ಕರ್ನಾಟಕ

karnataka

ETV Bharat / state

ಅಥಣಿ ಉಪಚುನಾವಣೆ: ಬಿಜೆಪಿ ಟಿಕೆಟ್​ ಯಾರಿಗೆ?

ಉಪಚುನಾವಣೆಯಲ್ಲಿ ಅಥಣಿಯ ಬಿಜೆಪಿ ಟಿಕೆಟ್​ ಯಾರಿಗೆ ಸಿಗಲಿದೆ ಎಂಬ ಕುತೂಹಲ ಮೂಡಿದೆ. ಅನರ್ಹ ಶಾಸಕ ಮಹೇಶ್ ಕುಮಟಳ್ಳಿಗೆ ಟಿಕೆಟ್ ಸಿಗುವುದು ಬಹುತೇಕ ಅನುಮಾನ ಎನ್ನಲಾಗುತ್ತಿದೆ.

ಸಂಗ್ರಹ ಚಿತ್ರ

By

Published : Oct 2, 2019, 6:03 AM IST

Updated : Oct 2, 2019, 7:58 AM IST

ಬೆಂಗಳೂರು: ಮುಂದಿನ ಉಪಚುನಾವಣೆಯಲ್ಲಿ ಮಹೇಶ್ ಕುಮಟಳ್ಳಿಗೆ ಅಥಣಿಯಿಂದ ಬಿಜೆಪಿ ಟಿಕೆಟ್ ಸಿಗುವುದು ಬಹುತೇಕ ಅನುಮಾನವಾಗಿದೆ. ಕಾರಣ ಹಾಲಿ ವಿಧಾನ ಪರಿಷತ್ ಸದಸ್ಯರ ಅವಧಿ ಮುಕ್ತಾಯ ಹಾಗೂ ಡಿಸಿಎಂ ಸವದಿ‌ ಅವರ ಮುಂದಿನ ಆರು ತಿಂಗಳ ಡೆಡ್ ಲೈನ್ ಲೆಕ್ಕಾಚಾರ‌.


15 ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದೆ. ಈಗಾಗಲೇ ಸಿಎಂ ಯಡಿಯೂರಪ್ಪ ಅನರ್ಹ ಶಾಸಕರಿಗೆಲ್ಲರಿಗೂ ಟಿಕೆಟ್ ನೀಡಲಾಗುತ್ತದೆ ಎಂದು ಘೋಷಿಸಿದ್ದಾರೆ. ಇತ್ತ ಡಿಸಿಎಂ ಸವದಿಗೆ ಟಿಕೆಟ್ ನೀಡುವುದಿಲ್ಲ ಎಂಬ ಬಗ್ಗೆಯೂ ಬಿಜೆಪಿ ಪಾಳಯದಲ್ಲಿ ಮಾತುಗಳು ಕೇಳಿಬರುತ್ತಿವೆ. ಆದರೆ, ಅಥಣಿ ಕ್ಷೇತ್ರದ ಬಿಜೆಪಿ ಟಿಕೆಟ್ ಅನರ್ಹ ಶಾಸಕ ಮಹೇಶ್ ಕುಮಟಳ್ಳಿ ಕೈತಪ್ಪುವ ಸಾಧ್ಯತೆ ಹೆಚ್ಚು.‌ ಅಥಣಿಯಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಸ್ಪರ್ಧೆ ಮಾಡುವುದು ಬಹುತೇಕ ಫಿಕ್ಸ್ ಅನ್ನೋದು ಗೋಚರವಾಗುತ್ತಿದೆ. ಅಥಣಿಯಲ್ಲಿ ಕುಮಟಳ್ಳಿ ಬದಲು ಡಿಸಿಎಂ ಸವದಿಗೆ ಟಿಕೆಟ್ ಸಿಗುವ ಸಂಭಾವ್ಯತೆಗೆ ಪ್ರಮುಖ ಕಾರಣ ವಿಧಾನಪರಿಷತ್ ಸದಸ್ಯರ ಅವಧಿ ಮುಕ್ತಾಯದ ಲೆಕ್ಕಾಚಾರ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ದಟ್ಟವಾಗಿವೆ.

ಸವದಿಗೆ ಟಿಕೆಟ್, ಕುಮಟಳ್ಳಿಗೆ ಎಂಎಲ್​ಸಿ ಫಿಕ್ಸ್!

ಅನರ್ಹ ಶಾಸಕ ಮಹೇಶ್ ಕುಮಟಳ್ಳಿಗೆ ಅಥಣಿಯಲ್ಲಿ ಟಿಕೆಟ್ ನೀಡುವಂತೆ ಅವರ ಬೆಂಬಲಿಗರು ಪಟ್ಟು ಹಿಡಿದಿದ್ದಾರೆ. ಕುಮಟಳ್ಳಿ ಕೂಡ ಸ್ಪರ್ಧಿಸಲು ಮುಂದಾಗಿದ್ದಾರೆ. ರಮೇಶ್ ಜಾರಕಿಹೊಳಿ ಕೂಡ ಕುಮಟಳ್ಳಿ ‌ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ. ಆದರೆ ವಾಸ್ತವತೆ ನೋಡಿದರೆ ಕುಮಟಳ್ಳಿಗೆ ಉಪಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಸಿಗುವುದು ಬಹುತೇಕ ಅಸಾಧ್ಯ. ‌ಕುಮಟಳ್ಳಿಯನ್ನು ಬಿಜೆಪಿ ವಿಧಾನಪರಿಷತ್ ಸದಸ್ಯರನ್ನಾಗಿ ಮಾಡುವ ಎಲ್ಲ ಲಕ್ಷಣ ಕಾಣುತ್ತಿದೆ ಎಂದು ಹೇಳಲಾಗುತ್ತಿದೆ.

