ಅಥಣಿ: ಭೂಸುಧಾರಣೆ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ಮಾಡಿ ಜಾರಿಗೆ ತಂದಿರುವ ರಾಜ್ಯ ಸರ್ಕಾರದ ವಿರುದ್ಧ ಜಿಲ್ಲೆಯ ಹಲವಾರು ರೈತ ಸಂಘಟನೆಗಳು ಸರ್ಕಾರದ ನಿಲುವನ್ನು ಖಂಡಿಸಿ ಅಥಣಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಅಥಣಿಯ ಅಂಬೇಡ್ಕರ್ ವೃತ್ತದಲ್ಲಿ ನೂರಾರು ರೈತರು ಹಾಗೂ ರೈತ ಮುಖಂಡರು ಜೊತೆಗೂಡಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಡಿಸಿಎಂ ಲಕ್ಷ್ಮಣ್ ಸವದಿ ನಿವಾಸಕ್ಕೆ ಮುತ್ತಿಗೆ ಹಾಕಲು ಮುಂದಾದ ರೈತರನ್ನು ಮಾರ್ಗಮಧ್ಯೆ ಅಥಣಿ ಪೊಲೀಸರು ತಡೆದಿದ್ದಕ್ಕೆ ರೈತರು ಹಾಗೂ ಪೊಲೀಸರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಪೊಲೀಸರ ವರ್ತನೆ ಖಂಡಿಸಿ ಅವರ ವಿರುದ್ಧ ರೈತ ಮುಖಂಡರು ಘೋಷಣೆ ಕೂಗಿದರು.
ರಾಜ್ಯ ಸರ್ಕಾರದ ವಿರುದ್ಧ ಬೆಳಗಾವಿ ಜಿಲ್ಲೆಯ ರೈತ ಸಂಘಟನೆಗಳಿಂದ ಪ್ರತಿಭಟನೆ ಇದೇ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡೆ ಜಯಶ್ರೀ ಗುರನ್ನವರ, ಭೂಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದಿರುವುದು ರೈತ ಜನವಿರೋಧಿ ನೀತಿಯಾಗಿದೆ. ಈ ಕಾಯ್ದೆಯನ್ನು ಕಾರ್ಪೊರೇಟ್, ರಿಯಲ್ ಎಸ್ಟೇಟ್, ಉದ್ದಿಮೆದಾರರಿಗೆ ಅನುಕೂಲವಾಗುವಂತೆ ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವುದು ಖಂಡನೀಯ ಎಂದರು. ರೈತರು ಯಾರು ಕಾಯ್ದೆಗೆ ವಿರೋಧ ಮಾಡುತ್ತಿಲ್ಲ ಎಂದು ಡಿಸಿಎಂ ಸವದಿ ಹೇಳಿದ್ದಕ್ಕೆ ಅವರ ವಿರುದ್ಧ ಹರಿಹಾಯ್ದರು.
ರಾಜ್ಯ ಸರ್ಕಾರ ತಕ್ಷಣವೇ ಎಚ್ಚೆತ್ತುಕೊಂಡು ತನ್ನ ನಿರ್ಧಾರ ಬದಲಿಸದಿದ್ದರೆ, ಹೋರಾಟ ಮುಂದುವರಿಸುತ್ತೇವೆ ಎಚ್ಚರಿಕೆ ರವಾನಿಸಿದರು.