ಕರ್ನಾಟಕ

karnataka

ETV Bharat / state

ಸುವರ್ಣಸೌಧದಲ್ಲಿ ಸಾವರ್ಕರ್ ಫೋಟೋ: ಅಧಿವೇಶನ ಆರಂಭಕ್ಕೂ ಮುನ್ನ ಸಿದ್ದರಾಮಯ್ಯ ನೇತೃತ್ವದಲ್ಲಿ ಪ್ರತಿಭಟನೆ - ಸುವರ್ಣಸೌಧ ಅಸೆಂಬ್ಲಿ ಹಾಲ್

ಸುವರ್ಣಸೌಧ ಅಸೆಂಬ್ಲಿ ಹಾಲ್​ನಲ್ಲಿ ಸಾವರ್ಕರ್​ ಫೋಟೋ ಹಾಕಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್​ ನಾಯಕರು ಪ್ರತಿಭಟನೆ ನಡೆಸಿದರು.

Congress leaders protest in Suvarna Soudha of Belgavi
ಸುವರ್ಣ ವಿಧಾನಸೌಧದಲ್ಲಿ ಕಾಂಗ್ರೆಸ್​ ನಾಯಕರಿಂದ ಪ್ರತಿಭಟನೆ

By

Published : Dec 19, 2022, 11:09 AM IST

Updated : Dec 19, 2022, 1:44 PM IST

ಬೆಂಗಳೂರು/ಬೆಳಗಾವಿ: ಸುವರ್ಣಸೌಧ ಅಸೆಂಬ್ಲಿ ಹಾಲ್​ನಲ್ಲಿ ಸಾವರ್ಕರ್ ಫೋಟೋ ಹಾಕಿದ್ದನ್ನು ಖಂಡಿಸಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಸುವರ್ಣಸೌಧದದಲ್ಲಿ ಇಂದು ಬೆಳಿಗ್ಗೆ ಪ್ರತಿಭಟನೆ ನಡೆಸಿದರು.

ಬೆಳಗಾವಿ ಅಧಿವೇಶನದ‌ ಮೊದಲ‌ ದಿನವೇ ಕಾಂಗ್ರೆಸ್​ ನಾಯಕರು ಸಾವರ್ಕರ್ ಫೋಟೋ ವಿಚಾರವಾಗಿ ಪ್ರತಿಭಟನೆಗೆ ಇಳಿದರು. ಸುರ್ವರ್ಣಸೌಧದ ವಿಐಪಿ ಗೇಟ್ ಬಳಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಕೈ ನಾಯಕರು ಪ್ರತಿಭಟನೆ ನಡೆಸಿದರು. ಸ್ಪೀಕರ್ ಕಾಗೇರಿ ವಿರುದ್ಧ ಆಕ್ರೋಶ ಹಾಕಿದರು. ಅಸೆಂಬ್ಲಿ ಹಾಲ್​ನಲ್ಲಿ ಸಾವರ್ಕರ್ ಫೋಟೋ ಹಾಕಿರುವುದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನಸಭೆ ಪ್ರತಿಪಕ್ಷದ ಉಪನಾಯಕ ಯು.ಟಿ ಖಾದರ್, ಹಿರಿಯ ಕಾಂಗ್ರೆಸ್ ನಾಯಕ ಹೆಚ್.ಕೆ.ಪಾಟೀಲ್, ಸಲೀಂ ಅಹ್ಮದ್, ಸತೀಶ್ ಜಾರಕಿಹೊಳಿ ಸೇರಿದಂತೆ ಕೈ ಮುಖಂಡರು ಭಾಗಿಯಾದ್ದರು. ಪ್ರತಿಭಟನಾನಿರತ ಕಾಂಗ್ರೆಸ್ ನಾಯಕರು ತಮ್ಮ ಕೈಗಳಲ್ಲಿ ಕುವೆಂಪು, ಡಾ.ಬಿ.ಆರ್.ಅಂಬೇಡ್ಕರ್, ಶಿಶುನಾಳ ಶರೀಫ, ಮಹರ್ಷಿ ವಾಲ್ಮೀಕಿ, ಕನಕದಾಸ, ನಾರಾಯಣಗುರು, ಬಸವಣ್ಣ, ನೆಹರೂ ಸೇರಿ ಹಲವು ಮಹನೀಯರ ಫೋಟೋಗಳ ಪೋಸ್ಟರ್ ಇಟ್ಟುಕೊಂಡು ಪ್ರತಿಭಟನೆ ನಡೆಸಿದರು. ಇಂಥ ಮಹನೀಯರ ಫೋಟೋಗಳನ್ನು ಅಸೆಂಬ್ಲಿ ಹಾಲ್​​ನಲ್ಲಿ ಅಳವಡಿಸುವಂತೆ ಆಗ್ರಹಿಸಿದರು.

