಿ ಸ್ಥಾನ ಕೊಟ್ಟಿದ್ದಾರೆ. ಇನ್ನೆಷ್ಟು ಸ್ಥಾನ ಬೇಕಿತ್ತು" ಎಂದು ಅವರು ಪ್ರಶ್ನಿಸಿದರು.

ಅಖಿತ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷರೂ ಆದ ಶಾಮನೂರು ಶಿವಶಂಕರಪ್ಪ, ರಾಜ್ಯ ಸರ್ಕಾರದಲ್ಲಿ ಲಿಂಗಾಯತರನ್ನು ಕಡೆಗಣಿಸಲಾಗಿದೆ ಹಾಗೂ ಸಮಾಜದ ಅಧಿಕಾರಿಗಳಿಗೆ ತೊಂದರೆಯಾಗಿದೆ ಎಂದು ದೂರಿದ್ದರು. ಈ ಹೇಳಿಕೆಯ ಬಗ್ಗೆ ಬೆಳಗಾವಿಯಲ್ಲಿಂದು ಪ್ರತಿಕ್ರಿಯಿಸಿದ ವಿಶ್ವನಾಥ್, ''ನಮ್ಮಲ್ಲಿ ಜಾತಿ ಆಧರಿಸಿ ಯಾರಿಗೂ ಹುದ್ದೆ ಕೊಡುವುದಿಲ್ಲ. ಬೇರೆ-ಬೇರೆ ಜಾತಿಯವರಿಗೆ ಎಲ್ಲೆಲ್ಲಿ ಅವಕಾಶ ಮಾಡಿಕೊಡಬೇಕೋ, ಅಲ್ಲಿ ಮಾಡಿಕೊಡಲಾಗಿದೆ. ಲಿಂಗಾಯತರಿಗೆ ಏಳು ಸಚಿವ ಸ್ಥಾನ ಕೊಡಲಾಗಿದೆ. ನಿಮಗೆ ಮುಖ್ಯಮಂತ್ರಿ ಸ್ಥಾನ ಬೇಕಿದ್ದರೆ ನಾಯಕತ್ವವನ್ನು ನೀವೇ ವಹಿಸಿಕೊಳ್ಳಿ'' ಎಂದು ತೀಕ್ಷ್ಣವಾಗಿ ಹೇಳಿದರು.

''ನಿಮ್ಮ ಸಮುದಾಯದವರಿಂದ ಚುನಾವಣೆಯಲ್ಲಿ ಹೆಚ್ಚಿನ ಮತಗಳನ್ನು ಹಾಕಿಸಿ, ಗೆದ್ದು ಬಂದು ಮುಖ್ಯಮಂತ್ರಿಯಾಗಿ. ಈ ಬಗ್ಗೆ ನೀವು ಹೆಚ್ಚಿನ ಆಸಕ್ತಿ ವಹಿಸಿ. ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ನಿಮ್ಮ ಸಮುದಾಯದಿಂದ ಎಷ್ಟು ಮತ ಹಾಕಿಸಿದ್ದೀರಾ ಎಂದು ಪ್ರಶ್ನಿಸಿದ ಅವರು, ಸಿದ್ದರಾಮಯ್ಯ ಅವರಿಂದಲೇ ನೀವೆಲ್ಲ ಗೆದ್ದಿದ್ದೀರಿ ಎಂದು ನಾನು ಬಹಳ ಖಾರವಾಗಿ ಹೇಳಬೇಕಾಗುತ್ತದೆ. ಹೀಗಾಗಿ, ಅನಾವಶ್ಯಕವಾಗಿ ಮಾತನಾಡಬೇಡಿ'' ಎಂದು ಶಿವಶಂಕರಪ್ಪ ಅವರಿಗೆ ಟಾಂಗ್ ನೀಡಿದರು.

ಜಾತಿಯ ವಿಚಾರ ಎತ್ತಿ ಮಾತನಾಡಿದರೆ ಆಡಳಿತ ಯಂತ್ರ ಕುಸಿಯುತ್ತದೆ: ಮುಂದುವರಿದು ಮಾತನಾಡಿದ ವಿಶ್ವನಾಥ್, ''ಕುರುಬ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಮತ ಹಾಕಿ ಕಾಂಗ್ರೆಸ್ ಪಕ್ಷವನ್ನು ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಿಸಿದ್ದಾರೆ. ಲಿಂಗಾಯತರು ಸೇರಿದಂತೆ ಎಲ್ಲ ಸಮುದಾಯದವರು ಕೂಡ ಮತ ಹಾಕಿದ್ದಾರೆ. ಜಾತಿಯ ಆಧಾರದ ಮೇಲೆ ಅಧಿಕಾರ ನೀಡಲಾಗುತ್ತಿದ್ದರೆ, ಸಿದ್ದರಾಮಯ್ಯ ಅವರಿಗೆ ಬಹಳ ಹತ್ತಿರವಿದ್ದವರು ನೀವೇ, ಅದನ್ನು ಸರಿಪಡಿಸಲು ಹೇಳಿ. ಈ ವಿಷಯವನ್ನೇಕೆ ಬೀದಿಗೆ ಬಂದು ದೊಡ್ಡ ರಂಪಾಟ ಮಾಡುತ್ತಿದ್ದೀರಾ?. ಅಧಿಕಾರಶಾಹಿ ಆಡಳಿತವನ್ನು ಬೀದಿಗೆ ತಂದು ಮಾತನಾಡುತ್ತಿದ್ದೀರಾ'' ಎಂದು ಪ್ರಶ್ನಿಸಿದರು.

ಅಲ್ಲದೇ, ''ಜಾತಿಯ ವಿಚಾರ ಎತ್ತಿ ಮಾತನಾಡಿದರೆ ಆಡಳಿತ ಯಂತ್ರ ಕುಸಿಯುತ್ತದೆ. ನಿಮಗೆ ಜವಾಬ್ದಾರಿ ಇಲ್ಲವೇ?, ಜವಾಬ್ದಾರಿಯಿಂದ ಮಾತನಾಡುವುದನ್ನು ಕಲಿಯಿರಿ. ನೀವೇ ಹೀಗೆ ಮಾತನಾಡಿದರೆ, ಸಣ್ಣ–ಪುಟ್ಟ ಜಾತಿಗಳ ಜನ ಏನು ಮಾಡಬೇಕು. ಅದನ್ನು ಗಮನದಲ್ಲಿಟ್ಟುಕೊಂಡು ಎಚ್ಚರಿಕೆಯಿಂದ ಮಾತನಾಡಿ'' ಎಂದು ಶಾಮನೂರು ಶಿವಶಂಕರಪ್ಪನವರಿಗೆ ಸಲಹೆ ನೀಡಿದರು.

ಇದನ್ನೂ ಓದಿ:ನಮ್ಮ ಸಮಾಜದ ಅಧಿಕಾರಿಗಳಿಗೆ ತೊಂದರೆಯಾಗಿದೆ: ಶಾಸಕ ಶಾಮನೂರು ಶಿವಶಂಕರಪ್ಪ ಅತೃಪ್ತಿ

ABOUT THE AUTHOR

...view details