ಬೆಳಗಾವಿ:ಪಾರ್ಕಿಂಗ್ ಮತ್ತು ದೇವಸ್ಥಾನದ ಜಾಗೆ ಪ್ರಕರಣದಲ್ಲಿ ಹತ್ಯೆಯಾದ ಸತೀಶ್ ಪಾಟೀಲ್ ಮನೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಈ ವೇಳೆ ಜಾರಕಿಹೊಳಿ ಬಳಿ ನೋವು ತೋಡಿಕೊಂಡ ಸತೀಶ್ ಪೋಷಕರು, ನನ್ನ ಮಗ ಅಮಾಯಕನಾಗಿದ್ದ. ಗ್ರಾಮಸ್ಥರ ಒತ್ತಾಯದ ಮೇರೆಗೆ ದೇವಸ್ಥಾನದ ಜಮೀನಿಗಾಗಿ ಹೋರಾಟ ಮಾಡುತ್ತಿದ್ದ. ಇದೇ ವಿಚಾರಕ್ಕೆ ಮೂರು ಬಾರಿ ಮಗನ ಕೊಲೆಗೆ ಯತ್ನಿಸಿದ್ದರೂ ಪೊಲೀಸರು ಸೂಕ್ತ ಕ್ರಮಕೈಗೊಂಡಿಲ್ಲ. ಕೊಲೆ ಮಾಡಿದವರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಕಣ್ಣೀರು ಹಾಕಿದರು. ಬಳಿಕ ಪೊಲೀಸರು ಆರೋಪಿಗಳನ್ನು ಬಿಟ್ಟು ಹೆಸರಿಗೆ ಮಾತ್ರ ಹೊರಗಿನವರನ್ನು ಬಂಧಿಸುತ್ತಿದ್ದಾರೆ. ಈ ಮೂಲಕ ಪ್ರಕರಣವನ್ನು ಮುಚ್ಚಿ ಹಾಕಲು ಪೊಲೀಸರು ಯತ್ನಿಸಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸತೀಶ ಜಾರಕಿಹೊಳಿ, ಪೊಲೀಸರ ವೈಫಲ್ಯವೇ ಘಟನೆಗೆ ಕಾರಣ. ಈ ಮುಂಚೆ ಕೂಡ ಸತೀಶ್ ಪಾಟೀಲ್ ಮೇಲೆ ಮೂರು ಬಾರಿ ದಾಳಿ ನಡೆದಿತ್ತು. ಈ ವೇಳೆ ಪೊಲೀಸರು ಸೂಕ್ತ ಕ್ರಮಗೊಂಡಿದ್ದರೆ ಇಂತಹ ಘಟನೆ ಆಗುತ್ತಿರಲಿಲ್ಲ. ಕಾಕತಿ ಪೊಲೀಸ್ ಠಾಣೆಯಲ್ಲಿ ಬಹಳ ವರ್ಷಗಳಿಂದ ಪೊಲೀಸರು ಅಲ್ಲಿಯೇ ಠಿಕಾಣಿ ಹೂಡಿದ್ದಾರೆ. ಹೀಗಾಗಿ ಜನರಿಗೆ ಸರಿಯಾದ ನ್ಯಾಯ ಸಿಗುತ್ತಿಲ್ಲ. ಈ ಕುರಿತು ಪೊಲೀಸ್ ಕಮಿಷನರ್ ಅವರೊಂದಿಗೆ ಮಾತನಾಡುತ್ತೇನೆ ಎಂದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕೇವಲ 12 ಜನರನ್ನು ಬಂಧಿಸಿದ್ದಾರೆ. ಸೂಕ್ತ ತನಿಖೆ ನಡೆಸಿ ಘಟನೆಗೆ ಕಾರಣರಾದವರನ್ನು ಬಂಧಿಸಬೇಕು. ಗ್ರಾಮದಲ್ಲಿ ಅಮಾಯಕರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಗೌಂಡವಾಡ ಗ್ರಾಮಸ್ಥರು ಭಯಪಡುವ ಅವಶಕತೆಯೇ ಇಲ್ಲ. ತೊಂದರೆ ಆಗದಂತೆ ನೋಡಿಕೊಳ್ಳಲು ಪೊಲೀಸ್ ಕಮಿಷನರ್ ಅವರೊಂದಿಗೆ ಮಾತನಾಡುತ್ತೇನೆ. ಸತೀಶ್ ಪಾಟೀಲ್ ಕುಟುಂಬಸ್ಥರಿಗೆ ನ್ಯಾಯ ಕೊಡಿಸಲಾಗುವುದು ಎಂದು ಭರವಸೆ ನೀಡಿದರು.
ಪೊಲೀಸರ ವಿರುದ್ಧ ಜಾರಕಿಹೊಳಿ ಗರಂ: ಬೆಳಗಾವಿ ತಾಲೂಕಿನ ಗೌಂಡವಾಡದಲ್ಲಿ ಅಮಾಯಕರನ್ನು ಬಂಧಿಸಲಾಗುತ್ತಿದೆ. ಪೊಲೀಸರು ಮತ್ತು ಆರೋಪಿಗಳಿಂದ ನಮಗೆ ಜೀವ ಭಯ ಇದೆ ಎಂದು ಗೌಂಡವಾಡ ಗ್ರಾಮಸ್ಥರು ಸತೀಶ ಜಾರಕಿಹೊಳಿಗೆ ದೂರು ನೀಡಿದರು. ಈ ವೇಳೆ ಗ್ರಾಮದಿಂದ ನೇರವಾಗಿ ಕಮಿಷನರ್ ಕಚೇರಿಗೆ ತೆರಳಿದ ಸತೀಶ್ ಜಾರಕಿಹೊಳಿ ಅಮಾಯಕರನ್ನ ಮುಟ್ಟದಂತೆ ಪೊಲೀಸರಿಗೆ ವಾರ್ನಿಂಗ್ ಕೊಟ್ಟಿದ್ದಾರೆ.