ಬೆಳಗಾವಿ:ಬನದ ಹುಣ್ಣಿಮೆ ನಿಮಿತ್ತ ನಾಳೆ ನಡೆಯಬೇಕಿದ್ದ ಸವದತ್ತಿಯ ರೇಣುಕಾದೇವಿಯ ಬೃಹತ್ ಜಾತ್ರೆಯನ್ನು ರದ್ದುಗೊಳಿಸಲಾಗಿದೆ. ಕೋವಿಡ್ ಕಾರಣ ಉತ್ತರ ಕರ್ನಾಟಕದ ಪ್ರಮುಖ ಶಕ್ತಿ ಕೇಂದ್ರ ಸವದತ್ತಿಯ ಯಲ್ಲಮ್ಮನ ಗುಡ್ಡದ ರೇಣುಕಾದೇವಿ ದೇಗುಲದಲ್ಲಿ ಸರಳ ಧಾರ್ಮಿಕ ಕಾರ್ಯಕ್ರಮ ನೆರವೇರಿಸಲು ಟ್ರಸ್ಟ್ ಸಮಿತಿ ನಿರ್ಧರಿಸಿದೆ.
ನಾಳೆ ಬೆಳಗ್ಗೆ ಮತ್ತು ಸಂಜೆ ಆದಿಶಕ್ತಿ ರೇಣುಕಾ ಯಲ್ಲಮ್ಮ ದೇವಿಗೆ ವಿಶೇಷ ಪೂಜೆ ಜರುಗುಲಿದ್ದು, ದೇವಸ್ಥಾನದ ಸಿಬ್ಬಂದಿ ಮಾತ್ರ ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಕೊರೊನಾ ಹರಡುವಿಕೆಯ ನಿಯಂತ್ರಣಕ್ಕಾಗಿ ಯಲ್ಲಮ್ಮದೇವಿ ಸನ್ನಿಧಿಗೆ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ದೇವಸ್ಥಾನಕ್ಕೆ ಸೀಮಿತವಾಗಿಯೇ ಅಧಿಕಾರಿಗಳು, ಅರ್ಚಕರು ಹಾಗೂ ಕೆಲವೇ ಗಣ್ಯರ ಉಪಸ್ಥಿತಿಯಲ್ಲಿ ಧಾರ್ಮಿಕ ಆಚರಣೆ ಕೈಗೊಳ್ಳಲು ಯಲ್ಲಮ್ಮ ದೇವಸ್ಥಾನ ಅಧಿಕಾರಿಗಳು ತೀರ್ಮಾನ ಕೈಗೊಂಡಿದ್ದಾರೆ. ಗುಡ್ಡದತ್ತ ಹರಿದುಬರುವ ಭಕ್ತಸಮೂಹವನ್ನು ತಡೆಯಲಾಗುತ್ತದೆ.
ಮಹಾರಾಷ್ಟ್ರ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೊರೊನಾ ಪ್ರಕರಣ ಹೆಚ್ಚಿದ್ದರಿಂದ ದೇವಿ ದರ್ಶನಕ್ಕೆ ಭಕ್ತರಿಗೆ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಎಲ್ಲ ಭಕ್ತರು ಇದನ್ನು ಪಾಲಿಸಿ ಆಡಳಿತ ವ್ಯವಸ್ಥೆಯೊಂದಿಗೆ ಕೈಜೋಡಿಸಬೇಕು ಎಂದು ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷರೂ ಆಗಿರುವ ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಕೋರಿದ್ದಾರೆ.