ಸುವರ್ಣ ವಿಧಾನಸೌಧದಲ್ಲಿ ಕಾಂಗ್ರೆಸ್​ ನಾಯಕರಿಂದ ಪ್ರತಿಭಟನೆ

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ, ನಾವೆಲ್ಲರೂ ಹುಟ್ಟುತ್ತಲೇ ಹಿಂದೂಗಳು, ಸಾಯುವಾಗಲೂ ಹಿಂದೂಗಳೇ, ಹಿಂದೂ ಆಚರಣೆಗಳನ್ನೇ ಪಾಲಿಸುತ್ತ ಬಂದಿದ್ದೇವೆ. ನಮ್ಮಲ್ಲಿ ಹಿಂದೂ ಭಾವ, ಭಕ್ತಿ, ಆಚಾರ, ವಿಚಾರ, ಅಡಗಿದೆ. ಆದರೆ ಬಿಜೆಪಿಯವರು ನಾಟಕದ ಹಿಂದುತ್ವ ತೋರಿಸುತ್ತಾರೆ. ಈಗ ನಾವು ಸರ್ಕಾರಕ್ಕೆ ಆಗ್ರಹಿಸುತ್ತಿರುವುದೇನೆಂದರೆ, ಈ ಸುವರ್ಣಸೌಧದಲ್ಲಿ ದೇಶದ ಮೊದಲ ಪ್ರಧಾನಿ, ಆಧುನಿಕ ಭಾರತದ ನಿರ್ಮಾತೃ ಪಂಡಿತ್ ಜವಹಾರಲಾಲ್ ನೆಹರೂ, ಶಿಶುನಾಳ ಷರೀಫರು, ವಿಶ್ವಗುರು ಬಸವಣ್ಣ, ನಾರಾಯಣಗುರು, ಕನಕದಾಸರು, ಅಂಬೇಡ್ಕರ್, ಬಾಬು ಜಗಜೀವನ ರಾಮ್, ಸರ್ದಾರ್ ವಲ್ಲಭಬಾಯ್ ಪಟೇಲ್, ಕುವೆಂಪು ಹಾಗೂ ಈ ಭಾಗದ ಪ್ರಮುಖ ವ್ಯಕ್ತಿಗಳ ಭಾವಚಿತ್ರಗಳನ್ನು ಹಾಕಬೇಕು ಎಂದು ಒತ್ತಾಯಿಸಿದರು.

ನನಗೆ ಸ್ಪೀಕರ್ ಅವರ ಕಚೇರಿಯಿಂದ ದೂರವಾಣಿ ಕರೆ ಮಾಡಿ ಇಂದು ಬೆಳಗ್ಗೆ 10 ಗಂಟೆಗೆ, ಮಹಾತ್ಮಗಾಂಧಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರ ಅನಾವರಣ ಕಾರ್ಯಕ್ರಮವಿದೆ, ನೀವು ಆಗಮಿಸಬೇಕು ಎಂದು ಆಹ್ವಾನಿಸಿದ್ದರು. ನಾವು ಬಹಳ ಸಂತೋಷದಿಂದ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ತಿಳಿಸಿದ್ದೆವು. ಆದರೆ ಇಲ್ಲಿ ಬಂದ ನಂತರ ಮಾಧ್ಯಮಗಳ ಮೂಲಕ ಸಾರ್ವಕರ್ ಫೋಟೋ ಕೂಡ ಹಾಕಲಾಗುತ್ತಿದೆ ಎಂದು ತಿಳಿಯಿತು. ಸಾರ್ವಕರ್ ಅವರಿಗೂ ರಾಜ್ಯಕ್ಕೂ ಯಾವುದೇ ಸಂಬಂಧವಿಲ್ಲ. ಇದು ವಿವಾದಾತ್ಮಕ ವಿಚಾರ ಎಂದು ಹೇಳಿದರು.

