ಬೆಳಗಾವಿ : ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಬಿಜೆಪಿಯ ಬಂಡಾಯ ಅಭ್ಯರ್ಥಿ. ಹೀಗಾಗಿ, ಲಖನ್ ಬಿಜೆಪಿಯ ಬಿ ಟೀಂ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ವ್ಯಂಗ್ಯವಾಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾರಕಿಹೊಳಿ ಕುಟುಂಬದ ಅಭಿಮಾನಿ ಮತದಾರರ ಮತಗಳು ಲಖನ್‌ಗೆ ಬರುತ್ತವೆ. ಆದರೆ, ಪಕ್ಷ ಮೀರಿ ಮತಗಳಿಲ್ಲ, ಇಷ್ಟೇ ಮತಗಳಿಂದ ಗೆಲ್ಲಿಸಲು ಆಗಲ್ಲ.
ಜಾರಕಿಹೊಳಿ ಬ್ರ್ಯಾಂಡ್ ಇದ್ದರೂ ಗೆಲ್ಲಿಸುವ ಶಕ್ತಿ ಬೇಕಲ್ಲವೇ? ಅಭ್ಯರ್ಥಿ ಗೆಲ್ಲಲು ಮೂರು ಸಾವಿರ ವೋಟ್ ಬೇಕು. ಲಾಸ್ಟ್ ಟೈಮ್ ನಮ್ಮನ್ನು ಹೇಗೆ ಸೋಲಿಸಿದ್ದಾರೆ ಎಂಬುದು ಗೊತ್ತಿದೆ. ಆ ಹಿನ್ನೆಲೆಯಲ್ಲಿ ನಾವಿಂದು ಜಾಸ್ತಿ ಓಡಾಡುತ್ತಿದ್ದೇವೆ ಎಂದರು.
ಪರಿಷತ್ ಚುನಾವಣೆ ಕುರಿತಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿರುವುದು.. ಕಳೆದ ಬಾರಿ ನಾವು ಎಲ್ಲಿ ತಪ್ಪಿದ್ದೇವೆ, ಅದು ನಮಗೆ ಅರಿವಿದೆ. ಹೀಗಾಗಿ, ನಮ್ಮ ಮತದಾರರು ನಮ್ಮ ಜೊತೆ ಗಟ್ಟಿಯಾಗಿದ್ದಾರೆ. ಈಗ ಗೊಂದಲ ಇರುವುದು ಬಿಜೆಪಿಯಲ್ಲಿ. ಏನೇ ಸಮಸ್ಯೆ ಆದರೂ ಅಲ್ಲೇ ಆಗಬೇಕು.
ನಾಲ್ಕುವರೆ ಸಾವಿರ ಮತಕ್ಕಾಗಿ ಇಬ್ಬರು ಬಡಿದಾಡಬೇಕಿದೆ. ಇಬ್ಬರು ಬಲಾಢ್ಯ ಕುಸ್ತಿಪಟುಗಳ ಮಧ್ಯೆ ಫೈಟ್ ಆಗಬೇಕು, ನಮ್ಮಲ್ಲಿ ಆ ಫೈಟ್ ಇಲ್ಲ ಎಂದು ತಿಳಿಸಿದರು.
ಪಕ್ಷೇತರ ಅಭ್ಯರ್ಥಿಯಿಂದ ಈಸಿ ಲೋನ್, ಈಸಿ ಇನ್ಸ್ಟಾಲ್ಮೆಂಟ್ ಕರೆ ಬರಬಹುದು. ಗಾಡಿ ತಂದು ಕೊಡುತ್ತೇನೆ. ಆ ಮೇಲೆ ಬ್ಯಾಂಕ್ ಲೋನ್ ಮಾಡಿಸುತ್ತೇನೆ ಅಂತಾರೆ. ಚುನಾವಣೆ ಆದ್ಮೇಲೆ ಗಾಡಿಯನ್ನೇ ತೆಗೆದುಕೊಂಡು ಹೋಗುತ್ತಾರೆ.
ಎಲ್ಲರೂ ಹುಷಾರಾಗಿರಬೇಕು. ಕುಟುಂಬ ರಾಜಕಾರಣ ಆಗಬಾರದು. ಕುಟುಂಬ ಅಂದರೆ ಮೊದಲು ಪಕ್ಷ ಗೆಲ್ಲಬೇಕು. ಕುಟುಂಬಕ್ಕೂ ಇದಕ್ಕೂ ಪ್ರಶ್ನೆ ಇಲ್ಲ, ಫಸ್ಟ್ ಪ್ರಿಯಾರಿಟಿ ಕಾಂಗ್ರೆಸ್ ಪಕ್ಷ ಎಂದರು.
ಅನಿವಾರ್ಯವಾಗಿ ಏಜೆಂಟ್ ಆಗಿದ್ದೇನೆ :ಅನಿವಾರ್ಯ ಪರಿಸ್ಥಿತಿಯಲ್ಲಿ ನಾವು ಬೂತ್ ಏಜೆಂಟ್ ಆಗಿದ್ದೇವೆ. ನಾವು ಕಣ್ಮುಚ್ಚಿ ಕುಳಿತ್ರೆ, ಒಂದು ಸಾವಿರ ಮತಗಳು ಕಳೆದು ಹೋಗುತ್ತವೆ. ನಮಗೆ ಸೋಲಿನ ಭೀತಿಯಿಲ್ಲ.
