ಅಥಣಿ: ಕಳೆದ ಕೆಲವು ದಿನಗಳಿಂದ ತಾಲೂಕಿನಾದ್ಯಂತ ಮಳೆ ಸುರಿಯುತ್ತಿದ್ದು ಝುಂಜರವಾಡ ಗ್ರಾಮದ ಗೌಡರ ತೋಟದ ಅಂಗನವಾಡಿ ಮೇಲ್ಛಾವಣಿ ಸೋರುತ್ತಿದೆ. ಹೀಗಾಗಿ, ಮಕ್ಕಳಿಗೆ ಕುಳಿತುಕೊಳ್ಳಲು ಸ್ಥಳಾವಕಾಶದ ಕೊರತೆ ಉಂಟಾಗಿದೆ.
ಶಾಲೆಯ ಆಹಾರ ಸಾಮಗ್ರಿಗಳು ಮಳೆ ನೀರಿನಿಂದ ನೆನೆಯುತ್ತಿವೆ. ಶಾಲಾ ಸಿಬ್ಬಂದಿ ಅವುಗಳನ್ನು ರಕ್ಷಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ಈ ಬಗ್ಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಶಾಲಾ ಶಿಕ್ಷಕಿಯೊಬ್ಬರು ತಿಳಿಸಿದರು.
ಸಂಪೂರ್ಣವಾಗಿ ಸೋರುತ್ತಿರುವ ಶಾಲಾ ಕಟ್ಟಡದ ಮೇಲ್ಛಾವಣಿಯಿಂದ ಅವಘಡ ಸಂಭವಿಸುವ ಆತಂಕದಿಂದ ಕೆಲವು ಪಾಲಕರು ಮಕ್ಕಳನ್ನು ಶಾಲೆಗೆ ಕಳಿಸುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಈ ವಿಚಾರವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಗಮನಕ್ಕೆ ತರಲಾಗಿದೆ. ಆದರೆ, ಅವರು ಪಂಚಾಯತಿ ಅಧಿಕಾರಿಗಳ ಮೇಲೆ ಜವಾಬ್ದಾರಿ ಹೊರಿಸಿ ಜಾರಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಶಾಲೆ ಹೊರಗಡೆ ಪಾಠ:ರಾಮದುರ್ಗ ತಾಲೂಕಿನ ಸೊಪ್ಪಡ್ಲ್ ಗ್ರಾಮದಲ್ಲಿ ಬಿರುಕು ಬಿಟ್ಟಿರುವ ಗೋಡೆಗಳು, ಸೋರುತ್ತಿರುವ ಶಾಲಾ ಕೊಠಡಿಯ ಮೇಲ್ಛಾವಣಿಯಿಂದಾಗಿ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲೆಯ ಹೊರಗಡೆ ಇರುವ ಕಟ್ಟೆಯ ಮೇಲೆ ಕುಳಿತು ಪಾಠ ಕೇಳುತ್ತಿದ್ದಾರೆ. ಶಿಕ್ಷಣ ಇಲಾಖೆಯ ವಿರುದ್ಧ ಪೋಷಕರು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ:ಆರ್‌ಎಸ್‌ಎಸ್ ಅನ್ನು ಪಿಎಫ್‌ಐಗೆ ಹೋಲಿಸಿದ ಬಿಹಾರ ಪೊಲೀಸ್ ಅಧಿಕಾರಿ; ಬಿಜೆಪಿ ಆಕ್ರೋಶ