ಬೆಳಗಾವಿ:ನಗರದ ಗೋಗಟೆ ಕಾಲೇಜಿನಲ್ಲಿ ಕನ್ನಡ ಬಾವುಟ ಹಿಡಿದ ಯುವಕನ ಮೇಲೆ ಬೆಳಗಾವಿ ನಗರ ಪೊಲೀಸ್ ಅಧಿಕಾರಿ ಹಲ್ಲೆ ನಡೆಸಿರುವ ಆರೋಪ ಪ್ರಕರಣವನ್ನು ಅಲ್ಲಿಗೆ ಬಿಟ್ಟು ಬಿಡುವುದು ಒಳ್ಳೆಯದು. ಪದೇ ಪದೆ ಕನ್ನಡ, ಮರಾಠಿ ಆಗಬಾರದು. ಬೆಳಗಾವಿ ಬೆಳೆಯುತ್ತಿರುವ ನಗರ. ಇದಕ್ಕೆ ಭಂಗ ತರುವ ಕೆಲಸ ಮಾಡಬಾರದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.
ಭಾನುವಾರ ನಗರದ ಕುಮಾರ ಗಂಧರ್ವ ರಂಗ ಮಂದಿರದಲ್ಲಿ ಮಾತನಾಡಿದ ಮಾತನಾಡಿದ ಅವರು, ಬೆಳಗಾವಿ ಬೆಳೆಯಲು ಅವಕಾಶ ಕೊಡಬೇಕು. 20 ವರ್ಷದ ಹಿಂದೆ ಬೆಳಗಾವಿಯಲ್ಲಿ ಹಿಂದೂ, ಮುಸ್ಲಿಂ ಗಲಾಟೆಯಾಗಿ ಅಭಿವೃದ್ಧಿ ಕುಂಠಿತವಾಗಿತ್ತು. ಸದ್ಯ ಈಗ ಇಂತಹ ಗಲಾಟೆಗಳು ತಣ್ಣಗಾಗಿದ್ದು, ಈಗ ಬೆಳಗಾವಿ ಬೆಳೆಯುತ್ತಿದೆ. ನಗರದಲ್ಲಿ ಯಾವುದೊಂದು ವಿಷಯವನ್ನು ದೊಡ್ಡದಾಗಿ ಮಾಡುವುದು ಸರಿಯಲ್ಲ. ಠಾಣೆಗೆ ದೂರು ನೀಡಲು ಜನರು ಬಂದರೊಂದಿಗೆ ಪೊಲೀಸರು ಸಂಯಮದಿಂದ ನಡೆದುಕೊಳ್ಳಬೇಕು. ಹೋರಾಟಗಾರರ ಮನೆಗೆ ಬೆಂಕಿ ಹಚ್ಚುವುದಾಗಿ ಹೇಳುವ ಪೊಲೀಸರ ನಡೆ ಸರಿಯಿಲ್ಲ ಎಂದರು.
ಬಿಜೆಪಿ ಸರ್ಕಾರಕ್ಕೆ ಧಮ್ ಇಲ್ಲ: ಇಂಥ ಪ್ರಕರಣದಲ್ಲಿ ಗಟ್ಟಿ ಕ್ರಮ ತೆಗೆದುಕೊಳ್ಳುವ ಅಥವಾ ಯಾವುದೇ ಪ್ರಕರಣದಲ್ಲಿ ಕ್ರಮ ಜರುಗಿಸುವ ಧಮ್ ಬಿಜೆಪಿ ಸರ್ಕಾರಕ್ಕಿಲ್ಲ. ಬಿಜೆಪಿ ಅವರು ಧಮ್ ಬಗ್ಗೆ ಮಾತನಾಡುತ್ತಾರೆ. ಇಲ್ಲಿ ಉಸ್ತುವಾರಿ ಸಚಿವರು, ಶಾಸಕರಿಗೆ ಇರುವ ಶಕ್ತಿ ಸರ್ಕಾರಕ್ಕೆ ಇಲ್ಲ. ಇದು ಬೇರೆ ಬೇರೆ ವಿಷಯದಲ್ಲಿಯೂ ಸಾಬೀತಾಗಿದೆ. ಇದನ್ನು ಹೆಚ್ಚು ಮುಂದುವರೆಸವುದು ಸರಿಯಲ್ಲ. ಅಲ್ಲದೇ, ಪೊಲೀಸರು ಕನ್ನಡ ಧ್ವಜದ ಬಗ್ಗೆ ಬಳಕೆ ಮಾಡಿರುವ ಪದ ಸರಿಯಲ್ಲ ಎಂದು ಹೇಳಿದರು.
ಸರ್ವೇಯಲ್ಲಿ ಹೆಸರು ಬಂದವರಿಗೆ ಟಿಕೆಟ್: ಈಗಾಗಲೇ ಬೆಳಗಾವಿಯ ಎಲ್ಲ ಕ್ಷೇತ್ರದಲ್ಲಿ ಸರ್ವೇ ನಡೆಸಲಾಗುತ್ತಿದೆ. 2ನೇ ಬಾರಿಯೂ ಸರ್ವೇ ಕೆಲಸ ನಡೆಯುತ್ತಿದೆ. ಎಐಸಿಸಿಯಿಂದ, ಕೆಪಿಸಿಸಿ, ಸಿಎಲ್ಪಿ ಕಡೆಯಿಂದ ಪ್ರತಿ ಕ್ಷೇತ್ರದಲ್ಲಿ ಸುಮಾರು 10 ಜನ ಆಕಾಂಕ್ಷಿಗಳಿದ್ದಾರೆ. ಟಿಕೆಟ್ ಹಂಚಿಕೆಯ ವಿಚಾರದಲ್ಲಿ ಸರ್ವೇಯಲ್ಲಿ ಯಾರ ಹೆಸರು ಬರುತ್ತದೆಯೋ ಅವರಿಗೆ ಕಾಂಗ್ರೆಸ್ ನಿಂದ ಟಿಕೆಟ್ ನೀಡುತ್ತೇವೆ. ಸವದತ್ತಿ ಕ್ಷೇತ್ರದಲ್ಲಿ ನಮ್ಮ ಪಕ್ಷ ಗೆಲ್ಲಬೇಕೆಂಬ ಆಸೆ ನಮಗೂ ಇದೆ. ಆದ್ದರಿಂದ ಅಲ್ಲಿಯೂ ಕೂಡಾ ಚುನಾವಣೆ ವೇಳೆ ಹೆಚ್ಚು ಮುತುವರ್ಜಿ ವಹಿಸಲಾಗುವುದು ಎಂದು ತಿಳಿಸಿದರು.