ಡಿಸಿಎಂ ಲಕ್ಷ್ಮಣ್ ಸವದಿ 2018ರ ಚುನಾವಣೆಯಲ್ಲಿ ಕಾಂಗ್ರೆಸ್​ನಲ್ಲಿದ್ದ ಮಹೇಶ್ ಕುಮಟಳ್ಳಿ ಎದುರು ಸೋತು ಹೋಗಿದ್ದರು. ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿ ಮುಂದುವರಿಯಾಗಬೇಕಾದರೆ ಸವದಿ ಜನವರಿ 2019ರ ಅಂತ್ಯದ ವೇಳೆಗೆ ವಿಧಾನಸಭೆ ಸದಸ್ಯರಾಗಿಬೇಕು ಅಥವಾ ವಿಧಾನಪರಿಷತ್ ಸದಸ್ಯರಾಗಿರಬೇಕು.

ಕರ್ನಾಟಕ ವಿಧಾನಪರಿಷತ್ ಮಾಹಿತಿ ಪ್ರಕಾರ ವಿಧಾನಸಭೆಯಿಂದ‌ ಚುನಾಯಿತರಾಗಿರುವ ಏಳು ಸದಸ್ಯರ ಸ್ಥಾನ ಜೂನ್ 2020ಕ್ಕೆ ತೆರವಾಗಲಿದೆ. ಅಂದರೆ ಅಷ್ಟು ಹೊತ್ತಿಗೆ ಡಿಸಿಎಂ ಸವದಿಯವರ ಆರು ತಿಂಗಳ ಡೆಡ್ ಲೈನ್ ಮುಗಿದು ಹೋಗಿರುತ್ತದೆ. ಜೂನ್‌ನಲ್ಲಿ ಪರಿಷತ್ ಸದಸ್ಯರಾದ ಜಯಮ್ಮ, ಬೋಸ್ ರಾಜು, ಹೆಚ್.ಎಂ.ರೇವಣ್ಣ, ಟಿ.ಎ.ಶರವಣ, ಡಿ.ಯು.ಮಲ್ಲಿಕಾರ್ಜುನ, ನಜೀರ್ ಅಹಮ್ಮದ್ ಮತ್ತು ಎಂ.ಸಿ.ವೇಣುಗೋಪಾಲ್ ಅವಧಿ ಮುಗಿಯುತ್ತದೆ.

2019, ಜನವರಿ ಒಳಗೆ ಡಿಸಿಎಂ‌ ಸವದಿ ಅವರು ವಿಧಾನಸಭೆ ಸದಸ್ಯರಾಗಬೇಕು ಅಥವಾ ಪರಿಷತ್ ಸದಸ್ಯರಾಗಬೇಕು. ಇಲ್ಲವಾದರೆ ಅವರು ತಮ್ಮ‌ ಸಚಿವ ಸ್ಥಾನ ಕಳೆದು ಕೊಳ್ಳಬೇಕಾಗುತ್ತದೆ‌. ಸಚಿವನಾಗಿ ಮುಂದುವರಿಯಲು ಸವದಿ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವುದು ಅನಿವಾರ್ಯವಾಗಿದೆ. ಇತ್ತ ಬಿಜೆಪಿಗೂ ಸವದಿಗೆ ಟಿಕೆಟ್ ನೀಡಲೇಬೇಕಾದ ಅನಿವಾರ್ಯತೆ ಎದುರಾಗಿದೆ ಎನ್ನಲಾಗುತ್ತಿದೆ.

ಹೀಗಾಗಿ ಮಹೇಶ್ ಕುಮಟಳ್ಳಿಗೆ ಬಿಜೆಪಿಯಿಂದ ಅಥಣಿ ಟಿಕೆಟ್ ಬಹುತೇಕ ಅನುಮಾನವಾಗಿದೆ. ಅದರ ಬದಲು ಅವರ‌ ಮನವೊಲಿಸಿ ಪರಿಷತ್ ಸದಸ್ಯನಾಗಿ ಆಯ್ಕೆ ಮಾಡುವುದು ಬಿಜೆಪಿ ಮುಂದಿರುವ ಏಕೈಕ ದಾರಿಯಾಗಿದೆ. ಆದ್ದರಿಂದ ಮಹೇಶ್ ಕುಮಟಳ್ಳಿಗೆ ಪರಿಷತ್ ಸ್ಥಾನವೇ ಫಿಕ್ಸ್ ಆಗುವ ಸಾಧ್ಯತೆನೇ ಹೆಚ್ಚು.

Last Updated : Oct 2, 2019, 7:58 AM IST

ABOUT THE AUTHOR

...view details