ಕರ್ನಾಟಕ

karnataka

ETV Bharat / state

ಬಸವನಕುಡಚಿಯಲ್ಲಿ ನಿತ್ಯವೂ ಶ್ರಾವಣ ಸಂಭ್ರಮ: ಇಲ್ಲಿ ವರ್ಷದ 365 ದಿನವೂ ಮಾಂಸಾಹಾರ, ಮದ್ಯಪಾನ ನಿಷಿದ್ಧ!! - meat has been banned

ಬೆಳಗಾವಿಯ ಬಸವನಕುಡಚಿ ಗ್ರಾಮದಲ್ಲಿ ನೂರಾರು ವರ್ಷಗಳಿಂದ ಮಾಂಸಹಾರ ಸೇವೆನೆ ನಿಷೇಧಿಸಲಾಗಿದೆ.

ಬಸವನಕುಡಚಿ
ಬಸವನಕುಡಚಿ

By

Published : Aug 17, 2023, 12:03 PM IST

Updated : Aug 17, 2023, 6:34 PM IST

ಬಸವನಕುಡಚಿಯಲ್ಲಿನ ಶ್ರಾವಣ ಸಂಭ್ರಮ

ಬೆಳಗಾವಿ:ಶ್ರಾವಣ ಮಾಸ ಇಂದಿನಿಂದ ಆರಂಭವಾಗಿದೆ. ಎಲ್ಲೆಲ್ಲೂ ದೇವರ ಸ್ಮರಣೆ, ಧ್ಯಾನ ನಡೆಯುತ್ತಿದೆ. ಇನ್ನು ಎಲ್ಲ ಊರುಗಳಲ್ಲಿ ವರ್ಷದಲ್ಲಿ ಒಂದು ತಿಂಗಳು ಮಾತ್ರ ಶ್ರಾವಣ ಇದ್ದರೆ ಈ ಊರಲ್ಲಿ ಮಾತ್ರ ಪ್ರತಿದಿನವೂ ಶ್ರಾವಣ. ಮಾಂಸಾಹಾರ ಸೇವನೆ ನಿಷಿದ್ಧ.‌ ಇಂತಹ ಅಪರೂಪದ‌ ಊರಿನ ಪರಿಚಯ ನಿಮಗಾಗಿ.

ಕುಂದಾನಗರಿ ಬೆಳಗಾವಿಗೆ ಹೊಂದಿಕೊಂಡಿರುವ ಹಲವು ಐತಿಹಾಸಿಕ ಹಿನ್ನೆಲೆ ಇರುವ ಬಸವನಕುಡಚಿ ಗ್ರಾಮದಲ್ಲಿಯೇ ನಿತ್ಯ ಶ್ರಾವಣ ಸಂಭ್ರಮ ಮೇಳೈಸಿದೆ. ಇಂದಿನಿಂದ ಎಲ್ಲೆಡೆ ಶ್ರಾವಣ ಆರಂಭವಾಗಿದ್ದರಿಂದ ಶ್ರಾವಣ ಪಾಲಿಸುವವರು ಒಂದು ತಿಂಗಳವರೆಗೂ ಮಾಂಸಾಹಾರ, ಮದ್ಯಪಾನಕ್ಕೆ ಗುಡ್ ಬೈ ಹೇಳುತ್ತಾರೆ. ಆದರೆ, ಈ ಗ್ರಾಮದಲ್ಲಿ ನೂರಾರು ವರ್ಷಗಳಿಂದ ಶ್ರಾವಣ ಅಷ್ಟೇ ಅಲ್ಲದೇ ಇನ್ನುಳಿದ ಸಮಯದಲ್ಲೂ ಯಾವ ಮನೆಯಲ್ಲಿಯೂ ಮಾಂಸಾಹಾರ ಊಟವನ್ನು‌ ತಯಾರಿಸುವುದಿಲ್ಲ ಮತ್ತು ಬೇರೆ ಕಡೆಯಿಂದ ತಂದು ಸೇವಿಸುವುದನ್ನೂ ಕೂಡ ಮಾಡುವುದಿಲ್ಲ. ಅಪ್ಪಟ ಸಸ್ಯಾಹಾರವನ್ನೇ ತಮ್ಮ ಜೀವನ ಪದ್ಧತಿಯನ್ನಾಗಿ ಇಲ್ಲಿನ ಜನ ರೂಢಿಸಿಕೊಂಡಿದ್ದಾರೆ. ಅಲ್ಲದೇ ಗ್ರಾಮದಲ್ಲಿ ಮುಸ್ಲಿಂ ಮತ್ತು ಮರಾಠಾ ಸೇರಿ ಇನ್ನುಳಿದ ಸಮಾಜದವರೂ ಮಾಂಸಾಹಾರ ತಯಾರಿಸುವುದಿಲ್ಲ ಎನ್ನುವುದು ಮತ್ತೊಂದು ವಿಶೇಷತೆ. ಇದಲ್ಲದೇ ಸಾರಾಯಿ ಕೂಡ ಇಲ್ಲಿ ನಿಷಿದ್ಧ.

