ಕರ್ನಾಟಕ

karnataka

ETV Bharat / state

ಸತೀಶ ಜಾರಕಿಹೊಳಿ ಉತ್ತರಾಧಿಕಾರಿ ಆಗ್ತಾರಾ ಪುತ್ರಿ ಪ್ರಿಯಾಂಕಾ.!? - ಸತೀಶ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ

ಯಮಕನಮರಡಿ ವಿಧಾನಸಭೆ ಕ್ಷೇತ್ರಕ್ಕೆ ನಡೆಯುವ ಉಪಚುನಾವಣೆಯಲ್ಲಿ ಸತೀಶ ಜಾರಕಿಹೊಳಿ ಉತ್ತರಾಧಿಕಾರಿ ಆಗಿ ಪ್ರಿಯಾಂಕಾ ಅವರೇ ಕಾಂಗ್ರೆಸ್ ಅಭ್ಯರ್ಥಿ ಆಗಿ ಕಣಕ್ಕಿಳಿಯಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಪ್ರಿಯಾಂಕಾ ಜಾರಕಿಹೊಳಿ ಸತೀಶ ಶುಗರ್ಸ್ ನಿರ್ದೇಶಕಿ ಆಗಿ ಹಾಗೂ ಸತೀಶ ಜಾರಕಿಹೊಳಿ ಫೌಂಡೇಶನ್ ಅಧ್ಯಕ್ಷೆ ಆಗಿಯೂ ಸಮಾಜ ಸೇವೆ ಮಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಪ್ರಿಯಂಕಾ ಜಾರಕಿಹೊಳಿ ತಂದೆ ಪ್ರತಿನಿಧಿಸುವ ಯಮಕನಮರಡಿ ಕ್ಷೇತ್ರದಲ್ಲಿ ಫುಲ್ ಆ್ಯಕ್ಟಿವ್ ಆಗಿ ಓಡಾಡುತ್ತಿದ್ದಾರೆ.

Satish Jarkiholi daughter Priyanka
ಸತೀಶ ಜಾರಕಿಹೊಳಿ ಉತ್ತರಾಧಿಕಾರಿ ಆಗ್ತಾರಾ ಪುತ್ರಿ ಪ್ರಿಯಾಂಕಾ.!?

By

Published : Apr 6, 2021, 4:27 PM IST

ಬೆಳಗಾವಿ: ರಾಜ್ಯ ರಾಜಕಾರಣದಲ್ಲಿ ಜಾರಕಿಹೊಳಿ ಕುಟುಂಬ ತನ್ನದೇ ಪ್ರಭಾವ ಹೊಂದಿದೆ. ಯಾವುದೇ ಸರ್ಕಾರ ಅಸ್ತಿತ್ವಕ್ಕೆ ಬಂದರೂ ಅಲ್ಲಿ ಜಾರಕಿಹೊಳಿ ಸಹೋದರರ ಪೈಕಿ ಓರ್ವ ಸದಸ್ಯ ಸಚಿವರಾಗಿರುತ್ತಾರೆ. ಅಷ್ಟರ ಮಟ್ಟಿಗೆ ರಾಜ್ಯ ರಾಜಕಾರಣದಲ್ಲಿ ಜಾರಕಿಹೊಳಿ ಕುಟುಂಬ ಹಿಡಿತ ಸಾಧಿಸಿದೆ. ಇದೀಗ ಜಾರಕಿಹೊಳಿ ಕುಟುಂಬದ ಎರಡನೇ ತಲೆಮಾರು ಕೂಡ ರಾಜಕೀಯ ಪ್ರವೇಶಕ್ಕೆ ತಾಲೀಮು ನಡೆಸುತ್ತಿದೆ. ಮಾಜಿ ಸಚಿವ ರಮೇಶ ಜಾರಕಿಹೊಳಿ ಪುತ್ರ ಅಮರನಾಥ ಈಗಾಗಲೇ ಕೆಎಂಎಫ್ ನಿರ್ದೇಶಕರಾಗಿದ್ದು, ರಾಜಕೀಯ ಪ್ರವೇಶಿಸಿದಂತಾಗಿದೆ. ಇನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಕೂಡಾ ರಾಜಕಾರಣದ ಬಗ್ಗೆ ಆಸಕ್ತಿ ಹೊಂದಿದ್ದು, ಜಿಲ್ಲೆಯಾದ್ಯಂತ ಸಕ್ರಿಯವಾಗಿ ಓಡಾಡುತ್ತಿದ್ದಾರೆ.

