ಬೆಳಗಾವಿ: ವಿವಾದಾತ್ಮಕ ಸಿಡಿ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಮಾಹಿತಿ ಪಡೆಯಲು ವಿಶೇಷ ತನಿಖಾ ತಂಡದ (ಎಸ್ಐಟಿ) ಅಧಿಕಾರಿಗಳು ಗೋಕಾಕ್ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.
ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಗೋಕಾಕ್ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಿಡಿ ಪ್ರಕರಣದ ವಿಚಾರಣೆಗೆ ಗೈರಾಗಿರುವ ಕಾರಣ ಎಸ್ಐಟಿ ಅಧಿಕಾರಿಗಳು ಗೋಕಾಕ್ಗೆ ದೌಡಾಯಿಸಿದ್ದಾರೆ.
ಎಸ್ಐಟಿ ಭೇಟಿ ಬಗ್ಗೆ ಮಾಹಿತಿ ನೀಡಿದ ವೈದ್ಯರು ಗೋಕಾಕ ತಾಲೂಕಾ ಆಸ್ಪತ್ರೆಗೆ ಎಸ್ಐಟಿ ತಂಡ ಭೇಟಿ ನೀಡಿರುವ ವಿಚಾರವನ್ನು ವೈದ್ಯರು ದೃಢಪಡಿಸಿದ್ದಾರೆ. ಆಸ್ಪತ್ರೆಯ ವೈದ್ಯಾಧಿಕಾರಿ ಡಾ ರವೀಂದ್ರ ಅಂಟಿನ್ ಮಾತನಾಡಿ, ಎಸ್ಐಟಿ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಹೋಗಿದ್ದಾರೆ. ಚಿಕಿತ್ಸೆಯ ಕುರಿತು ಇಬ್ಬರು ಅಧಿಕಾರಿಗಳು ಬಂದು ಸಂಪೂರ್ಣ ಮಾಹಿತಿ ಪಡೆದಿದ್ದಾರೆ ಎಂದರು.
ಎಸ್ಐಟಿ ಅಧಿಕಾರಿಗಳು ರಮೇಶ ಜಾರಕಿಹೊಳಿ ಅವರನ್ನು ಭೇಟಿ ಮಾಡಿಲ್ಲ. ಕೋವಿಡ್ ಪರೀಕ್ಷಾ ವರದಿ ಪರಿಶೀಲಿಸಿ ಚಿಕಿತ್ಸೆ ಬಗ್ಗೆ ಒಂದು ಗಂಟೆಗಳ ಕಾಲ ನಮ್ಮೊಂದಿಗೆ ಚರ್ಚೆ ನಡೆಸಿದ್ದಾರೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡುವ ಮುನ್ನ ಎಸ್ಐಟಿಗೆ ಮಾಹಿತಿ ನೀಡುವಂತೆ ಕೋರಿದ್ದಾರೆ ಎಂದರು.