ಬೆಳಗಾವಿ :ಉತ್ತರ ಕರ್ನಾಟಕ ಭಾಗದ ಜನರ ಆಶೋತ್ತರಗಳನ್ನ ಚರ್ಚಿಸಲು ಬಿ ಎಸ್ ಯಡಿಯೂರಪ್ಪನವರು ಬೆಳಗಾವಿಯಲ್ಲಿ ಸುವರ್ಣಸೌಧ ನಿರ್ಮಾಣಕ್ಕೆ 2009ರಲ್ಲಿ ಶಂಕುಸ್ಥಾಪನೆ ಹಾಕಿದ್ದರು. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲೇ ಸುವರ್ಣಸೌಧ ಲೋಕಾರ್ಪಣೆಗೊಳಿಸಲಾಗಿತ್ತು.
ಪ್ರತಿವರ್ಷ ಇಲ್ಲಿ ಚಳಿಗಾಲದ ಅಧಿವೇಶನ ನಡೆಸಬೇಕೆಂದು ಸರ್ಕಾರವೇ ನಿರ್ಧಾರ ಕೈಗೊಂಡಿತ್ತು. ಆದರೆ, ಪ್ರವಾಹ ಹಾಗೂ ಕೊರೊನಾ ನೆಪ ಹೇಳಿ ಬೆಳಗಾವಿಯಲ್ಲಿ ಕಳೆದೆರಡು ವರ್ಷಗಳಿಂದ ಅಧಿವೇಶನ ನಡೆಸಲಾಗಿಲ್ಲ. ವಿನಾಕಾರಣ ಸುವರ್ಣಸೌಧ ನಿರ್ವಹಣೆಗೆ ಪ್ರತಿವರ್ಷ ಕೋಟ್ಯಂತರ ಹಣ ವ್ಯಯಿಸಲಾಗುತ್ತಿದೆ.
ಆದರೆ, ಸುವರ್ಣಸೌಧದ ಬಗ್ಗೆ ಈ ಭಾಗದ ಜನರು ಕಂಡಿದ್ದ ಕನಸು ಮಾತ್ರ ಸಾಕಾರಗೊಳ್ಳುತ್ತಿಲ್ಲ. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ತಮ್ಮ ಕನಸಿನ ಕೂಸಿನ ಬಗ್ಗೆ ನಿರ್ಲಕ್ಷ್ಯವಹಿಸುತ್ತಿರುವುದು ಈ ಭಾಗದ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಸುವರ್ಣಸೌಧದಲ್ಲಿ 2 ವರ್ಷದಿಂದ ನಡೆಯದ ಚಳಿಗಾಲದ ಅಧಿವೇಶನ ಕಚೇರಿಗಳ ಸ್ಥಳಾಂತರ ಯಾವಾಗ?:ನಾನು ಸಿಎಂ ಆದರೆ 24 ಗಂಟೆಯಲ್ಲಿ ಸುವರ್ಣಸೌಧಕ್ಕೆ ಕಚೇರಿಗಳನ್ನು ಸ್ಥಳಾಂತರ ಮಾಡುತ್ತೇನೆ ಎಂದು ಚುನಾವಣೆ ಪೂರ್ವ ಯಡಿಯೂರಪ್ಪನವರು ಭರವಸೆ ನೀಡಿದ್ದರು. ಅವರು ಮತ್ತೊಮ್ಮೆ ಅಧಿಕಾರಕ್ಕೆ ಬಂದು ಒಂದೂವರೆ ವರ್ಷಗಳೇ ಕಳೆದಿವೆ. ಆದರೆ, ಈವರೆಗೆ ಮಾಹಿತಿ ಆಯೋಗ ಕಚೇರಿ ಹೊರತುಪಡಿಸಿದ್ರೆ ಮತ್ಯಾವ ಕಚೇರಿಗಳ ಸ್ಥಳಾಂತರವಾಗಿಲ್ಲ.
ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗೆ ಪೂರಕವಾದ ಕಚೇರಿಗಳನ್ನು ಸುವರ್ಣಸೌಧಕ್ಕೆ ಸ್ಥಳಾಂತರಿಸುವಂತೆ ಈ ಭಾಗದ ಮಠಾಧೀಶರು, ಕನ್ನಡ ಸಂಘಟನೆಗಳು ಹೋರಾಟ ಮಾಡುತ್ತಿವೆ. ಹೋರಾಟಗಾರರ ಬೇಡಿಕೆ ಈಡೇರಿಸಬೇಕಿದ್ದ ಸರ್ಕಾರ ಮೌನಕ್ಕೆ ಜಾರಿದ್ದು, ಈ ಭಾಗದ ಜನರ ಅಸಮಾಧಾನಕ್ಕೆ ಕಾರಣವಾಗಿದೆ.