ಈ ಬಗ್ಗೆ ನಾವು ಬೇರೆ ಚರ್ಚೆ ಮಾಡುತ್ತೇವೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಉತ್ತರ ಕರ್ನಾಟಕವನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ. ಇಲ್ಲಿ ಜ್ವಲಂತ ಸಮಸ್ಯೆಗಳಿವೆ. ಅನೇಕ ಪ್ರತಿಭಟನೆಗಳು ನಡೆದಿವೆ. ಭ್ರಷ್ಟಾಚಾರ, ಆತ್ಮಹತ್ಯೆ ಪ್ರಕರಣಗಳು ನಡೆದಿವೆ. ಇವೆಲ್ಲವೂ ಚರ್ಚೆ ಆಗಲಿದೆ ಎಂಬ ಕಾರಣಕ್ಕೆ, ದಾರಿ ತಪ್ಪಿಸಲು ಸರ್ಕಾರ ಈ ಪ್ರಯತ್ನಕ್ಕೆ ಮುಂದಾಗಿದೆ. ಬಿಜೆಪಿಯವರು ಅಜೆಂಡಾ ರಚಿಸಿದ್ದಾರೆಯೇ ಎಂಬ ಪ್ರಶ್ನೆಗೆ, ‘ನಾರಾಯಣಗುರು, ಕುವೆಂಪು, ಬಸವಣ್ಣ, ಕನಕದಾಸರು, ವಾಲ್ಮೀಕಿ ಸೇರಿದಂತೆ ನಮಗೆ ಎಲ್ಲರೂ ಬೇಕು. ಸಾಮಾಜಿಕ ನ್ಯಾಯ ಸಿಗಬೇಕು. ದೇಶ, ರಾಜ್ಯದ ಹಿತಕ್ಕೆ ಶ್ರಮಿಸಿ ಅಮರರಾದ ಎಲ್ಲಾ ಧರ್ಮದ ನಾಯಕರು ಬೇಕು ಎಂಬುದು ನಮ್ಮ ಅಜೆಂಡಾ’ ಎಂದು ತಿಳಿಸಿದರು.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಸಾವರ್ಕರ್ ಫೋಟೋಗೆ ನಮ್ಮ ಆಕ್ಷೇಪ ಇಲ್ಲ. ಇವರ ಜೊತೆ ಇತರೆ ಮಹನೀಯರ ಭಾವಚಿತ್ರವನ್ನೂ ಅಳವಡಿಕೆ ಮಾಡಬೇಕು. ಇಂದು ನಾವು ನಡೆಸಿದ್ದು ಪ್ರತಿಭಟನೆ ಅಲ್ಲ, ಇದು ನಮ್ಮ ಬೇಡಿಕೆ‌. ವಿಧಾನಸಭೆ ಸಭಾಂಗಣದಲ್ಲಿ ಬಸವಣ್ಣ, ನಾರಾಯಣಗುರು, ವಾಲ್ಮೀಕಿ, ‌ಕನಕದಾಸ ಫೋಟೋವನ್ನು ಹಾಕಿ ಎಂಬುದು ನಮ್ಮ ಬೇಡಿಕೆ. ವಿಧಾನಸಭೆ ಸಭಾಂಗಣದಲ್ಲಿ ಮಹನೀಯರ ಭಾವಚಿತ್ರ ಅಳವಡಿಸಲು ಸ್ಪೀಕರ್ ಎಲ್ಲರನ್ನೂ ವಿಶ್ವಾಸಕ್ಕೆ ಪಡೆಯಬೇಕು. ಈ ಬಗ್ಗೆ ಆಡಳಿತ ಪಕ್ಷವು ಪ್ರತಿಪಕ್ಷವನ್ನು ಸಂಪರ್ಕಿಸಿಲ್ಲ, ವಿಶ್ವಾಸಕ್ಕೆ ಪಡೆದಿಲ್ಲ. ಬಿಎಸಿಯಲ್ಲೂ ಚರ್ಚೆ ಆಗಿಲ್ಲ. ಏಕಾಏಕಿ ಭಾವಾಚಿತ್ರ ಅಳವಡಿಕೆ ಮಾಡಿದ್ದಾರೆ ಎಂದು ಕಿಡಿಕಾರಿದರು.

ಇದನ್ನೂ ಓದಿ:ಗಾಂಧೀಜಿ ಸಾವಿನಲ್ಲಿ ಸಾವರ್ಕರ್ ಕೈವಾಡವಿದೆ, ಸದನದಲ್ಲಿ ಅವರ ಫೋಟೋ ಅಗತ್ಯವಿಲ್ಲ: ಸಿದ್ದರಾಮಯ್ಯ

Last Updated : Dec 19, 2022, 1:44 PM IST

ABOUT THE AUTHOR

...view details