ಕರ್ನಾಟಕ

karnataka

ETV Bharat / state

ಕಳ್ಳರ ಕಾಟಕ್ಕೆ ಬೆಚ್ಚಿದ್ದ ಬೆಳಗಾವಿ: ದೊಣ್ಣೆ ಹಿಡಿದು ರಾತ್ರಿ ಗಸ್ತು ತಿರುಗುತ್ತಿರುವ ಜನ

ಬೆಳಗಾವಿ ನಗರದ ವಿವಿಧೆಡೆ ಕಳ್ಳತನ ಪ್ರಕರಣಗಳು ವರದಿಯಾಗಿವೆ. ಮುಸುಕುಧಾರಿ ಕಳ್ಳರು ರಾತ್ರಿ ಹೊತ್ತು ಓಡಾಡುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

Belgaum people are patrolling
ದೊಣ್ಣೆ ಹಿಡಿದು ರಾತ್ರಿ ಹೊತ್ತು ಗಸ್ತು ತಿರುಗುತ್ತಿರುವ ಬೆಳಗಾವಿ ಜನ

By ETV Bharat Karnataka Team

Published : Dec 21, 2023, 10:06 PM IST

Updated : Dec 21, 2023, 10:13 PM IST

ಬೆಳಗಾವಿ:ನಗರದಲ್ಲಿ ದಿನದಿನಕ್ಕೆ ಕಳ್ಳರ ಹಾವಳಿ ಹೆಚ್ಚಾಗುತ್ತಿದೆ. ಇದರಿಂದ ರೊಚ್ಚಿಗೆದ್ದಿರುವ ಜನರು ತಾವೇ ಸ್ವತಃ ಕಟ್ಟಿಗೆ, ದೊಣ್ಣೆ ಹಿಡಿದು ಕಳ್ಳರನ್ನು ಹಿಮ್ಮೆಟ್ಟಿಸಲು ಮುಂದಾಗಿದ್ದಾರೆ. ಅಲ್ಲದೇ ಕಳ್ಳರನ್ನು ಪತ್ತೆ ಹಚ್ಚಲು ವಿಫಲರಾಗಿರುವ ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ವಡಗಾವಿ ಪ್ರದೇಶದ ಆನಂದನಗರ, ಕೇಶವನಗರ, ಸಾಯಿ ಕಾಲೊನಿ ಸೇರಿದಂತೆ ವಿವಿಧೆಡೆ ಕಳ್ಳರ ಕಾಟಕ್ಕೆ ಜನ ಬೇಸತ್ತು ಹೋಗಿದ್ದಾರೆ. ಮಧ್ಯರಾತ್ರಿ ಆನಂದನಗರ 3ನೇ ಕ್ರಾಸ್‌ನ ಮನೆಯೊಂದರ ಯುವಕನೊಬ್ಬನಿಗೆ ಕತ್ತಿಯಿಂದ ಇರಿದು ಕಳ್ಳತನ ಮಾಡಿರುವ ಘಟನೆ ಜನರ ಆತಂಕಕ್ಕೆ ಕಾರಣವಾಗಿದೆ.

ಡಿ.13ರಂದು ಆನಂದನಗರ 2 ಮತ್ತು 3ನೇ ಕ್ರಾಸ್, ಸಾಯಿ ಕಾಲೊನಿಯ 4 ಮನೆಗಳಿಗೆ ನುಗ್ಗಿದ ಕಳ್ಳರು ಲಕ್ಷಾಂತರ ನಗದು ದೋಚಿ ಪರಾರಿಯಾಗಿದ್ದರು. ಡಿ.14 ರಂದು ಕೇಶವನಗರದ ಎರಡು ಮನೆಗಳಿಗೆ ನುಗ್ಗಿ ಬೆಲೆ ಬಾಳುವ ವಸ್ತುಗಳನ್ನು ಕಳ್ಳತನ ಮಾಡಲಾಗಿದೆ. ಡಿ.15ರಂದು ಸಾಯಿ ಕಾಲೊನಿ ಪಕ್ಕದ ಅನಗೋಳ ಕನಕದಾಸ ನಗರದಲ್ಲಿ 5 ಮನೆಗಳನ್ನು ಲೂಟಿ ಮಾಡಲಾಗಿದೆ. ಮುಸುಕುಧಾರಿ ಕಳ್ಳರು ರಾತ್ರಿ ಹೊತ್ತು ಓಡಾಡುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

