ಪಡಿತರ ಚೀಟಿ ಪಡೆಯಲು ಜನರ ಪರದಾಟ: ಸತತ ಕೈಕೊಡುತ್ತಿರುವ ಸರ್ವರ್ - ಪಡಿತರ ಚೀಟಿ ಅವಶ್ಯಕ
ಸರ್ವರ್ ಸಿಗದ ಕಾರಣ ಪಡಿತರ ಚೀಟಿಗಾಗಿ ನೆರೆ ಪೀಡಿತರು ಮುಂಜಾನೆಯಿಂದ ಸಂಜೆಯವರೆಗೆ ಮಿನಿ ವಿಧಾನಸೌಧದ ಆಹಾರ ಇಲಾಖೆಯ ಕಾರ್ಯಾಲಯದ ಮುಂದೆ ಕುಳಿತುಕೊಳ್ಳುತ್ತಿದ್ದಾರೆ.

ಗೋಕಾಕ್:ಆಹಾರ ಇಲಾಖೆಯ ವೆಬ್‍ಸೈಟ್ ಸತತ ಕೈಕೊಡುತ್ತಿರುವುದರಿಂದ ಸಾರ್ವಜನಿಕರಿಗೆ ಅಷ್ಟೇ ಅಲ್ಲ, ವಿಶೇಷವಾಗಿ ನೆರೆ ಪೀಡಿತರಿಗೆ ಭಾರೀ ತೊಂದರೆಯಾಗಿದ್ದು ಅದಕ್ಕೆ ಪರಿಹಾರವೇ ಕಂಡು ಬರುತ್ತಿಲ್ಲ.
ನೆರೆ ಬಂದಾಗ ಉಟ್ಟ ಬಟ್ಟೆಯ ಮೇಲೆ ಮನೆಯಿಂದ ಹೊರಗೆ ಬಂದಿದ್ದು, ಮನೆಯಲ್ಲಿಯ ವಸ್ತುಗಳು ಹಾಗೂ ಕಾಗದಪತ್ರಗಳು ಹಾಳಾಗಿವೆ. ಇಂತಹ ಪರಿಸ್ಥಿತಿಯಲ್ಲಿ ನೆರೆ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಲು ಪಡಿತರ ಚೀಟಿ ಅವಶ್ಯಕವಾಗಿದ್ದು, ಪಡಿತರ ಚೀಟಿಯ ನಕಲು ಪಡೆಯಬೇಕು ಎಂದರೆ ಸರ್ವರ್ ದೊರೆಯುತ್ತಿಲ್ಲ. ಇದರಿಂದ ನೆರೆ ಪೀಡಿತರು ಮುಂಜಾನೆಯಿಂದ ಸಂಜೆಯವರೆಗೆ ಮಿನಿ ವಿಧಾನಸೌಧದ ಆಹಾರ ಇಲಾಖೆಯ ಕಾರ್ಯಾಲಯದ ಮುಂದೆ ಕುಳಿತುಕೊಳ್ಳುತ್ತಿದ್ದಾರೆ. ಆಹಾರ ಇಲಾಖೆಯವರು ಸರ್ವರ್ ಇಲ್ಲ ಎಂದು ಅವರನ್ನು ಹಿಂತಿರುಗಿ ಕಳುಹಿಸುತ್ತಿದ್ದಾರೆ. ಹೀಗಾಗಿ ನೆರೆ ಪೀಡಿತರಿಗೆ ದಿಕ್ಕು ತೋಚದಂತಾಗಿದೆ.