ಚಿಕ್ಕೋಡಿ/ಬೆಳಗಾವಿ: ಮಹಾರಾಷ್ಟ್ರದ ಘಟ್ಟ ಪ್ರದೇಶ ಹಾಗೂ ಬೆಳಗಾವಿ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಚಿಕ್ಕೋಡಿ ಉಪವಿಭಾಗದ ಏಳು ಸೇತುವೆಗಳು ಮುಳುಗಡೆಯಾಗಿವೆ. ಅಲ್ಲದೆ ಜಿಲ್ಲೆಯ ಹಲವೆಡೆ ಭಾರಿ ಮಳೆಯಾಗುತ್ತಿದೆ.
ನಾಲ್ಕು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಜಿಲ್ಲೆಯ ಕೃಷ್ಣಾ, ವೇದಗಂಗಾ, ದೂಧಗಂಗಾ ಹಾಗೂ ಹಿರಣ್ಯಕೇಶಿ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ. ನಿಪ್ಪಾಣಿ ತಾಲೂಕಿನ ವೇದಗಂಗಾ ನದಿಯ ಜತ್ರಾಟ್ - ಭೀವಶಿ, ಅಕ್ಕೋಳ - ಸಿದ್ನಾಳ, ಮಮದಾಪೂರ - ಹುಣ್ಣರಗಿ, ಭೋಜವಾಡಿ - ಕೊಣ್ಣೂರ ಹಾಗೂ ಕಾರದಗಾ - ಭೋಜ ಗ್ರಾಮಗಳ ಸಂಪರ್ಕ ಸೇತುವೆಗಳು ಮುಳುಗಡೆಯಾಗಿವೆ.
ಹುಕ್ಕೇರಿ ತಾಲೂಕಿನ ಹಿರಣ್ಯಕೇಶಿ ನದಿಯ ಸಂಕೇಶ್ವರ - ನಾಗನೂರ ಗ್ರಾಮದ ಸಂಪರ್ಕ ಸೇತುವೆ ಕೂಡಾ ಜಲಾವೃತವಾಗಿದೆ. ಚಿಕ್ಕೋಡಿ ತಾಲೂಕಿನ ಕಲ್ಲೋಳ - ಯಡೂರ ಬ್ರಿಡ್ಜ್ ಕಂ ಬಾಂದಾರ ಕೂಡ ಮುಳುಗಡೆಯಾಗಿದೆ. ಕಲ್ಲೋಳ ಗ್ರಾಮದ ದತ್ತ ದೇವಸ್ಥಾನ ಹಾಗೂ ಕಾರದಗಾ ಗ್ರಾಮದ ಬಂಗಾಲಿ ಬಾಬಾ ದೇವಸ್ಥಾನಗಳಿಗೆ ನೀರು ನುಗ್ಗಿದೆ.
ಕಾರುಗಳು ಜಖಂ:
ಬೆಳಗಾವಿಯ ಕೆಎಲ್ಇ ಆಸ್ಪತ್ರೆ ಎದುರಿಗೆ ಮರ ಬಿದ್ದು ಎರಡು ಕಾರುಗಳು ಜಖಂಗೊಂಡಿವೆ. ಇದರಿಂದ ಕೆಲ ಗಂಟೆಗಳ ಕಾಲ ಕೆಎಲ್ಇ ರಸ್ತೆ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿತ್ತು. ಹೀಗಾಗಿ ಆಸ್ಪತ್ರೆಗೆ ತೆರಳಬೇಕಿದ್ದ ರೋಗಿಗಳು ಹಾಗೂ ಸಂಬಂಧಿಕರು ಪರದಾಡುವಂತಾಯಿತು.
ಬಳಿಕ ಎಪಿಎಂಸಿ ಠಾಣೆ ಪೊಲೀಸರು ಮಾರ್ಗ ಬದಲಾಯಿಸಿ ರೋಗಿಗಳಿಗೆ ಹಾಗೂ ಸಂಬಂಧಿಗಳಿಗೆ ಆಸ್ಪತ್ರೆಗೆ ತೆರಳಲು ಅನುಕೂಲ ಮಾಡಿಕೊಟ್ಟರು. ಸ್ಥಳಕ್ಕಾಗಮಿಸಿದ ಮಹಾನಗರ ಪಾಲಿಕೆ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಮರ ತೆರವುಗೊಳಿಸಿದರು. ನಂತರ ಜಖಂಗೊಂಡಿದ್ದ ಕಾರುಗಳನ್ನು ಸ್ಥಳಾಂತರ ಮಾಡಲಾಯಿತು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಬೆಳಗಾವಿಯ ಹಲವೆಡೆ ಭಾರೀ ಅವಾಂತರ ಬೆಳೆಗಳು ಜಲಾವೃತ:
ಮಳೆಯಿಂದ ಮತ್ತೊಮ್ಮೆ ಪ್ರವಾಹದ ಭೀತಿ ಎದುರಾಗಿದ್ದು, ನೂರಾರು ಎಕರೆ ಪ್ರದೇಶದಲ್ಲಿನ ಬೆಳೆ ಜಲಾವೃತವಾಗಿವೆ. ಬೆಳಗಾವಿ ತಾಲೂಕಿನ ಯಳ್ಳೂರ ಗ್ರಾಮದ ಹೊರವಲಯದಲ್ಲಿ ಸಾವಿರಾರು ಎಕರೆ ಭೂಪ್ರದೇಶದಲ್ಲಿ ಬೆಳೆದ ಕೃಷಿ ಜಮೀನಿಗೆ ನೀರು ನುಗ್ಗಿದೆ. ಭತ್ತ, ಕಬ್ಬು, ಜೋಳ ಸೇರಿದಂತೆ ಜಮೀನುಗಳಲ್ಲಿ ನಿರ್ಮಿಸಿದ ಮನೆಗಳೂ ಜಲಾವೃತವಾಗಿವೆ. ಈ ಕುರಿತು ಮಾತನಾಡಿದ ಸ್ಥಳೀಯರು, ಪ್ರತಿವರ್ಷ ಇದೇ ಪರಿಸ್ಥಿತಿ ಇರುತ್ತದೆ. ಬಳ್ಳಾರಿ ನಾಲಾ ಹೂಳೆತ್ತಬೇಕು. ಈ ಬಗ್ಗೆ ಹಲವು ಬಾರಿ ಜಿಲ್ಲಾಡಳಿತದ ಗಮನಕ್ಕೆ ತಂದ್ರೂ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.