ಬೆಂಗಳೂರು:ಕೊರೊನಾ ಕಾರಣಕ್ಕೆ ಶೈಕ್ಷಣಿಕ ತರಗತಿಗಳ ಮೇಲೆ ಹೊಡೆತ ಬಿದ್ದಿದ್ದು, ಇದೀಗ ದ್ವಿತೀಯ ಪಿಯುಸಿ ಶೈಕ್ಷಣಿಕ ವರ್ಷವು ಜು.15ರಿಂದ ಆರಂಭವಾಗಲಿದ್ದು, ವಿದ್ಯಾರ್ಥಿಗಳಿಗೆ ಪಾಠಗಳನ್ನು ಆರಂಭಿಸಲಾಗುತ್ತಿದೆ. ಭೌತಿಕ ತರಗತಿಗಳು ಆರಂಭವಾಗುವ ಬಗ್ಗೆ ಇನ್ನೂ ನಿರ್ಧಾರವಾಗದ ಕಾರಣ, ವಿದ್ಯಾರ್ಥಿಗಳಿಗೆ ಪೂರ್ಣ ಪ್ರಮಾಣದಲ್ಲಿ ಪಾಠಗಳನ್ನು ಆನ್‌ಲೈನ್‌ನಲ್ಲಿ ಆರಂಭಿಸಬೇಕಾಗಿದೆ.
ಕಳೆದ ಸಾಲಿನಲ್ಲಿ ಫ್ರೀ ರೆಕಾರ್ಡಿಂಗ್ ಯೂಟ್ಯೂಬ್ ತರಗತಿಗಳನ್ನು ನಡೆಸಿದ ಕಾರಣ ಪ್ರತಿದಿನ ಲಿಂಕ್‌ಗಳನ್ನು ಕಳುಹಿಸಲಾಗುತ್ತಿತ್ತು. ಆ ಲಿಂಕ್‌ಗಳನ್ನು ವಿದ್ಯಾರ್ಥಿಗಳಿಗೆ ಪ್ರತಿ ಉಪನ್ಯಾಸಕರು ತಾವು ರಚಿಸಿಕೊಂಡ ವಿಷಯವಾರು ವಾಟ್ಸ್ ಆಪ್ ಗ್ರೂಪ್‌ಗೆ ಕಳುಹಿಸಲಾಗುತ್ತಿತ್ತು. ಆದರೆ ಈ ಬಾರಿ ಪ್ರತಿ ಕಾಲೇಜಿನ ಉಪನ್ಯಾಸಕರೇ, ಅವರ ವಿದ್ಯಾರ್ಥಿಗಳಿಗೆ MS Team, Google Meet, Zoom ಅಥವಾ Jio ಮೀಟ್ ಆ್ಯಪ್‌ಗಳನ್ನು ಉಪಯೋಗಿಸಿಕೊಂಡು ಪಾಠಗಳನ್ನು ಆರಂಭಿಸಲು ತಿಳಿಸಿದೆ. ಈ ಸಂಬಂಧ ಎಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು ಸಾಮಾನ್ಯ ವರ್ಷಗಳಲ್ಲಿರುವಂತೆ ಎಲ್ಲಾ ತರಗತಿಗಳಿಗೆ ಅನ್ವಯವಾಗುವಂತೆ ವೇಳಾಪಟ್ಟಿಯನ್ನು ರಚಿಸಿ ಆದೇಶಿಸಿದೆ.
ವೇಳಾಪಟ್ಟಿ ಹೀಗಿದೆ:
- ಬೆಳಗ್ಗೆ 10.00 ರಿಂದ 11.00 - ಮೊದಲ ಅವಧಿ
- ಬೆಳಗ್ಗೆ 11.00 ರಿಂದ 12.00 ಎರಡನೇ ಅವಧಿ
- 12.00 ರಿಂದ 12:30 – ವಿರಾಮ
- 12.30 ರಿಂದ 01:30 – ಮೂರನೇ ಅವಧಿ
- 01.30 ರಿಂದ 02.30 - ನಾಲ್ಕನೇ ಅವಧಿ
ವೇಳಾಪಟ್ಟಿಗನುಗುಣವಾಗಿ ತರಗತಿಗಳನ್ನು ಸೂಕ್ತ ಲಿಂಕ್‌ಗಳನ್ನು ಜನರೇಟ್ (Generate) ಮಾಡಿಕೊಂಡು ವಿದ್ಯಾರ್ಥಿಗಳಿಗೆ ಕಳುಹಿಸಿ ತರಗತಿ ನಡೆಸಲು ತಿಳಿಸಿದೆ. ಈ ಸಂಬಂಧ ಎಲ್ಲಾ ಉಪನ್ಯಾಸಕರು ಕಡ್ಡಾಯವಾಗಿ ಪಾಠಗಳನ್ನು ನಡೆಸಿ, ಹಾಜರಾತಿಯನ್ನು ತೆಗೆದುಕೊಂಡು, ಪ್ರಾಂಶುಪಾಲರಿಗೆ ಪ್ರತಿದಿನದ ಹಾಜರಾತಿ ಮಾಹಿತಿಯನ್ನು ಕಳುಹಿಸಬೇಕು.