ಎರಡು ವರ್ಷಗಳ ಕಾಲ ಬೆಳಗಾವಿಯಲ್ಲಿ ನಿರೀಕ್ಷೆಗೂ ಮೀರಿ ಮಳೆ ಸುರಿದಿದೆ. ನಿರಂತರ ಮಳೆಯಿಂದ ಸೌಧದ ಕಂಬಗಳು, ಹೊರಗೋಡೆ, ಧ್ವಜಸ್ತಂಭಗಳಲ್ಲಿ ಪಾಚಿ ಬೆಳೆದ ಪರಿಣಾಮ ಸೌಧ ಹಸಿರು ಬಣ್ಣಕ್ಕೆ ತಿರುಗಿದೆ. 450 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಸುವರ್ಣಸೌಧವನ್ನು ಕ್ರಿಯಾಶೀಲವಾಗಿಡಬೇಕು ಎಂಬುವುದು ಈ ಭಾಗದ ಜನರ ಒತ್ತಾಯ. ಆದರೆ, ಕಚೇರಿಗಳ ಸ್ಥಳಾಂತರಕ್ಕೂ ಸರ್ಕಾರ ಮನಸ್ಸು ಮಾಡುತ್ತಿಲ್ಲ. ಇಲ್ಲದ ನೆಪ ಹೇಳಿ ಅಧಿವೇಶನವನ್ನೂ ಇಲ್ಲಿ ನಡೆಸಲಾಗುತ್ತಿಲ್ಲ.
ಓದಿ:ತುಂಗಾಭದ್ರ ನದಿಪಾತ್ರವನ್ನು ಸ್ವಚ್ಛಗೊಳಿಸಿದ ಜಗದ್ಗುರು ವಚನಾನಂದಶ್ರೀ
ಜಿಲ್ಲಾಭವನ ಆಗುತ್ತಿದೆ ಸೌಧ! :ರಾಜ್ಯಮಟ್ಟದ ಕಚೇರಿಗಳನ್ನು ಸುವರ್ಣಸೌಧಕ್ಕೆ ಸ್ಥಳಾಂತರ ಮಾಡಬೇಕು ಎಂದು ಈ ಭಾಗದ ಜನರು ಬೇಡಿಕೆ ಇಡುತ್ತಿದ್ದಾರೆ. ಆದರೆ, ಜಿಲ್ಲಾಮಟ್ಟದ ಕಚೇರಿಗಳನ್ನು ಸೌಧಕ್ಕೆ ಶಿಫ್ಟ್ ಮಾಡುವ ಮೂಲಕ ಸೌಧವನ್ನು ಜಿಲ್ಲಾಭವನ ಪಟ್ಟ ಕಟ್ಟಲು ಹೊರಟಿದೆ. ನಗರ ಪ್ರದೇಶದಿಂದ 10 ಕಿ.ಮೀ ದೂರದಲ್ಲಿರುವ ಸುವರ್ಣಸೌಧಕ್ಕೆ ಈವರೆಗೆ 23 ಜಿಲ್ಲಾಮಟ್ಟದ ಕಚೇರಿಗಳನ್ನು ಸ್ಥಳಾಂತರಿಸಲಾಗಿದೆ.
ಇದರಿಂದ ಸಾರ್ವಜನಿಕರು ಸಂಬಂಧಿಸಿದ ಕಚೇರಿಗಳಿಗೆ ತೆರಳಲು ಪ್ರತಿದಿನ 10 ಕಿ.ಮೀ ಪ್ರಯಾಣ ಮಾಡಬೇಕು. ಅಲ್ಲಿ ಹೋದ್ರೆ ಮತ್ತೆ ಅಂದಾಜು 500 ಮೀಟರ್ ನಡೆದುಕೊಂಡೇ ಸಾಗಬೇಕು. ಹೀಗಾಗಿ ಜಿಲ್ಲಾಮಟ್ಟದ ಕಚೇರಿಗಳ ಸ್ಥಳಾಂತರ ವಾಪಸ್ ಪಡೆದು ರಾಜ್ಯಮಟ್ಟದ ಕಚೇರಿಗಳನ್ನು ಶಿಫ್ಟ್ ಮಾಡಬೇಕೆಂಬುವುದು ಸ್ಥಳೀಯರ ಒತ್ತಾಯ.
ರಾಜಕೀಯ ಪ್ರಾತಿನಿಧ್ಯ ಸಿಕ್ಕರೂ ಆಗದ ಪ್ರಯೋಜನ :ಮುಖ್ಯಮಂತ್ರಿ ಯಡಿಯೂರಪ್ಪನವರ ಸರ್ಕಾರದಲ್ಲಿ ಬೆಳಗಾವಿಗೆ ನಿರೀಕ್ಷೆಗೂ ಮೀರಿ ರಾಜಕೀಯ ಪ್ರಾತಿನಿಧ್ಯ ಸಿಕ್ಕಿದೆ. ಅಧಿಕಾರವನ್ನು ಅನುಭವಿಸುತ್ತಿರುವ ಜಿಲ್ಲಾ ನಾಯಕರು ಸುವರ್ಣಸೌಧಕ್ಕೆ ಕಚೇರಿಗಳನ್ನು ಸ್ಥಳಾಂತರಿಸುವ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಜಿಲ್ಲೆಯಲ್ಲಿ ಡಿಸಿಎಂ ಸೇರಿ ನಾಲ್ವರು ಸಚಿವರಿದ್ದಾರೆ. ಇಷ್ಟೆಲ್ಲ ಪ್ರಾತಿನಿಧ್ಯ ಸಿಕ್ಕಿದ್ದರೂ ಜಿಲ್ಲೆಗೆ ಲಾಭವಾಗದೇ ಇರುವುದು ಈ ಭಾಗದ ಜನರ ನಿರಾಸೆಗೆ ಕಾರಣವಾಗಿದೆ.