ಕರ್ನಾಟಕ

karnataka

ETV Bharat / state

ಸವದತ್ತಿಯಲ್ಲಿ ಉತ್ತಮ ಮಳೆ.. ಬಿತ್ತನೆ ಕಾರ್ಯ ಚುರುಕು: ರೈತರಿಗೂ ಗ್ಯಾರಂಟಿ ಘೋಷಿಸಲು ಒತ್ತಾಯ - ಕೃಷಿ ಇಲಾಖೆ ಅಧಿಕಾರಿ

ಮಹಿಳೆಯರು‌ ಬಸ್​​ಗಳಲ್ಲಿ ಊರೂರು ತಿರುಗುತ್ತಿರುವುದರಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲ. ಸಿಗುವ ಕಾರ್ಮಿಕರು ದುಪ್ಪಟ್ಟು ಕೂಲಿ ಹೇಳುತ್ತಿದ್ದಾರೆ: ಕರಿಕಟ್ಟಿ ಗ್ರಾಮದ ರೈತ ಬಾಬಾಜಾನ್ ಬಾವಾಖಾನ್

farmer preparing the land for sowing
ಸವದತ್ತಿ ತಾಲೂಕು ಕರಿಕಟ್ಟಿಯಲ್ಲಿ ಬಿತ್ತನೆಗೆ ಭೂಮಿ ಹದಗೊಳಿಸುತ್ತಿರುವ ರೈತ

By

Published : Jul 30, 2023, 4:10 PM IST

ಬಿತ್ತನೆ ಕಾರ್ಯದಲ್ಲಿ ನಿರತ ರೈತರು...

ಬೆಳಗಾವಿ: ಕಳೆದ 15 ದಿನಗಳಿಂದ ಉತ್ತಮ ಮಳೆಯಾಗಿರುವ ಹಿನ್ನೆಲೆ ಜಿಲ್ಲೆಯ ಸವದತ್ತಿ ತಾಲೂಕಿನಲ್ಲಿ ಬಿತ್ತನೆ ಕಾರ್ಯ ಚುರುಕುಗೊಂಡಿದ್ದು, ರೈತರು ಭೂಮಿ ಹದಗೊಳಿಸುವಲ್ಲಿ ನಿರತರಾಗಿದ್ದಾರೆ.

ಹೌದು.. ಈ ಬಾರಿ ಮುಂಗಾರು ಮಳೆ ಎರಡು ತಿಂಗಳು ವಿಳಂಬವಾಗಿದ್ದರಿಂದ ಸವದತ್ತಿ ತಾಲೂಕಿನ ಕರಿಕಟ್ಟಿ ಸೇರಿ ಸುತ್ತಲಿನ ಹಲವಾರು ಗ್ರಾಮದ ರೈತರು ಬಿತ್ತನೆ ಮಾಡಿರಲಿಲ್ಲ. ಇತ್ತೀಚೆಗೆ ನಿರಂತರವಾಗಿ ಮಳೆಯಾಗಿದ್ದು, ಮಳೆರಾಯ ಈಗ ಒಂದಿಷ್ಟು ವಿರಾಮ ಕೊಟ್ಟಿದ್ದಾನೆ. ಹೀಗಾಗಿ ಬೀಜ, ಗೊಬ್ಬರ ತಂದು ಮನೆಯಲ್ಲಿ ಸಂಗ್ರಹ ಮಾಡಿದ್ದ ರೈತರು ಹತ್ತಿ, ಸೊಯಾಬಿನ್ ಇನ್ನಿತರ ಬೀಜ ಬಿತ್ತನೆ ಕಾರ್ಯದಲ್ಲಿ ನಿರತರಾಗಿದ್ದಾರೆ.

ಭೂಮಿ ಹದಗೊಳಿಸುತ್ತಿದ್ದ ಕರಿಕಟ್ಟಿ ಗ್ರಾಮದ ರೈತ ಬಾಬಾಜಾನ್ ಬಾವಾಖಾನ್ ಈಟಿವಿ ಭಾರತ ಜೊತೆಗೆ ಮಾತನಾಡಿ, ಮಳೆ ತಡವಾಗಿದ್ದರಿಂದ ನಮ್ಮೂರಲ್ಲಿ ಶೇ.10ರಷ್ಟು ಮಾತ್ರ ಭೂಮಿ ಬಿತ್ತನೆಯಾಗಿದೆ. ನಮ್ಮಲ್ಲಿ ಬಹುತೇಕ ಮಳೆಯರನ್ನು ನಂಬಿ ಕೃಷಿ ಮಾಡುತ್ತೇವೆ. ಈಗ ಮಳೆಯಾಗಿದ್ದರಿಂದ ಹತ್ತಿಕಾಳು, ಸೊಯಾಬಿನ್ ಬಿತ್ತನೆಗೆ ತಯಾರಿ ನಡೆಸಿದ್ದು, ಇನ್ನೇಲೆ ಅದು ಎಷ್ಟು ಬೆಳೆ ಬರುತ್ತದೆಯೋ ಗೊತ್ತಿಲ್ಲ. ಈಗ ಸದ್ಯ ಮಳೆಯನ್ನೂ ನಂಬಿ ಬಿತ್ತನೆ ಮಾಡುತ್ತಿದ್ದೇವೆ. ಆ ಭಗವಂತನೇ ಕಾಪಾಡಬೇಕು ಎಂದು ಹೇಳಿದರು.

