ಸಚಿವ ಸತೀಶ್ ಜಾರಕಿಹೊಳಿ ಮಾಧ್ಯಮದವರೊಂದಿಗೆ ಮಾತನಾಡಿದರು. ಚಿಕ್ಕೋಡಿ: ಗ್ಯಾರಂಟಿ ಯೋಜನೆಗಳನ್ನು ಅರ್ಜಿ ಹಾಕಲು ಕೇಂದ್ರ ಸರ್ಕಾರ ಕಂಪ್ಯೂಟರ್ ಸರ್ವರ್ ಹ್ಯಾಕ್ ಮಾಡಿದೆ ಎಂಬ ಹೇಳಿಕೆ ನೀಡಿದ್ದೆನು. ಆದರೆ ಇದೊಂದು ರಾಜಕೀಯ ಹೇಳಿಕೆ. ಬಿಜೆಪಿಯವರು ಇಂಥ ಹೇಳಿಕೆಗಳನ್ನು ಬಹಳ ಸಲ ಹೇಳಿದ್ದುಂಟು. ಇವೆಲ್ಲ ರಾಜಕೀಯ ಎಂದು ಸರ್ವರ್ ಹ್ಯಾಕ್ ವಿಚಾರಕ್ಕೆ ಸಚಿವ ಸತೀಶ್ ಜಾರಕಿಹೊಳಿ ಇಂದು ಸ್ಪಷ್ಟೀಕರಣ ನೀಡಿದ್ದಾರೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ರಾಜ್ಯದ ಕೆಲವು ಸರ್ವರ್ ಹ್ಯಾಕ್ ಮಾಡಿದೆ ಎಂಬ ಹೇಳಿಕೆಗೆ ಬಿಜೆಪಿಯವರು ಏನೇನೋ ಮಾತನಾಡುತ್ತಿದ್ದಾರೆ. ನಾನು ರಾಜಕೀಯವಾಗಿ ಅಷ್ಟೇ ಮಾತನಾಡಿರುವೆ. ಇದು ಸ್ವಾಭಾವಿಕ, ಆದರೆ ಬಿಜೆಪಿಯವರು ಸಹ ಇಂತಹ ಬೇರೆ ಬೇರೆ ಹೇಳಿಕೆಗಳನ್ನು ನೀಡಿದ್ದಾರೆ ಎಂದರು.
ನಮ್ಮ ಹತ್ತಿರ ಬಿಜೆಪಿ ನಾಯಕರ ಹೇಳಿಕೆಗಳು ನೂರಾರು ಇವೆ. ಕೇಂದ್ರ ಸಚಿವರು ರಾಜ್ಯ ಬಿಜೆಪಿ ವರಿಷ್ಠರು ಇಂಥ ಹೇಳಿಕೆ ನೀಡಿದ್ದಾರೆ. ಅದಕ್ಕೆಲ್ಲಾ ಅವರು ಉತ್ತರ ಕೊಡುತ್ತಾರಾ?, ಅವರು ಮಾತನಾಡಿರುವುದರ ಬಗ್ಗೆ ನಾವು ಒಂದು ದೊಡ್ಡ ಲಿಸ್ಟ್ ಕೊಡ್ತೀವಿ. ಅವರು ಏನಾದರೂ ನನ್ನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವದಾದರೆ ಕೈಗೊಳ್ಳಲಿ ಎಂದು ಪ್ರತಿಕ್ರಿಯೆ ನೀಡಿದರು.
15 ಕೆಜಿ ಅಕ್ಕಿ ವಿತರಣೆ ಮಾಡಬೇಕು ಎಂದಿದ್ದ ಶಶಿಕಲಾ ಜೊಲ್ಲೆ: ಶಾಸಕಿ, ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಅವರ ಹೇಳಿಕೆ ಆಧಾರರಹಿತ. ಕಾಂಗ್ರೆಸ್ ಸರ್ಕಾರ 5+ 5 ಅಕ್ಕಿ ಕೊಡುತ್ತದೆ. 10 ಕೆ ಜಿ ಅಕ್ಕಿ ಅಷ್ಟೇ ಕೊಡುತ್ತೇವೆ. ಸ್ವಲ್ಪ ತಡವಾಗಬಹುದು, ಆದರೆ ಜನರಿಗೆ ಅಕ್ಕಿ ನೀಡುತ್ತೇವೆ ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.
