ಬೆಳಗಾವಿ/ಬೆಂಗಳೂರು: ಶೇ.50ರ ಮೀಸಲಾತಿ ನಿಯಮವಿದ್ದರೂ ಮೀಸಲಾತಿ ಹೆಚ್ಚಳ ಕುರಿತು ಸ್ಪಷ್ಟ ನಿಲುವು ತಳೆಯದೆ ಕೇವಲ ರಾಜಕೀಯ ಲಾಭಕ್ಕಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಿಸಿದ್ದು, ಈ ಬಗ್ಗೆ ಸತ್ಯಾಸತ್ಯತೆಯನ್ನು ಜನತೆಯ ಮುಂದಿಡುವಂತೆ ನಿಯಮ 59ರ ಅಡಿ ಚರ್ಚೆಗೆ ಅವಕಾಶ ಕಲ್ಪಿಸುವಂತೆ ಕಾಂಗ್ರೆಸ್ ಮಂಡಿಸಿದ್ದ ನಿಲುವಳಿ ಸೂಚನೆಯನ್ನು ಸಭಾಪತಿ ಬಸವರಾಜ ಹೊರಟ್ಟಿ ಪರಿಗಣಿಸಲು ನಿರಾಕರಿಸಿದ್ದು, ಎಸ್ಸಿ ಎಸ್ಟಿ ಮೀಸಲಾತಿ ಕುರಿತ ವಿಧೇಯಕ ಬಂದಾಗ ಸುದೀರ್ಘ ಚರ್ಚೆಗೆ ಅವಕಾಶ ಕಲ್ಪಿಸುವುದಾಗಿ ರೂಲಿಂಗ್ ನೀಡಿದರು.
ವಿಧಾನ ಪರಿಷತ್ನಲ್ಲಿ ನಿಲುವಳಿ ಸೂಚನೆ ಮಂಡಿಸಿದ ಪ್ರತಿಪಕ್ಷ ನಾಯಕ ಬಿಕೆ ಹರಿಪ್ರಸಾದ್, ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳ ವಿಚಾರದಲ್ಲಿ ಈಗಾಗಲೇ ಸುಗ್ರೀವಾಜ್ಞೆ ಹೊರಡಿಸಿದೆ. ಮೀಸಲಾತಿ ಹೆಚ್ಚಳ ವಿಚಾರದಲ್ಲಿ ಈ ಸಮುದಾಯವನ್ನು ತಪ್ಪುದಾರಿಗೆ ಎಳೆಯುತ್ತಿದೆ. ಶೇ.50ರ ಮೀಸಲಾತಿ ಮಿತಿ ಮೀರಬಾರದು ಎಂದಿದ್ದರೂ ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಿಸಿದ್ದು ಕಾನೂನು ತೊಡಕು ಎದುರಾಗಲಿದೆ. ಇತರ ಸಮುದಾಯಗಳೂ ಮೀಸಲಾತಿ ಹೋರಾಟ ನಡೆಸುತ್ತಿವೆ.
ಇಂತಹ ಸಂದರ್ಭದಲ್ಲಿ ಎಸ್ಸಿ ಎಷ್ಟಿ ಮೀಸಲಾತಿ ಹಚ್ಚಳ ಸ್ವಾಗತಾರ್ಹವಾದರೂ ಸ್ಪಷ್ಟತೆ ಇಲ್ಲದೆ ಕೇವಲ ಆ ಸಮುದಾಯಗಳ ಮತಕ್ಕಾಗಿ ಇದನ್ನು ಮಾಡಿದೆ ಹಾಗಾಗಿ ಇದನ್ನು ಜನರಿಗೆ ತಿಳಿಸಲು ನಿಯಮ 59ರ ಅಡಿ ನಿಲುವಳಿ ಸೂಚನೆ ಮಂಡಿಸುತ್ತಿದ್ದು ಚರ್ಚೆಗೆ ಅವಕಾಶ ನೀಡುವಂತೆ ಸಭಾಪತಿಗಳಿಗೆ ಮನವಿ ಮಾಡಿದರು. ಕಾಂಗ್ರೆಸ್ ಮಂಡಿಸಿದ ನಿಲುವಳಿ ಸೂಚನೆಗೆ ಆಕ್ಷೇಪ ವ್ಯಕ್ತಪಡಿಸಿ ಮಾತನಾಡಿದ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ, ನ್ಯಾ.ನಾಗಮೋಹನ್ ದಾಸ್ ವರದಿಯಂತೆ ಮೀಸಲಾತಿ ಹೆಚ್ಚಿಸಿದ್ದೇವೆ ಎಂದರು.