ಈ ಬಗ್ಗೆ ಈಟಿವಿ ಭಾರತ್ ಜೊತೆಗೆ ಮಾತನಾಡಿದ ಗ್ರಾಮದ ಹಿರಿಯ‌ ಬಸವರಾಜ ಹಣ್ಣಿಕೇರಿ ಮತ್ತು ಮಹಾಂತೇಶ ರಣಗಟ್ಟಿಮಠ ಮಾತನಾಡಿ, ನಮ್ಮೂರಿನಲ್ಲಿ ಕಡ್ಡಾಯವಾಗಿ ಯಾರೂ ಮಾಂಸಾಹಾರ ಮುಟ್ಟುವುದಿಲ್ಲ ಮತ್ತು ತಿನ್ನುವುದಿಲ್ಲ. ಇದು ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಊರು ಬಿಟ್ಟು ಹೊರಗಡೆ ಕೆಲವರು ತಿನ್ನುತ್ತಾರೆ. ಆದರೆ, ಹೀಗೆ ತಿಂದು ಬರುವವರು ದೇವಸ್ಥಾನಕ್ಕೆ ಬರುವುದಿಲ್ಲ. ದೇಶ, ವಿದೇಶಗಳಿಂದಲೂ ಭಕ್ತರು ದೇವಸ್ಥಾನಕ್ಕೆ ಬರುತ್ತಾರೆ ಇದೊಂದು ವಿಶಿಷ್ಟ ಗ್ರಾಮ ಎಂದು ವಿವರಿಸಿದರು.

ಮಹಡಿಯ ಮೇಲೆ ಬಸವಣ್ಣ ದೇವಾಲಯ:ಗ್ರಾಮದ ಮಧ್ಯಭಾಗದಲ್ಲಿ ಚೌಕಾಕಾರ ಗದ್ದುಗೆಯ ಮೇಲೆ ಶಿಲಾಗಂಭಗಳಿಂದ ನಿರ್ಮಿಸಿರುವ ಬಸವನ ದೇವಸ್ಥಾನಕ್ಕೆ ಚಪ್ಪಡಿಗಲ್ಲುಗಳ ಮಳಿಗೆಗಳನ್ನು ವಿಶಿಷ್ಟವಾಗಿ ರೂಪಿಸಲಾಗಿದೆ. ಈ ದೇವಾಲಯದ ಮಧ್ಯಭಾಗದಲ್ಲಿ ಒಂದು ಅಖಂಡ ಶಿಲಾಗಂಭವಿದ್ದು, ಇದು ದೇವಾಲಯದ ಆಧಾರಗಂಭ ಎನ್ನಬಹುದು. ಬಸವನ ವಿಗ್ರಹವನ್ನು ಮಹಡಿಯ ಮೇಲೆ ಪ್ರತಿಷ್ಠಾಪಿಸಿರುವುದು ಇಲ್ಲಿನ ವಿಶೇಷತೆಗಳಲ್ಲೊಂದು, ಇಂತಹ ಶೈಲಿಯ ದೇವಸ್ಥಾನ ಕರ್ನಾಟಕದಲ್ಲಿ ದೊರೆಯುವುದು ಬಲು ಅಪರೂಪ ಎಂದೇ ಹೇಳಬಹುದು.

