ಬೆಳಗಾವಿ/ಹುಬ್ಬಳ್ಳಿ :ದೇಶದ ವಿವಿಧೆಡೆ ಪಿಎಫ್ಐ ಮುಖಂಡರ ಮನೆ ಮೇಲೆ ಎನ್ಐಎ ದಾಳಿ ನಡೆಸಿದ ಹಿನ್ನೆಲೆ ಬೆಳಗಾವಿ ಮತ್ತು ಹುಬ್ಬಳ್ಳಿಯಲ್ಲಿ ಪಿಎಫ್ಐ, ಎಸ್ಡಿಪಿಐ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ನಗರದ ಹೊರವಲಯದಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಸಿದ ಪಿಎಫ್ಐ ಕಾರ್ಯಕರ್ತರು ಬಿಜೆಪಿ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ಈ ವೇಳೆ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಘೋಷಣೆ ಕೂಗಿದರು. ಆರ್‌ಎಸ್ಎಸ್ ಮುರ್ದಾಬಾದ್, ಪಿಎಫ್ಐ ಜಿಂದಾಬಾದ್ ಎಂದು ಘೋಷಣೆ ಕೂಗಿದರು. ಇನ್ನು ರಾಷ್ಟ್ರೀಯ ಹೆದ್ದಾರಿ 4ರ ಪುಣೆ - ಬೆಂಗಳೂರು ರಸ್ತೆ ಸಂಚಾರ ಸುಮಾರು 15 ನಿಮಿಷಗಳ ಕಾಲ ರಸ್ತೆ ಸ್ಥಗಿತಗೊಂಡಿತ್ತು.
10ಕ್ಕೂ ಹೆಚ್ಚು ಪಿಎಫ್ಐ ಕಾರ್ಯಕರ್ತರು ವಶಕ್ಕೆ: ಪಿಎಫ್ಐ ಬೆಳಗಾವಿ ಜಿಲ್ಲಾಧ್ಯಕ್ಷ ನವೀದ್ ಕಟಗಿ ಸಹಿತ 10ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದು ಕಾಕತಿ ಠಾಣೆಗೆ ಕರೆದೊಯ್ದದರು. ಈ ವೇಳೆ, ಮಾತನಾಡಿದ ಪಿಎಫ್ಐ ಬೆಳಗಾವಿ ಜಿಲ್ಲಾಧ್ಯಕ್ಷ ನವೀದ್ ಕಟಗಿ, ಎನ್ಐಎ ನಮ್ಮ ಜಿಲ್ಲಾ ಮುಖಂಡರು, ರಾಜ್ಯ ಮುಖಂಡರ ಮನೆ ಮೇಲೆ ದಾಳಿ ಮಾಡಿದೆ. ಅಮಿತ್ ಶಾ ಸಲಹೆ ಮೇರೆಗೆ ರೇಡ್ ಮಾಡಿದ್ದಾರೆ, ನಮ್ಮ ಬಗ್ಗೆ ಯಾವುದೇ ದಾಖಲೆ ಇಲ್ಲದೇ ಸುಳ್ಳು ಆರೋಪ ಮಾಡ್ತಿದ್ದಾರೆ .ಹೀಗಾಗಿ ಇಂದು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದೇವೆ ಎಂದು ಹೇಳಿದರು.
ವಾಣಿಜ್ಯನಗರಿಯಲ್ಲಿ ಎಸ್ ಡಿಪಿಐ ಪ್ರತಿಭಟನೆ : ಪೊಲೀಸರಿಂದ ಲಘು ಲಾಠಿ ಪ್ರಹಾರ:ಎನ್ ಐಎ ದಾಳಿ ವಿಚಾರವಾಗಿ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲೂ ಎಸ್ ಡಿಪಿಐ ಹಾಗೂ ಪಿಎಫ್ ಐ ಕಾರ್ಯಕರ್ತರು ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ನಗರದ ಕೌಲ್ ಪೇಟೆಯಲ್ಲಿ ಪ್ರತಿಭಟನೆ ನಡೆಸಿದ್ದು, ಪುಣೆ ಬೆಂಗಳೂರು ಮುಖ್ಯ ರಸ್ತೆ ಬಂದ್ ಮಾಡಿ ಪ್ರತಿಭಟನೆಗೆ ಮುಂದಾದ ಕಾರ್ಯಕರ್ತರ ಮೇಲೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.