ರಾಜಕಾರಣ ಏನೇ ಇರಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಿಸಲಾಗಿದೆ. ಸದನದಲ್ಲಿ ಬಿಲ್ ಮಂಡಿಸಲಿದ್ದೇವೆ. ಟೀಕೆ ಟಿಪ್ಪಣಿ ಏನೇ ಇದ್ದರೂ ಸಮಾಜದ ತಳಮಟ್ಟದ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸುವ ನಿರ್ಣಯಕ್ಕೆ ಬೆಂಬಲ ಕೊಡಬೇಕು, ಈಗಾಗಲೇ ಕೆಳಮನೆಯಲ್ಲಿ ಬಿಲ್ ಮಂಡನೆಯಾಗಿದೆ. ಇಲ್ಲಿಯೂ ಮಂಡನೆ ಮಾಡಲಿದ್ದೇವೆ ಹಾಗಾಗಿ ಈ ನಿಲುವಳಿ ಸೂಚನೆ ಪರಿಗಣಿಸುವುದು ಬೇಡ ಬಿಲ್ ಮೇಲೆ ಚರ್ಚೆ ನಡೆಸೋಣ, ಸರ್ವಾನುಮತದ ನಿರ್ಣಯ ಕೇಂದ್ರಕ್ಕೆ ಕಳಿಸೋಣ ಎಂದರು.
ಕೋಟಾ ಶ್ರೀನಿವಾಸ ಪೂಜಾರಿ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ ಹರಿಪ್ರಸಾದ್, ಮೀಸಲಾತಿಗೆ ವಿರೋಧವಿಲ್ಲ ಆದರೆ ಸುಪ್ರೀಂ ಕೋರ್ಟ್ನ ಸಾಂವಿಧಾನಿಕ ಪೀಠದಲ್ಲಿ ಮೀಸಲಾತಿ ಹೆಚ್ಚಳ ವಿಚಾರದಲ್ಲಿ ಏನಾಗಿದೆ ಎಂದು ಎಲ್ಲರಿಗೂ ಗೊತ್ತಿದೆ. ನಮ್ಮ ಸರ್ಕಾರ ತಮಿಳುನಾಡಿನದ್ದನ್ನು ಉಲ್ಲೇಖಿಸಿದೆ ಅದರೆ ತಮಿಳುನಾಡಿನ ವಿಧಾನಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ಕೈಗೊಂಡು ಸಂವಿಧಾನದ 9ನೇ ಪರಿಚ್ಛೇದಕ್ಕೆ ಸೇರಿಸಬೇಕು ಎಂದು ಕೇಂದ್ರಕ್ಕೆ ಕಳಿಸಿದೆ. ಆದರೆ ಅದು 30 ವರ್ಷದಿಂದ ಕೋರ್ಟ್ನಲ್ಲಿದೆ. ಈಗಲೂ ನಾವು ಇಲ್ಲಿ ಬಿಲ್ ಪಾಸ್ ಮಾಡಿಕೊಟ್ಟರೆ ವಿವಿಧ ಸಮಿತಿ, ಸಂಸತ್ತು ನಂತರ ರಾಷ್ಟ್ರಪತಿ ಬಳಿಗೆ ಹೋಗಬೇಕು. ಕೇಂದ್ರದ ಸಚಿವರೇ ಶೇ.50 ರ ಮೀಸಲಾತಿ ಮಿತಿ ಹೆಚ್ಚಳಕ್ಕೆ ಅವಕಾಶ ನೀಡಲ್ಲ ಎನ್ನುತ್ತಿದ್ದಾರೆ.