ಬಸವನಕುಡಚಿ ಗ್ರಾಮದ ಬಸ್​ ನಿಲ್ದಾಣ

ಬಸವನು ವಿರಾಜಮಾನವಾಗಿರುವ ಮಧ್ಯಗಂಬ ಸುಮಾರು 9-10 ನೇ ಶತಮಾನದಲ್ಲಿ ನಿರ್ಮಾಣ ಆಗಿರಬಹುದು ಎಂದು ಇತಿಹಾಸ ತಜ್ಞರು ಹೇಳುತ್ತಾರೆ. ದೇವಸ್ಥಾನದ ಒಳ ಹಾಗೂ ಹೊರ ಭಾಗದಲ್ಲಿ ಒಟ್ಟು 84 ಚಪ್ಪಡಿ ಕಂಬಗಳಿದ್ದು, ಕಂಬಗಳ‌ ಮೇಲೆಯೂ ಕಟ್ಟಿಗೆಯ ಅಷ್ಟೇ ಕಂಬಗಳನ್ನು ನಿರ್ಮಿಸಲಾಗಿದೆ. ಈ ಚಪ್ಪಡಿ ಕಂಬಗಳು ಸುಮಾರು 16-17ನೇ ಶತಮಾನದಲ್ಲಿ ರಚನೆಗೊಂಡಿವೆ. ಈ ದೇವಸ್ಥಾನಕ್ಕೆ ಯಾವ ಗರ್ಭಗೃಹವಿರದಿದ್ದರೂ ಸುತ್ತಲಿನ ಪ್ರದಕ್ಷಿಣಾಪಥ ವಿಶಾಲವಾಗಿದೆ.

ಗ್ರಾಮದ ಪೂರ್ವಾಭಿಮುಖವಾಗಿ ಈಶ್ವರ ದೇವಾಲಯವಿದ್ದು, ಇಲ್ಲಿಯ ಶಿವಲಿಂಗ 10ನೇ ಶತಮಾನದಷ್ಟು ಪ್ರಾಚೀನವಾದದು. 18-19ನೇ ಶತಮಾನದಲ್ಲಿ ಪೂರ್ಣಪ್ರಮಾಣದ ದೇವಾಲಯ ನಿರ್ಮಿಸಲಾಗಿದೆ. ಪ್ರತಿವರ್ಷ ಹೋಳಿ ಹುಣ್ಣಿಮೆಯಿಂದ ಚಂದ್ರಮಾನ ಯುಗಾದಿಯ ಅಮವಾಸ್ಯೆಯ ಮಧ್ಯಾವಧಿಯಲ್ಲಿ ಬರುವ ಸೋಮವಾರ ಮತ್ತು ಮಂಗಳವಾರ 'ಬಸವೇಶ್ವರ, ಕಲಮೇಶ್ವರ ಮತ್ತು ಬ್ರಹ್ಮದೇವರ ಜಾತ್ರೆಯು' ಅತ್ಯಂತ ಅದ್ಧೂರಿಯಾಗಿ ನೆರವೇರುತ್ತದೆ.