ಚುನಾವಣೆ ಅಕ್ರಮದ ಭೀತಿ ಇದೆ. ಅರಭಾಂವಿ ಹಾಗೂ ಗೋಕಾಕಿನಲ್ಲಿ ನಮಗೂ 40 ಪರ್ಸೆಂಟ್ ಮತ ಬರುವ ಲೆಕ್ಕಾಚಾರವಿದೆ. ಗುಜನಾಳ ರಮೇಶ ಜಾರಕಿಹೊಳಿ ಅವರ ಹೆಡ್ ಕ್ವಾರ್ಟರ್. ಎಲ್ಲ ನಿಯಂತ್ರಣ ಆಗೋದು ಅಲ್ಲಿಂದ ಎಂದು ತಿಳಿಸಿದರು.
ಬಿಜೆಪಿಯಿಂದ ಪ್ರಚಾರವೇ ಆಗ್ತಿಲ್ಲ : ವಿವೇಕರಾವ್ ಪಾಟೀಲ್ ಮೊದಲಿನಿಂದಲೂ ರಮೇಶ್ ಜಾರಕಿಹೊಳಿ ಜೊತೆ ಗುರುತಿಸಿಕೊಂಡಿದ್ದರು. ಅಲ್ಲಿ ಟಿಕೆಟ್ ಸಿಗಲಿಲ್ಲ ಅಂತಾ ನಮ್ಮ ಬಳಿ ಬಂದಿದ್ದರು. ಅವರಿಗೆ ಟಿಕೆಟ್ ನೀಡುವಂತೆ ನಾನು ಕೇಳಿದ್ದೆ.
ಪಕ್ಷದಲ್ಲಿ ಕೆಲಸ ಮಾಡಲಿ ನಂತರ ಟಿಕೆಟ್ ಕೊಡೋಣ ಎಂದು ವರಿಷ್ಠರು ಹೇಳಿದರು. ಇದರಿಂದ ನಮ್ಮ ಮತಗಳಿಗೆ ಡಿಸ್ಟರ್ಬ್ ಆಗಲ್ಲ. ಅವರು ಡೇ ಒನ್‌ನಿಂದ ರಮೇಶ್ ಜಾರಕಿಹೊಳಿ ಜೊತೆಗಿದ್ದರು, ಈಗಲೂ ಜೊತೆಗಿದ್ದಾರೆ.
ಇದರಿಂದ ನಮ್ಮ ಮೇಲೆ ಬಹಳ ದೊಡ್ಡ ಮಟ್ಟದ ಪರಿಣಾಮ ಬೀರಲ್ಲ. ಈಗಾಗಲೇ ನಾವು ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದೇವೆ. ಈಗ 2ನೇ ರೌಂಡ್ ಪ್ರಾರಂಭವಾಗಿದೆ. ಇನ್ನೂ ಬಿಜೆಪಿಯವರದ್ದು ಪ್ರಾರಂಭವೇ ಆಗಿಲ್ಲ.
ಚುನಾವಣೆ ಮಾಡಬೇಕಾದ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಈವರೆಗೂ ಒಂದು ಸಭೆ ಮಾಡಿಲ್ಲ. ಅವರದ್ದೇ ಬಂಡಾಯ ಅಭ್ಯರ್ಥಿ ಹಿಂಪಡೆಯಲು ಕಸರತ್ತು ಸಹ ಮಾಡಿಲ್ಲ. ನನ್ನ ಲೆಕ್ಕದ ಪ್ರಕಾರ, ಬಿಜೆಪಿಯವರು ಬಹಳ ಹಿಂದೆ ಇದ್ದಾರೆ.
13 ಬಿಜೆಪಿ ಶಾಸಕರ ಪೈಕಿ ಇಬ್ಬರು ಬಂಡಾಯ ಅಭ್ಯರ್ಥಿ ಪರ ಮತಯಾಚಿಸುತ್ತಿದ್ದಾರೆ. 11 ಶಾಸಕರು ಬಿಜೆಪಿ ಪರವಾಗಿದ್ದರೂ ಎಲ್ಲಿಯೂ ಪ್ರಚಾರ ಮಾಡುತ್ತಿಲ್ಲ. ಬಿಜೆಪಿ ಕ್ಯಾಂಡಿಡೇಟ್ ಒಬ್ಬರೇ ಪಾಪ ಸುತ್ತು ಹಾಕುತ್ತಿದ್ದಾರೆ ಎಂದು ಸತೀಶ್ ಜಾರಕಿಹೊಳಿ ವ್ಯಂಗ್ಯವಾಡಿದರು.
ಓದಿ:ಡಿ.14ರ ನಂತರ ನನ್ನ-ಡಿಕೆಶಿ ಮಧ್ಯೆ ಬಹಿರಂಗ ವಾರ್ ಆಗಲಿ : ರಮೇಶ್ ಜಾರಕಿಹೊಳಿ