ಸುರೇಶ ಅಂಗಡಿ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭೆ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಕಾಂಗ್ರೆಸ್ ಅಭ್ಯರ್ಥಿ ಆಗಿ ಕಣಕ್ಕಿಳಿದಿದ್ದಾರೆ. ಎರಡು ಸಲ ಉಸ್ತುವಾರಿ ಸಚಿವರಾಗಿ ಸೇವೆ ಸಲ್ಲಿಸಿರುವ ಸತೀಶ ಜಾರಕಿಹೊಳಿ ಜಿಲ್ಲಾದ್ಯಂತ ತಮ್ಮದೇ ಆದ ಹಿಡಿತ ಹೊಂದಿದ್ದಾರೆ. ಪ್ರಚಾರಕ್ಕೆ ಹೋದ ಕಡೆಗಳಲ್ಲೆಲ್ಲ ಸತೀಶ ಜಾರಕಿಹೊಳಿಗೆ ಉತ್ತಮ ಜನ ಬೆಂಬಲವೂ ಸಿಗುತ್ತಿದೆ. ಉಪಚುನಾವಣೆಯಲ್ಲಿ ಒಂದು ವೇಳೆ ಸತೀಶ ಜಾರಕಿಹೊಳಿ ಗೆದ್ದು ಸಂಸತ್ ಪ್ರವೇಶಿಸಿದ್ರೆ ಅವರ ಉತ್ತರಾಧಿಕಾರಿ ಯಾರಾಗ್ತಾರೆ ಎಂಬ ಚರ್ಚೆಗಳು ನಡೆಯುತ್ತಿವೆ. ಯಮಕನಮರಡಿ ವಿಧಾನಸಭೆ ಕ್ಷೇತ್ರಕ್ಕೆ ನಡೆಯುವ ಉಪಚುನಾವಣೆಯಲ್ಲಿ ಸತೀಶ ಜಾರಕಿಹೊಳಿ ಉತ್ತರಾಧಿಕಾರಿ ಆಗಿ ಪ್ರಿಯಾಂಕಾ ಅವರೇ ಕಾಂಗ್ರೆಸ್ ಅಭ್ಯರ್ಥಿ ಆಗಿ ಕಣಕ್ಕಿಳಿಯಲಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ.

ಸತೀಶ ಜಾರಕಿಹೊಳಿ ಉತ್ತರಾಧಿಕಾರಿ ಆಗ್ತಾರಾ ಪುತ್ರಿ ಪ್ರಿಯಾಂಕಾ.!?

ತಂದೆಯಂತೆ ಪುತ್ರಿಯೂ ಫುಲ್ ಆ್ಯಕ್ಟಿವ್: ಎಂಬಿಎ ಪದವೀಧರೆ ಆಗಿರುವ ಪ್ರಿಯಾಂಕಾ ಜಾರಕಿಹೊಳಿ ಸತೀಶ ಶುಗರ್ಸ್ ನಿರ್ದೇಶಕಿ ಆಗಿ ಹಾಗೂ ಸತೀಶ ಜಾರಕಿಹೊಳಿ ಫೌಂಡೇಶನ್ ಅಧ್ಯಕ್ಷೆ ಆಗಿಯೂ ಸಮಾಜ ಸೇವೆ ಮಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಪ್ರಿಯಂಕಾ ಜಾರಕಿಹೊಳಿ ತಂದೆ ಪ್ರತಿನಿಧಿಸುವ ಯಮಕನಮರಡಿ ಕ್ಷೇತ್ರದಲ್ಲಿ ಫುಲ್ ಆ್ಯಕ್ಟಿವ್ ಆಗಿ ಓಡಾಡುತ್ತಿದ್ದಾರೆ. ಕ್ಷೇತ್ರದ ಜನರೊಂದಿಗೆ ಬೆರೆಯುತ್ತಿದ್ದಾರೆ. ಸಂಕಷ್ಟದಲ್ಲಿರುವ ಕ್ಷೇತ್ರದ ಮತದಾರರಿಗೆ ಪ್ರಿಯಾಂಕಾ ಜಾರಕಿಹೊಳಿ ಆರ್ಥಿಕ ನೆರವು ನೀಡುತ್ತಿದ್ದಾರೆ. ಆ ಮೂಲಕ ಯಮಕನಮರಡಿ ಕ್ಷೇತ್ರದಲ್ಲಿ ಪ್ರಿಯಾಂಕಾ ಜಾರಕಿಹೊಳಿ ಹಿಡಿತ ಸಾಧಿಸುತ್ತಿದ್ದಾರೆ. ಸಾಮ್ರಾಜ್ಯ ಉಳಿಸಿಕೊಂಡು ಹೋಗಲು ಮಕ್ಕಳು ಕೂಡ ರಾಜಕೀಯ ಪ್ರವೇಶಿಸಲಿದ್ದಾರೆ ಎಂದು ಸತೀಶ ಜಾರಕಿಹೊಳಿ ಕೂಡ ಹಲವು ಸಲ ಹೇಳಿದ್ದಾರೆ. ಈ ಕಾರಣಕ್ಕೆ ಪ್ರಿಯಾಂಕಾ ಕೂಡ ಸಕ್ರಿಯವಾಗಿ ಯಮಕನಮರಡಿ ಕ್ಷೇತ್ರದಲ್ಲಿ ಓಡಾಡುತ್ತಿದ್ದಾರೆ. ಪ್ರಿಯಾಂಕಾಗೆ ಸಹೋದರ ರಾಹುಲ್ ಕೂಡ ಸಾಥ್ ನೀಡುತ್ತಿದ್ದಾರೆ.