ಬಸವನಕುಡಚಿ ಗ್ರಾಮ

ಇನ್ನು ಬಸವಣ್ಣನ ಕಿಚ್ಚು ಹಾಯುವುದು ಒಂದು ಸಂಪ್ರದಾಯವಾಗಿದ್ದು, ಹಾಗಾಗಿ ಕಿಚ್ಚಿನ ಕಟ್ಟಿಗೆ ತರಲು ಜಾತ್ರೆಯ ಸಲುವಾಗಿಯೇ ವಿಶೇಷವಾಗಿ ನಿರ್ಮಿಸಲಾದ ನಾಲ್ವತ್ತು ಬಂಡಿಗಳನ್ನು ಹೂಡಿಕೊಂಡು ಕಾಕತಿ ಗುಡ್ಡಕ್ಕೆ ಗ್ರಾಮಸ್ಥರು ಹೋಗುತ್ತಾರೆ. ಸಾಲು ಸಾಲಾಗಿ ಬಂಡಿಗಳು ತೆರಳುವುದನ್ನು ನೋಡುವುದೇ ಕಣ್ಣಿಗೆ ಹಬ್ಬ. ದೇವಸ್ಥಾನ ಚೇರ್ಮನ್ ಮಹಾವೀರ ಪಾಟೀಲ ಮತ್ತು ಗ್ರಾಮಸ್ಥರಾದ ಜಯಪಾಲ ಪಾಟೀಲ, ಅನಿಲ ಚೌಗುಲೆ ಅವರು, ಬಹಳ ಶಿಸ್ತಿನಿಂದ ಜಾತ್ರೆ ನಡೆಯುತ್ತದೆ. ಸುತ್ತ ಹತ್ತೂರಲ್ಲೂ ನಮ್ಮಷ್ಟು ವಿಜೃಂಭಣೆ ಜಾತ್ರೆ ಎಲ್ಲೂ ಆಗೋದಿಲ್ಲ. ಎಲ್ಲರೂ ಒಗ್ಗಟ್ಟಾಗಿ ಬೇಧ ಭಾವ ಇಲ್ಲದೇ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂದು ತಿಳಿಸಿದರು.

ದೇವರ ಸೇವೆಗೆ 32 ಮನೆಗಳಿಗೆ ಹಕ್ಕು.. ನಮ್ಮದು ಅಹಿಂಸಾ ಗ್ರಾಮ:ಬಸವೇಶ್ವರ, ಕಲಮೇಶ್ವರ ಮತ್ತು ಬ್ರಹ್ಮದೇವರ ದೇವಸ್ಥಾನಗಳ ಸೇವೆಗೆ ಗ್ರಾಮದ 32 ಮನೆತನಗಳಿಗೆ ಹಕ್ಕುದಾರ ಪಟ್ಟ ನೀಡಲಾಗಿದೆ. ಗ್ರಾಮದಲ್ಲಿ ಏಕೈಕ ಮುಸ್ಲಿಂ ಕುಟುಂಬಕ್ಕೂ ಇದರಲ್ಲಿ‌ ಅವಕಾಶ ನೀಡುವ‌ ಮೂಲಕ ಭಾವೈಕ್ಯತೆ ಸಂದೇಶ ಸಾರಲಾಗಿದೆ. ಆ ಪರಂಪರೆ ಮುಂದುವರಿಸಿಕೊಂಡು ಹೋಗುತ್ತಿದ್ದೇವೆ. ದಸರಾ ಮತ್ತು ಜಾತ್ರೆಯನ್ನು ಅದ್ಧೂರಿಯಾಗಿ ಆಚರಿಸುತ್ತೇವೆ. ನಮ್ಮದು ಅಹಿಂಸಾ ಗ್ರಾಮ ಎಂದು ಗ್ರಾಮದ ಹಿರಿಯ ಜೀವಿ ಬಸವಂತ ಪಾಟೀಲ ಹೇಳಿದರು.

ಮಹಡಿಯ ಮೇಲಿರುವ ಬಸವಣ್ಣನ ದೇವಾಲಯ

ಒಟ್ಟಾರೆ ಅಪರೂಪದಲ್ಲೆ ಅಪರೂಪವಾಗಿರುವ ಬಸವನಕುಡಚಿ ಶ್ರದ್ಧಾಕೇಂದ್ರವಾಗಿ ಹೊರ ಹೊಮ್ಮಿದ್ದು, ಎಲ್ಲರಿಗೂ ಅಹಿಂಸೆ ತತ್ವವನ್ನು ಬೋಧಿಸುವ ಮೂಲಕ ಎಲ್ಲರಿಗೂ ಮಾದರಿಯಾಗಿದೆ.

ಇದನ್ನೂ ಓದಿ:ಸಾಲುಮರದ ತಿಮ್ಮಕ್ಕ ಉದ್ಯಾನವನವೀಗ ಪ್ರವಾಸಿಗರಿಗೆ ಅಚ್ಚುಮೆಚ್ಚು; ಇಲ್ಲಿವೆ 4,500ಕ್ಕೂ ಅಧಿಕ ಸಸಿಗಳು!

Last Updated : Aug 17, 2023, 6:34 PM IST

ABOUT THE AUTHOR

...view details