ಆನಂದನಗರ 3ನೇ ಕ್ರಾಸ್‌ನಲ್ಲಿರುವ ಪ್ರಶಾಂತ ಭಾತ್ಕಾಂಡೆ ಅವರ ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನಿಸಲಾಗಿದೆ. ಈ ಎಲ್ಲ ಘಟನೆಗಳಿಂದ ಭಯಭೀತರಾಗಿರುವ ನಿವಾಸಿಗಳು ಪೋಲಿಸರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರನ್ನು ನಂಬಿಕೊಂಡು ಕುಳಿತರೆ ನಮ್ಮ ಮನೆಗಳಲ್ಲೂ ಕಳ್ಳತನ ಆಗೋದು ಗ್ಯಾರಂಟಿ. ನಮ್ಮ ಮನೆಗಳನ್ನು ನಾವೇ ರಕ್ಷಿಸಿಕೊಳ್ಳೋಣ ಎಂದು ಆನಂದ ನಗರದ ಯುವಕರು ಹಾಗೂ ನಿವಾಸಿಗಳು ರಾತ್ರಿ ಗಸ್ತು ತಿರುಗುತ್ತಿದ್ದಾರೆ.

ಹತ್ತು ದಿನಗಳಿಂದ ಕಳ್ಳತನ: 'ಈಟಿವಿ ಭಾರತ'ದೊಂದಿಗೆ ಸ್ಥಳೀಯ ನಿವಾಸಿ ಮಹೇಶ ಹಿರೋಜಿ ಮಾತನಾಡಿ, ಕಳೆದ ಹತ್ತು ದಿನಗಳಿಂದ ನಮ್ಮ ಏರಿಯಾದಲ್ಲಿ ಕಳ್ಳತನ ನಡೆಯುತ್ತಿದೆ. ಮಧ್ಯರಾತ್ರಿ 3.30ರ ಸುಮಾರಿಗೆ ಮುಸುಕು ಹಾಕಿಕೊಂಡು ಕೈಯಲ್ಲಿ ಬ್ಯಾಟರಿ, ಕಬ್ಬಿಣದ ಸಳಾಕೆ, ಶಸ್ತ್ರ ಹಿಡಿದುಕೊಂಡು ಮನೆಗೆ ನುಗ್ಗಿ ಕಳ್ಳತನ ಮಾಡುತ್ತಿದ್ದಾರೆ. ಇದೀಗ ನಾವೇ ತಂಡವಾಗಿ ನಮ್ಮ ಏರಿಯಾದಲ್ಲಿ ಗಸ್ತು ತಿರುಗುತ್ತಿದ್ದೇವೆ. ನಿನ್ನೆ ಬೆಳಗಾವಿ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳು ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ. ಮೂರು ದಿನಗಳಲ್ಲಿ ಕಳ್ಳರನ್ನು ಬಂಧಿಸುವಂತೆ ಭರವಸೆ ನೀಡಿದ್ದು, ಶೀಘ್ರ ಆರೋಪಿಗಳನ್ನು ಪತ್ತೆ ಹಚ್ಚಿದರೆ ನಾವು ನೆಮ್ಮದಿಯಿಂದ ಬದುಕಬಹುದು ಎಂದು ಹೇಳಿದರು.

ಇದನ್ನೂಓದಿ:ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಪ್ರಕರಣ: ಮೂವರು ಆರೋಪಿಗಳು ಸಿಐಡಿ ವಶಕ್ಕೆ

Last Updated : Dec 21, 2023, 10:13 PM IST

ABOUT THE AUTHOR

...view details