ಬೆಳಗಾವಿ:ಸಕ್ಕರೆ ನಾಡು ಬೆಳಗಾವಿ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷವೂ ಆ್ಯಕ್ಟಿವ್ ಆಗಿದ್ದು, ಸವದತ್ತಿಯಲ್ಲಿ ಮಂಗಳವಾರ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಯುವನಾಯಕ ಸೌರವ್ ಚೋಪ್ರಾ ಅವರು ಜೆಡಿಎಸ್ ನಾಯಕ ಕುಮಾರಸ್ವಾಮಿ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಮುಂದಿನ ದಿನಗಳಲ್ಲಿ ಬೆಳಗಾವಿ ರಾಜಕಾರಣ ಕಾಲನಿರ್ಣಯ ಮಾಡುತ್ತದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು.ಸವದತ್ತಿಯಲ್ಲಿ ಮಂಗಳವಾರ ಸೌರವ್ ಚೋಪ್ರಾ ಮತ್ತು ಮಾಜಿ ಎಂಎಲ್ಸಿ ವಿವೇಕರಾವ್ ಪಾಟೀಲ ಅವರಿಗೆ ಶಾಲು ಹೊದಿಸಿ ಜೆಡಿಎಸ್ ಪಕ್ಷಕ್ಕೆ ಬರಮಾಡಿಕೊಂಡ ಬಳಿಕ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು.
ಸೌರವ್ 18ರಂದು ನಾಮಪತ್ರ ಸಲ್ಲಿಕೆ:ಆನಂದ ಚೋಪ್ರಾ ಅವರು ಸವದತ್ತಿಯಲ್ಲಿ ಹಿಡಿತ ಸಾಧಿಸಿದ್ದರು. ಈಗ ಅವರ ಪುತ್ರ ಸೌರವ್ ಚೋಪ್ರಾ ಅವರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಅವರ ಬೆಳವಣಿಗೆ ಹಿಂದೆ ನಾನು ಇರುತ್ತೇನೆ. ಕುಟುಂಬದ ಸಹೋದರನಂತೆ ನಾನು ಸ್ವಾಗತಿಸಿದ್ದೇನೆ. ಅವರು ಅಧಿಕೃತವಾಗಿ ಜೆಡಿಎಸ್ ಪಕ್ಷಕ್ಕೆ ಸೇರಿದ್ದು, 17ರಂದು ಸಾರ್ವಜನಿಕ ಸಭೆ ಆಯೋಜಿಸಿ, 18ರಂದು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ತಿಳಿಸಿದರು.
ಬಿಜೆಪಿಗೆ ಶಕ್ತಿ ತುಂಬಿದ್ದು ಈಶ್ವರಪ್ಪ: ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ನಿವೃತ್ತಿ ಘೋಷಣೆ ವಿಚಾರಕ್ಕೆ ಈಶ್ವರಪ್ಪ ಅವರದ್ದೇ ಆದ ರೀತಿಯಲ್ಲಿ ಪಕ್ಷ ಸಂಘಟನೆ ಮಾಡಿದವರು. ಒಂದು ಕಾಲದಲ್ಲಿ ಬಿಜೆಪಿಗೆ ಶಕ್ತಿ ಇಲ್ಲದಾಗ ಸಂಘಟನೆ ಮಾಡಿದವರಲ್ಲಿ ಪ್ರಮುಖರು. ಅವರ ತೀರ್ಮಾನ ಮತ್ತು ಅವರ ಪಕ್ಷದ ಬೆಳವಣಿಗೆ ಬಗ್ಗೆ ಟೀಕೆ ಮಾಡೋದು ಶೋಭೆ ತರುವಂತದ್ದಲ್ಲ. ಅವರು ಇನ್ನೂ ಸ್ವಲ್ಪ ದಿನ ರಾಜಕಾರಣದಲ್ಲಿ ಇರಬೇಕಿತ್ತು. ನನ್ನ ಸರ್ಕಾರದಲ್ಲಿ ನೀರಾವರಿ ಮಂತ್ರಿಯಾಗಿ ಒಳ್ಳೆಯ ಕೆಲಸ ಮಾಡಿದ್ದರು ಎಂದು ಕುಮಾರಸ್ವಾಮಿ ಹೇಳಿದರು.