ಈರಣ್ಣ ಕಡಾಡಿ ಕಳ್ಳನಿಗೆ ಒಂದು ಪಿಳ್ಳೆ ನೆಪ ವಿಚಾರ: ಅಂಥ ಹೇಳಿಕೆಗಳೆಲ್ಲ ಮುಗಿದು ಹೋದ ವಿಚಾರ. ಅಂಥವುಗಳ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಅಭಿವೃದ್ಧಿ ಕಾರ್ಯಗಳ ಬಗ್ಗೆ ಹೆಚ್ಚು ವಿಚಾರ ಮಾಡುವಂತೆ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ಅಕ್ರಮಗಳು ನಡೆದಿವೆ. ಹಿಂದಿನ ಅಧಿಕಾರಿಗಳ ವರ್ಗ ಇರುವುದರಿಂದ ನಾವು ಬೇರೆ ಸಂಸ್ಥೆಗಳಿಂದ ತನಿಖೆ ಮಾಡಿಸುತ್ತೇವೆ ಎಂದು ಸಚಿವ ಜಾರಕಿಹೊಳಿ ಹೇಳಿದ್ರು.
ಸತೀಶ್ ಜಾರಕಿಹೊಳಿಗೆ ಪ್ರತಾಪ್ ಸಿಂಹ ತಿರುಗೇಟು: ಮೈಸೂರಿನಲ್ಲಿಂದು ಮಾಧ್ಯಮದವರೊಂದಿಗೆ ಪ್ರತಾಪ್ ಸಿಂಹ ಮಾತನಾಡಿ, ರಾಜ್ಯದ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ತರುವುದನ್ನು ತಡೆಯಲು ಕೇಂದ್ರ ಸರ್ಕಾರ ಕಂಪ್ಯೂಟರ್ ಹ್ಯಾಕ್ ಮಾಡಿದೆ ಎಂಬ ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಸತೀಶ್ ಜಾರಕಿಹೊಳಿ ಅವರಿಗೆ ಓರಿಯೆಂಟೇಷನ್ ಅಗತ್ಯವಿದೆ. ಸಿದ್ದರಾಮಯ್ಯ ಸಾಹೇಬರ ಸರ್ಕಾರದಲ್ಲಿ ಎಂತೆಂಥ ಸಚಿವರು ಇದ್ದಾರೆ. ಅವರಿಗೆ ಯಾವ ಬಗ್ಗೆಯೂ ಅರಿವಿಲ್ಲದೆ. ಈ ರೀತಿ ಹೇಳಿಕೆ ಕೊಡುತ್ತಿದ್ದಾರೆ. ಇದೊಂದು ರೀತಿ ಕರ್ನಾಟಕಕ್ಕೆ ಮಾಡಿದ ಅಪಮಾನ ಎಂದು ಟೀಕಿಸಿದ್ದರು.
ಸಾರ್ವಜನಿಕವಾಗಿ ಏನು ಮಾತನಾಡಬೇಕೆಂದು ಸಚಿವರಿಗೆ ಗೊತ್ತಿಲ್ಲ. ಈ ರೀತಿ ಅಸಂಬದ್ಧ ಹೇಳಿಕೆ ಕೊಟ್ಟರೆ ಕರ್ನಾಟಕದ ಮರ್ಯಾದೆ ಹೋಗುತ್ತದೆ. ಕಂಪ್ಯೂಟರ್ ಸರ್ವರ್ ಅನ್ನು ಯಾರೂ ಹ್ಯಾಕ್ ಮಾಡಲು ಸಾಧ್ಯವಿಲ್ಲ. ಸತೀಶ್ ಜಾರಕಿಹೊಳಿ ಕರ್ನಾಟಕ ರಾಜ್ಯದ ಪ್ರತಿನಿಧಿ. ಈ ರೀತಿ ಹೇಳಿಕೆ ಕೊಟ್ಟು ಮುಜುಗರಕ್ಕೆ ಒಳಗಾಗಬಾರದು ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ:PSI Scam : ಪಿಎಸ್ಐ ನೇಮಕಾತಿ ಅಕ್ರಮದ 52 ಆರೋಪಿ ಅಭ್ಯರ್ಥಿಗಳು ಡಿಬಾರ್ : ಉಳಿದ ಅಭ್ಯರ್ಥಿಗಳಿಗೆ ಹೊಸ ಭರವಸೆ