ಬೆಳಗಾವಿ:ರಸ್ತೆಗಳಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಿರುವ ರಸ್ತೆ ಉಬ್ಬು (ಹಂಪ್) ಗಳ ವಿಷಯದ ಗಂಭೀರ ಚರ್ಚೆ ವಿಧಾನಸಭೆಯಲ್ಲಿ ಇಂದು ನಡೆಯಿತು. ಶೂನ್ಯ ವೇಳೆಯಲ್ಲಿ ಜೆಡಿಎಸ್ ಸದಸ್ಯ ಎ.ಟಿ.ರಾಮಸ್ವಾಮಿ ಅವರು ವಿಷಯ ಪ್ರಸ್ತಾಪಿಸಿ, ರಾಜ್ಯದ ಬಹುತೇಕ ಕಡೆಗಳಲ್ಲಿ ಅವೈಜ್ಞಾನಿಕ ರಸ್ತೆ ಹಂಪ್ ಹಾಕಲಾಗಿದ್ದು, ಇದರಿಂದ ಅಪಘಾತಗಳಾಗುತ್ತಿವೆ. ಹಂಪ್ಗಳ ಬಳಿ ಸೂಚನಾ ಫಲಕ ಇರಬೇಕು. ಬಣ್ಣ ಬಳಿಯಬೇಕು ಎಂಬುದು ಸೇರಿದಂತೆ ಯಾವುದೇ ಸಂಚಾರ ನಿಯಮಗಳನ್ನು ಪಾಲಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದರ ಮಧ್ಯೆ ಪ್ರವೇಶಿಸಿ ಮಾತನಾಡಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಈ ವಿಚಾರ ಸದನದಲ್ಲಿ ಹಲವು ಬಾರಿ ಪ್ರಸ್ತಾಪವಾಗಿದ್ದು, ಸರ್ಕಾರ ಏನೂ ಮಾಡಲ್ಲ ಎಂಬ ಹತಾಶೆ ಭಾವನೆ ಇದೆ. ಅಧಿಕಾರಿಗಳಿಗೆ ಸೂಚಿಸಿದರೂ ಪ್ರಯೋಜನವಿಲ್ಲ ಎಂದರು. ಬಹುತೇಕ ಎಲ್ಲರ ಬಳಿ ವಾಹನವಿದ್ದು, ರಸ್ತೆಯಲ್ಲಿ ಬಿದ್ದಿರುವ ಗುಂಡಿ ಹಾಗೂ ಹಂಪ್‌ಗಳಿಂದ ತೊಂದರೆಯಾಗುತ್ತಿದ್ದು, ವೈಜ್ಞಾನಿಕವಾಗಿ ನಿರ್ಮಿಸಿ ಎಂಬ ಸಲಹೆ ಮಾಡಿದರು.
ಇದಕ್ಕೆ ದನಿಗೂಡಿಸಿದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹಂಪ್ ಹಾಕಬಾರದು ಎಂಬ ನಿಯಮವಿದೆ. ಶಾಲೆ, ಆಸ್ಪತ್ರೆ, ಜನಸಂದಣಿ ಇರುವ ರಾಜ್ಯ ಹಾಗೂ ಜಿಲ್ಲಾ ಹೆದ್ದಾರಿಗಳಲ್ಲಿ ವೈಜ್ಞಾನಿಕ ರಸ್ತೆ ಉಬ್ಬುಗಳನ್ನು ನಿರ್ಮಿಸಿ ಎಂದು ಒತ್ತಾಯಿಸಿದರು. ನಂತರ ಕಾಂಗ್ರೆಸ್ ಸದಸ್ಯರಾದ ಯು.ಟಿ.ಖಾದರ್, ರಾಮಲಿಂಗಾರೆಡ್ಡಿ ಕೂಡ ದನಿಗೂಡಿಸಿದರು.