ಇಲ್ಲಿ ಒಣ ಬೇಸಾಯ ಇದ್ದು, ಕರಿಕಟ್ಟಿ ಗ್ರಾಮದಲ್ಲಿ ಶೇ 98ರಷ್ಟು ಕೃಷಿ ಅವಲಂಬಿತರು ಇದ್ದಾರೆ. ಹಿಂದೆ ಬೆಳೆಹಾನಿ ನೀಡಿದಂತೆ ಹೆಕ್ಟೇರ್ ಮೇಲೆ ಸರ್ಕಾರ 5 ರಿಂದ 10 ಸಾವಿರ ಪರಿಹಾರ ಕೊಟ್ರ ರೈತ ಬದುಕುತ್ತಾನೆ. ಇಲ್ಲದಿದ್ದರೆ ಮತ್ತಷ್ಟು ಪರಿಸ್ಥಿತಿ ಕೆಡುತ್ತದೆ. ಕೇಂದ್ರ ಸರ್ಕಾರ ಬಿತ್ತನೆಗಾಗಿ ರೈತರಿಗೆ ಪರಿಹಾರ ಕೊಡುತ್ತಿದೆ. ಪರಿಹಾರ ನೋಡಿದ್ರೆ ಕೃಷಿ ಯಂತ್ರಗಳಿಗೆ ಹಾಕಿದ ಡಿಸೇಲ್ ಖರ್ಚು ಆಗೋದಿಲ್ಲ. ಶೀಘ್ರದಲ್ಲಿ ಕೇಂದ್ರ ಹಾಗೂ ರಾಜ್ಯ ಕೃಷಿ ಸಚಿವರಿಗೆ ರೈತರಿಗೆ ಹೆಕ್ಟೇರ್ ಮೇಲೆ ಪರಿಹಾರ ಕೊಡಬೇಕೆಂದು ರೈತರ ಪರವಾಗಿ ಮನವಿ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದರು.

ಊರೂರು ಸುತ್ತುತ್ತಿರುವ ಮಹಿಳೆಯರು, ಕೂಲಿ ಕಾರ್ಮಿಕರ ಕೊರತೆ:ರಾಜ್ಯ ಸರ್ಕಾರ ಘೋಷಿಸಿರುವ ಗ್ಯಾರಂಟಿ ಯೋಜನೆಯಲ್ಲಿ ಮಹಿಳೆಯರು‌ ಬಸ್​​ಗಳಲ್ಲಿ ಉಚಿತ ಪ್ರಯಾಣ ಮಾಡುತ್ತಿದ್ದಾರೆ. ಹೀಗೆ ಅವರು ಊರೂರು ತಿರುಗುತ್ತಿರುವುದರಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲ. ಸಿಗುವ ಕಾರ್ಮಿಕರು ದುಪ್ಪಟ್ಟು ಕೂಲಿ ಹೇಳುತ್ತಿದ್ದಾರೆ. ಹಾಗಾಗಿ, ರೈತರಿಗೆ ಗೊಬ್ಬರ, ಕೀಟನಾಶಕ, ಕೃಷಿ ಉಪಕರಣಗಳನ್ನು ಉಚಿತವಾಗಿ ಕೊಡುವ ರೀತಿಯಲ್ಲಿ ಗ್ಯಾರಂಟಿ ಯೋಜನೆಗಳನ್ನು ಸರ್ಕಾರ ಜಾರಿಗೆ ತರಬೇಕೆಂದು ಬಾಬಾಜಾನ್​ ವಿನಂತಿಸಿಕೊಂಡರು.

ಇನ್ನೊಬ್ಬ ರೈತ ಮಡಿವಾಳಪ್ಪ ಗರಗದ ಮಾತನಾಡಿ, ಹೋದ ವರ್ಷ ಈ ದಿನಕ್ಕೆ ಮೊಣಕಾಲದವರೆಗೂ ಹತ್ತಿ ಬೆಳೆ ಬೆಳೆದು ನಿಂತಿತ್ತು. ಆದರೆ ಈ ಬಾರಿ ಮಳೆ ಕೈ ಕೊಟ್ಟಿದ್ದರಿಂದ ಈಗಷ್ಟೇ ಹತ್ತಿ ಕಾಳು ಹಾಕಿದ್ದೇವೆ. ಕೈಗೆ ಬರುತ್ತದೆಯೋ ಇಲ್ಲವೋ ಗೊತ್ತಿಲ್ಲ. ಆದರ ಭೂಮಿ ತಾಯಿ ನಂಬಿ ಬಿತ್ತನೆ ಮಾಡಿದ್ದು, ಉತ್ತಮ ಬೆಳೆ ಬಂದು ಲಾಭವಾದರೆ ಒಳ್ಳೆಯದಾಗುತ್ತದೆ ಎಂದರು.

ಕೃಷಿ ಇಲಾಖೆ ಅಧಿಕಾರಿಗಳ ಪ್ರಕಾರ ಜಿಲ್ಲೆಯಲ್ಲಿ ಶೇ.68ರಷ್ಟು ಮಳೆ ಕೊರತೆಯಿದ್ದು, ಈವರೆಗೆ ಶೇ.80ರಷ್ಟು ಬಿತ್ತನೆಯಾಗಿದೆ ಇನ್ನು ಶೇ.20ರಷ್ಟು ಬಿತ್ತನೆಯಾಗಬೇಕಿದೆ.

ಇದನ್ನೂಓದಿ:ಬಿತ್ತನೆ ಗುರಿ 82 ಲಕ್ಷ ಹೆಕ್ಟೇರ್​: ಮುಂಗಾರು ವಿಳಂಬದಿಂದ ರಾಜ್ಯದಲ್ಲಿ ಬಿತ್ತನೆ ಕಂಠಿತ

ABOUT THE AUTHOR

...view details