ಪ್ರಿಯಾಂಕಾ ಗೋಕಾಕಿನ ಸ್ಟಾರ್ ಪ್ರಚಾರಕಿ:ಲೋಕಸಭೆ ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಹಾಗೂ ತಂದೆ ಸತೀಶ ಜಾರಕಿಹೊಳಿ ಪರ ಪ್ರಿಯಾಂಕಾ ಭರ್ಜರಿ ಮತಬೇಟೆ ನಡೆಸುತ್ತಿದ್ದಾರೆ. ರಮೇಶ್ ಜಾರಕಿಹೊಳಿ ಪ್ರತಿನಿಧಿಸುವ ಗೋಕಾಕ್​ ವಿಧಾನಸಭೆ ಕ್ಷೇತ್ರದಲ್ಲಿ ಪ್ರಿಯಾಂಕಾ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಪ್ರತಿನಿಧಿಸುವ ಅರಬಾಂವಿ ಕ್ಷೇತ್ರದಲ್ಲಿ ರಾಹುಲ್ ಜಾರಕಿಹೊಳಿ ಸಂಚರಿಸಿ ಮತಬೇಟೆ ನಡೆಸುತ್ತಿದ್ದಾರೆ. ಗೋಕಾಕ್​​ ಹಾಗೂ ಅರಬಾಂವಿ ಕ್ಷೇತ್ರದ ಪ್ರಚಾರದ ಹೊಣೆಯನ್ನು ಸತೀಶ ಜಾರಕಿಹೊಳಿ ಮಕ್ಕಳಿಗೆ ನೀಡಿದ್ದಾರೆ. ಉಳಿದ ಬೆಳಗಾವಿ, ಬೈಲಹೊಂಗಲ, ಸವದತ್ತಿ, ರಾಮದುರ್ಗದಲ್ಲಿ ಸತೀಶ ಜಾರಕಿಹೊಳಿ ಪ್ರಚಾರ ಮಾಡುತ್ತಿದ್ದಾರೆ.

ಸತೀಶ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ

ಪುತ್ರಿಗೆ ಟಿಕೆಟ್ ನೀಡಿದ್ರೆ ಮಾತ್ರ ಸ್ಪರ್ಧೆ?: ಲೋಕಸಭೆ ಉಪಚುನಾವಣೆ ಸ್ಪರ್ಧೆಗೆ ಸತೀಶ ಜಾರಕಿಹೊಳಿ ಹಿಂದೇಟು ಹಾಕುತ್ತಿದ್ದರು. ಹೈಕಮಾಂಡ್ ನಿರ್ದೇಶನಕ್ಕೆ ತಲೆ ಭಾಗಿ ಸತೀಶ ಜಾರಕಿಹೊಳಿ ಕಾಂಗ್ರೆಸ್ ಅಭ್ಯರ್ಥಿ ಆಗಿ ಕಣಕ್ಕಿಳಿದಿದ್ದಾರೆ. ಈ ಸಂಬಂಧ ಹೈಕಮಾಂಡ್ ಜೊತೆಗೆ ಮಾತುಕತೆ ನಡೆಸಿರುವ ಸತೀಶ ಜಾರಕಿಹೊಳಿ ಲೋಕಸಭೆ ಉಪಚುನಾವಣೆಯಲ್ಲಿ ನಾನು ಗೆದ್ದರೆ ನಂತರ ಯಮಕನಮರಡಿ ಕ್ಷೇತ್ರಕ್ಕೆ ನಡೆಯುವ ಉಪಚುನಾವಣೆಯಲ್ಲಿ ಪುತ್ರಿ ಪ್ರಿಯಾಂಕಾಗೆ ಕಾಂಗ್ರೆಸ್ ಟಿಕೆಟ್ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು ಎಂದು ಹೇಳಲಾಗ್ತಿದೆ. ಇದಕ್ಕೆ ಹೈಕಮಾಂಡ್‍ನಿಂದಲೂ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ ಎನ್ನುತ್ತಿವೆ ಕಾಂಗ್ರೆಸ್ ಮೂಲಗಳು.

ABOUT THE AUTHOR

...view details